
ಬೆಂಗಳೂರು : ಶಿಕ್ಷಕರ ಕೊರತೆ ನೀಗಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಸೇರಿದಂತೆ ಒಟ್ಟಾರೆ 25,600 ಅತಿಥಿ ಶಿಕ್ಷಕರ ನೇಮಕಕ್ಕೆ ಆದೇಶ ಹೊರಡಿಸಿದೆ.
12,500 ಪ್ರಾಥಮಿಕ ಮತ್ತು 3,100 ಪ್ರೌಢಶಾಲೆ ಶಿಕ್ಷಕರು ಮತ್ತು ಈಗಾಗಲೇ ನಿರ್ಧರಿಸಿರುವ 10 ಸಾವಿರ ಪದವೀಧರರು ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕವಾಗುವವರೆಗೂ ಅತಿಥಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಪೈಕಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇರ ನೇಮಕಾತಿ ನಡೆದು ಶಾಲೆಗೆ ವರದಿ ಮಾಡಿಕೊಳ್ಳುವವರೆಗೆ ಮಾತ್ರ 10 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಆ ಶಿಕ್ಷಕರು ವರದಿ ಮಾಡಿಕೊಂಡ ನಂತರ ತಾನಾಗಿಯೇ ಅತಿಥಿ ಶಿಕ್ಷಕರ ನೇಮಕಾತಿ ರದ್ದಾಗಲಿದೆ ಎಂದು ಶಿಕ್ಷಣ ಇಲಾಖೆಯು ಸ್ಪಷ್ಟಪಡಿಸಿದೆ.
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಅನುಪಾತ ಎಲ್ಲ ಜಿಲ್ಲೆಗಳಲ್ಲಿ ಒಂದೇ ಸಮಾನವಾಗಿ ಇಲ್ಲ. ಕೆಲವು ಜಿಲ್ಲೆಗಳಲ್ಲಿ ಹೆಚ್ಚುವರಿ ಶಿಕ್ಷಕರು ಇರುವುದರಿಂದ ಶಿಕ್ಷಕರನ್ನು ಮರು ಹಂಚಿಕೆ ಮಾಡಲು ತುರ್ತಾಗಿ ಕ್ರಮ ಕೈಗೊಳ್ಳಬೇಕು. ಶಿಕ್ಷಕರ ನೇಮಕಾತಿ ಹಾಗೂ ಶಾಲಾವಾರು ಹಂಚಿಕೆ ಬಗೆಗಿನ ನೀತಿಗಳನ್ನು ಇಲಾಖೆ ಸುಧಾರಿಸಬೇಕು ಎಂಬ ಷರತ್ತುಗಳನ್ನು ವಿಧಿಸಿದೆ.
ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ಗೌರವ ಧನ ಮಾಸಿಕ 7,500 ರು. ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ 8000 ರು. ನಿಗದಿ ಪಡಿಸಿದೆ. ನಿಗದಿಪಡಿಸುವ ವಿದ್ಯಾರ್ಹತೆಯನ್ನು ಪರಿಶೀಲಿಸಿ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಬೇಕು. ಕೊರತೆ ಇರುವ ಶಾಲೆಗಳಿಗೆ ಹೆಚ್ಚುವರಿ ಇರುವ ಶಾಲೆಗಳಿಂದ ಶಿಕ್ಷಕರನ್ನು ಕೂಡಲೇ ಮರು ನಿಯೋಜಿಸಲಾಗುವುದು ಎಂದು ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.