
ರಾಜ್ಯದಲ್ಲಿ ಜಿಎಸ್‌ಟಿ ಜಾರಿಯಿಂದ ₹600 ಕೋಟಿ ವಾಣಿಜ್ಯ ತೆರಿಗೆ ಕೊರತೆಯಾಗಿದ್ದು, ರಿಟರ್ನ್ ಸಲ್ಲಿಕೆ ತಾಂತ್ರಿಕ ತೊಂದರೆ ಮತ್ತು ಸ್ಪಂದನೆ ಸಮಸ್ಯೆಯಿಂದ ತೆರಿಗೆ ಸಂಗ್ರಹ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ.
ಜಿಎಸ್‌ಟಿ ಜಾರಿಯಿಂದ ರಾಜ್ಯದಲ್ಲಿ ಸುಮಾರು ₹400 ಕೋಟಿ ಹೆಚ್ಚುವರಿ ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇತ್ತು. ಆದರೆ ವ್ಯಾಪಾರಿಗಳು ಜಿಎಸ್‌ಟಿ ಪೋರ್ಟಲ್ ಗೊಂದಲ ಮತ್ತು ಅವ್ಯವಸ್ಥೆಯಿಂದ ಸಕಾಲಕ್ಕೆ ತೆರಿಗೆ ರಿಟರ್ನ್ ಸಲ್ಲಿಸಲಾಗಿಲ್ಲ. ಹೀಗಾಗಿ ಜಿಎಸ್‌ಟಿ ನೋಂದಣಿ ಮಾಡಿಕೊಂಡಿರುವ 4.65 ಲಕ್ಷ ವ್ಯಾಪಾರಿಗಳಲ್ಲಿ 3.50 ಲಕ್ಷ ಮಂದಿ ಮಾತ್ರ ಆರಂಭಿಕ ಜುಲೈ ತಿಂಗಳ ರಿಟರ್ನ್ ಸಲ್ಲಿಸಿದ್ದಾರೆ.
ಅಂದರೆ ಆಗಸ್ಟ್ ಅಂತ್ಯದವರೆಗೂ ಸಲ್ಲಿಕೆಯಾದ ರಿಟರ್ನ್‌ಗಳಿಂದ ರಾಜ್ಯದ ಖಜಾನೆ ಸೇರುವ ತೆರಿಗೆ (ಎಸ್‌ಜಿಎಸ್‌ಟಿ ₹2100 ಕೋಟಿ, ಐಜಿಎಸ್‌ಟಿ ₹600 ಕೋಟಿ) ₹2700 ಕೋಟಿ ಮಾತ್ರ. ಇದು ನಿರೀಕ್ಷಿತ ಪ್ರಮಾಣಕ್ಕಿಂತ ₹1000 ಕೋಟಿ ಕಡಿಮೆ.
ಹಿಂದಿನ ವ್ಯಾಟ್ ಪದ್ಥತಿಗೆ ಹೋಲಿಸಿದರೆ ₹600 ಕೋಟಿ ಕುಸಿತ. ವ್ಯಾಟ್ ಇದ್ದಾಗ ತಿಂಗಳಿಗೆ ₹3300 ಕೋಟಿವರೆಗೂ ತೆರಿಗೆ ಸಂಗ್ರಹವಾಗುತ್ತಿತ್ತು. ಜಿಎಸ್‌ಟಿ ನಂತರ ಬರೀ ₹2700 ಕೋಟಿಗೆ ಸೀಮಿತವಾಗಿದೆ. ಅಂದರೆ ₹600 ಕೋಟಿ ಖೋತಾ ಆಗಿದೆ. ಇದನ್ನು ನಿಯಮದಂತೆ ಕೇಂದ್ರ ಭರಿಸಬೇಕಾಗಿದೆ ಎನ್ನುತ್ತಾರೆ ವಾಣಿಜ್ಯ ತೆರಿಗೆ ಅಧಿಕಾರಿಗಳು.
ವ್ಯಾಪಾರಿಗಳು, ಉದ್ಯಮಿಗಳು ಗ್ರಾಹಕರಿಂದ ತೆರಿಗೆ ಸಂಗ್ರಹಿಸಿಕೊಡಲು ಸೂಕ್ತ ವ್ಯವಸ್ಥೆ ಇರಬೇಕು. ಆದರೆ ಈಗ ಪೋರ್ಟಲ್ ಗೊಂದಲ ಮತ್ತು ಇತರ ತಾಂತ್ರಿಕ ಸಮಸ್ಯೆಯಿಂದ ವ್ಯಾಪಾರಿಗಳು ದಂಡ, ಬಡ್ಡಿ ಹೊರೆ ಅನುಭವಿಸುವಂತಾಗಿದೆ. ಸರ್ಕಾರ ಮೊದಲು ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿ ನಂತರ ದಂಡ ವಿಧಿಸಿದರೆ ಹೆಚ್ಚಿನ ತೆರಿಗೆ ನಿರೀಕ್ಷಿಸಬಹುದು.
ಬಿ.ಟಿ.ಮನೋಹರ್, ರಾಜ್ಯ ಜಿಎಸ್‌ಟಿ ಸಮಿತಿ ಸಂಚಾಲಕ (ತೆರಿಗೆ ತಜ್ಞ)
ಸಮಸ್ಯೆ ಆಗುತ್ತಿರುವುದೆಲ್ಲಿ?: ಜಿಎಸ್‌ಟಿಯಲ್ಲಿರುವ ವ್ಯಾಪಾರಿಗಳು, ವರ್ತಕರು, ಉದ್ಯಮಿಗಳು ಪ್ರತಿ ತಿಂಗಳು 20 ಒಳಗಾಗಿ ಜಿಎಸ್‌ಟಿ ರಿಟರ್ನ್ ಸಲ್ಲಿಸಬೇಕು. 15ನೇ ತಾರೀಖಿನ ಒಳಗೆ ರಿಟರ್ನ್ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬೇಕು. 20ನೇ ತಾರೀಖಿನ ವೇಳೆಗೆ ಸರ್ಕಾರದ ಲೆಕ್ಕಕ್ಕೆ ಹಣ ಜಮಾ ಆಗಿರುವಂತೆ ಪ್ರಕ್ರಿಯೆ ಮುಗಿಸಬೇಕು. ಇಲ್ಲವಾದರೆ, ದಿನಕ್ಕೆ ₹100 ಮತ್ತು ಶೇ.15ರ ವರೆಗೂ ಬಡ್ಡಿ ಪಾವತಿಸಬೇಕು. ಆದರೆ ಬಹುತೇಕ ವ್ಯಾಪಾರಿಗಳು ಮಾರಾಟ ತೆರಿಗೆ ಸಂಗ್ರಹ ತಡವಾಗುವ ಕಾರಣ 10ನೇ ತಾರೀಖಿನ ಒಳಗೆ ರಿಟರ್ನ್ ಸಲ್ಲಿಸಲಾಗುತ್ತಿಲ್ಲ. ಅನೇಕ ಕಡೆ ವ್ಯಾಪಾರಿಗಳು ಸಾಲ ವ್ಯವಹಾರ ನಡೆಸುವ ಕಾರಣ ಅದನ್ನು ರಿಟರ್ನ್‌ನಲ್ಲಿ ತೋರಿಸಲಾಗುತ್ತಿಲ್ಲ. ಬದಲಾಗಿ ಗ್ರಾಹಕರಿಂದ ಸಂಗ್ರಹ ಆಗಿದೆ ಎಂದು ತಾವೇ ಪಾವತಿಸಬೇಕಿದೆ.
ತಾಂತ್ರಿಕ ಸಮಸ್ಯೆಗಳೇನು?: ಇನ್ನು ವ್ಯಾಪಾರಿಗಳು ತೆರಿಗೆ ಸಲಹೆಗಾರರ (ಸಿಎ) ಮೂಲಕ ಆರ್3ಬಿ ನಮೂನೆಯ ರಿಟರ್ನ್ ಸಲ್ಲಿಸಲು ಸಿದ್ಧವಿದ್ದರೂ ಜಿಎಸ್‌ಟಿ ಪೂರ್ಟಲ್ ಸರ್ವರ್ ತೊಂದರೆ ಮತ್ತು ಅಪ್‌ಲೋಡ್ ಸಮಸ್ಯೆಗಳಿಂದ ಸಕಾಲಕ್ಕೆ ರಿಟರ್ನ್ ಸಲ್ಲಿಸಲಾಗುತ್ತಿಲ್ಲ. ಜವಳಿ ಮತ್ತು ಉಡುಪು ಸಂಬಂಧಿ ಸರಕುಗಳ ತೆರಿಗೆ ಪ್ರಮಾಣ ಇನ್ನೂ ಗೊಂದಲವಿದೆ. ಬ್ರ್ಯಾಂಡ್ ಮತ್ತು ಬ್ರ್ಯಾಂಡ್‌ರಹಿತ ಸರಕುಗಳ ತೆರಿಗೆಯೂ ಅಸ್ಪಷ್ಟವಾಗಿದೆ. ಇದೆಲ್ಲವೂ ರಿಟರ್ನ್ ಸಲ್ಲಿಕೆ ವೇಳೆ ತಲೆನೋವು ತಂದಿದೆ. ಇಂಥ ಸಮಸ್ಯೆ ನಿವಾರಿಸಲು ಸದ್ಯ ಇರುವ ಸಹಾಯವಾಣಿಗಳಿಂದ ಆಗುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ ಜಿಎಸ್‌ಟಿ ತೊಂದರೆ ನಿವಾರಿಸಲು ತಜ್ಞರ, ಅಧಿಕಾರಸ್ಥರ ವೇದಿಕೆ ಇಲ್ಲ. ಜಿಎಸ್‌ಟಿ ಮಂಡಳಿಯಲ್ಲಿರುವ ರಾಜ್ಯದ ಪ್ರತಿನಿಧಿ ಎಂದರೆ ಅದು ಸಚಿವ ಕೃಷ್ಣಭೈರೇಗೌಡ ಹಾಗೂ ವಾಣಿಜ್ಯ ತೆರಿಗೆ ಆಯುಕ್ತರು ಮಾತ್ರ. ಇವರು ರಾಜ್ಯದಲ್ಲಿ ತಲೆದೋರುವ ಸಮಸ್ಯೆಗಳನ್ನು ಮಂಡಳಿ ಸಭೆ ಗಮನಕ್ಕೆ ತರಬಹುದು. ಉಳಿದಂತೆ ಜಿಎಸ್‌ಟಿ ವಿಚಾರದಲ್ಲಿ ಇವರು ಏನೂ ಮಾಡುವಂತಿಲ್ಲ. ರಾಜ್ಯಕ್ಕೆ ಹೆಚ್ಚಿನ ಅಧಿಕಾರವೂ ಇಲ್ಲ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.