ಜಿಎಸ್'ಟಿ ಎಂದರೆ 'ಒಂದು ರಾಷ್ಟ್ರ, ಒಂದು ಆಕಾಂಕ್ಷೆ, ಒಂದು ಬದ್ಧತೆ' - ಮೋದಿ

By Suvarna Web DeskFirst Published Apr 23, 2017, 10:45 AM IST
Highlights

ಜಿಎಸ್'ಟಿಗೋಸ್ಕರ ವೈಚಾರಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದು ವೇದಿಕೆಗೆ ಆಗಮಿಸುತ್ತಿರುವ ದೇಶದ ಎಲ್ಲ ಮುಖ್ಯಮಂತ್ರಿಗಳಿಗೂ ಇದರ ಶ್ರೇಯಸ್ಸು ಹೋಗಬೇಕು ಎಂದು ಹೇಳಿದ ಮೋದಿ, ಜಿಎಸ್'ಟಿಯನ್ನು 'ಒಂದು ರಾಷ್ಟ್ರ, ಒಂದು ಆಕಾಂಕ್ಷೆ, ಒಂದು ಬದ್ಧತೆ'ಗೆ ಹೋಲಿಕೆ ಮಾಡಿದ್ದಾರೆ.

ನವದೆಹಲಿ(ಏ. 23): ಸ್ವತಂತ್ರ ಭಾರತದಲ್ಲಿ ರೂಪಿತವಾದ ಕ್ರಾಂತಿಕಾರಿಕ ನೀತಿಗಳಲ್ಲೊಂದೆನಿಸಿರುವ ಜಿಎಸ್'ಟಿ ತೆರಿಗೆ ಪದ್ಥತಿಯ ಸಾಕಾರ ಸಾಧ್ಯವಾಗಿಸಿದ ಪ್ರತಿಪಕ್ಷಗಳಿಗೆ ಪ್ರಧಾನಿ ಮೋದಿ ಇಂದು ಅಭಿನಂದನೆ ಹೇಳಿದ್ದಾರೆ. "ಜಿಎಸ್'ಟಿ ಮೇಲಿನ ಸಹಮತವು ಸಹಕಾರ ವ್ಯವಸ್ಥೆಯ ಶ್ರೇಷ್ಠ ಉದಾಹರಣೆಯಾಗಿ ಇತಿಹಾಸ ಪುಟದಲ್ಲಿ ನಮೂದಾಗಲಿದೆ" ಎಂದು ಮೋದಿ ಹೇಳಿದ್ದಾರೆ. ಇಂದು ಭಾನುವಾರ ಆಯೋಜಿಸಲಾಗಿದ್ದ ನೀತಿ ಆಯೋಗದ ಆಡಳಿತ ಮಂಡಳಿಯ ಮೂರನೇ ಸಭೆಯ ಅಧ್ಯಕ್ಷ ವಹಿಸಿ ಮಾತನಾಡುತ್ತಿದ್ದ ಮೋದಿ, ಎಲ್ಲಾ ರಾಜ್ಯಗಳು ಹಾಗೂ ಮುಖ್ಯಮಂತ್ರಿಗಳ ಸಂಘಟಿತ ಯತ್ನದ ಮೂಲಕ ಮಾತ್ರ ನವಭಾರತದ ಕನಸನ್ನು ನನಸು ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಿಎಸ್'ಟಿಗೋಸ್ಕರ ವೈಚಾರಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದು ವೇದಿಕೆಗೆ ಆಗಮಿಸುತ್ತಿರುವ ದೇಶದ ಎಲ್ಲ ಮುಖ್ಯಮಂತ್ರಿಗಳಿಗೂ ಇದರ ಶ್ರೇಯಸ್ಸು ಹೋಗಬೇಕು ಎಂದು ಹೇಳಿದ ಮೋದಿ, ಜಿಎಸ್'ಟಿಯನ್ನು 'ಒಂದು ರಾಷ್ಟ್ರ, ಒಂದು ಆಕಾಂಕ್ಷೆ, ಒಂದು ಬದ್ಧತೆ'ಗೆ ಹೋಲಿಕೆ ಮಾಡಿದ್ದಾರೆ.

ಇದೇ ವೇಳೆ, ನೀತಿ ಆಯೋಗ್'ನ ಉಪಾಧ್ಯಕ್ಷ ಅರವಿಂದ್ ಪನಗರಿಯಾ ಅವರು ರಾಷ್ಟ್ರ ಪರಿವರ್ತನೆಯ 15 ವರ್ಷದ ಪಥವನ್ನು ಪ್ರಸ್ತುತಪಡಿಸಿದ್ದಾರೆ. ಮುಂದಿನ 3 ವರ್ಷಗಳ ಕಾರ್ಯಯೋಜನೆ, ಮುಂದಿನ 7 ವರ್ಷಗಳ ಕಾರ್ಯತಂತ್ರ ದಾಖಲೆ ಸೇರಿದಂತೆ 15 ವರ್ಷದ ವಿಶನ್ ಡಾಕ್ಯುಮೆಂಟ್'ನ ಪ್ರಮುಖ ಅಂಶಗಳನ್ನು ಅರವಿಂದ್ ಅವರು ಇಲ್ಲಿ ವಿವರಿಸಿದ್ದಾರೆ. ಸಿದ್ದರಾಮಯ್ಯ ಸೇರಿದಂತೆ ದೇಶದ ಬಹುತೇಕ ಮುಖ್ಯಮಂತ್ರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

ಏನಿದು ಜಿಎಸ್'ಟಿ?
ಗೂಡ್ಸ್ ಆ್ಯಂಡ್ ಸರ್ವಿಸಸ್ ಟ್ಯಾಕ್ಸ್ ಎಂದು ಕರೆಯಲಾಗುವ ಜಿಎಸ್'ಟಿ ಒಂದು ಪರೋಕ್ಷ ತೆರಿಗೆ ವ್ಯವಸ್ಥೆಯಾಗಿದೆ. ಸೆಂಟ್ರಲ್ ಎಕ್ಸೈಸ್, ಸರ್ವಿಸ್ ಟ್ಯಾಕ್ಸ್, ವ್ಯಾಟ್, ಸ್ಥಳೀಯ ತೆರಿಗೆ ಇತ್ಯಾದಿಗಳನ್ನು ಕಿತ್ತುಹಾಕಿ ಏಕರೂಪದ ತೆರಿಗೆ ವಿಧಿಸುವ ವ್ಯವಸ್ಥೆ ಇದಾಗಿದೆ. ಇದೇ ಜುಲೈ 1ರಿಂದ ಜಿಎಸ್'ಟಿ ತೆರಿಗೆ ವ್ಯವಸ್ಥೆ ಜಾರಿಗೆ ಬರಲಿದೆ.

click me!