
ಬೆಂಗಳೂರು : ಕೇಂದ್ರ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ ( ಜಿಎಸ್‌ಟಿ ) ಜಾರಿಯಾಗಿ ಭಾನುವಾರಕ್ಕೆ 9 ದಿನ ಪೂರೈಸಿದೆ. ಜಿಎಸ್‌ಟಿ ತೆರಿಗೆ ಪರಿಣಾಮ ಹೋಟೆಲ್ ಉದ್ಯಮಕ್ಕೆ ಹೊಡೆತ ಬಿದ್ದಿದ್ದು, ತಾವು ಪ್ರತಿ ನಿತ್ಯ ನಷ್ಟ ಅನುಭವಿಸುತ್ತಿದ್ದಾರೆ ಎಂಬ ಕೂಗು ಹೋಟೆಲ್ ಮಾಲೀಕರಿಂದ ಕೇಳಿಬರತೊಡಗಿದೆ.
ವಿಶೇಷವಾಗಿ ಮಧ್ಯಮ ವರ್ಗದ ಹೋಟೆಲ್‌ಗಳಲ್ಲಿ ಗ್ರಾಹಕರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿರುವುದು ಮಾಲೀಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಹೋಟೆಲ್ ಉದ್ಯಮವನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ. ದರ್ಶಿನಿ ಸೇರಿದಂತೆ ಸಣ್ಣ ಪ್ರಮಾಣದ ಹೋಟೆಲ್‌ಗಳಿಗೆ ಶೇ.5ರಷ್ಟು, ಮಧ್ಯ ವರ್ಗದ ಹೋಟೆಲ್‌ಗಳಿಗೆ ಶೇ.12, ಹವಾನಿಯಂತ್ರಿತ ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳಿಗೆ ಶೇ.18ರಷ್ಟು ಹಾಗೂ ಸ್ಟಾರ್ ಹೋಟೆಲ್‌ಗಳಿಗೆ ಶೇ.28ರಷ್ಟು ಜಿಎಸ್‌ಟಿ ವಿಧಿಸಲಾಗಿದೆ.
ಹೋಟೆಲ್ ಮಾಲೀಕರು ಗ್ರಾಹಕರಿಂದ ತೆರಿಗೆ ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸಬೇಕು. ಇದು ಹೋಟೆಲ್ ಮಾಲೀಕರಿಗೆ ತಲೆ ನೋವಾಗಿದ್ದು, ಗ್ರಾಹಕರನ್ನು ಕಳೆದುಕೊಳ್ಳುವ ಸ್ಥಿತಿಗೆ ತಲುಪಿದೆ.
ನಗರದ ಹೋಟೆಲ್‌ಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಜಿಎಸ್‌ಟಿ ಅಳವಡಿಸಿಕೊಂಡಿಲ್ಲ. ಅಳವಡಿಕೆಗೆ ಎರಡು ತಿಂಗಳು ಕಾಲಾವಕಾಶವಿರುವುದರಿಂದ ಕೆಲವರು ಎಂದಿನಂತೆ ವ್ಯವಹಾರ ನಡೆಸುತ್ತಿದ್ದಾರೆ. ಆದರೆ, ಜಿಎಸ್‌ಟಿ ಕಡ್ಡಾಯಗೊಳಿಸಿರುವುದರಿಂದ ನಿಗದಿತ ಅವಧಿಯಲ್ಲಿ ಎಲ್ಲ ವರ್ಗದ ಹೋಟೆಲ್‌ಗಳು ಜಿಎಸ್‌ಟಿ ಅಳವಡಿಕೊಳ್ಳುವುದು ಅನಿವಾರ್ಯ. ಅಳವಡಿಸಿಕೊಂಡಿರುವ ಹೋಟೆಲ್‌ಗಳು ನಷ್ಟ ಅನುಭವಿಸುತ್ತಿರುವುದರಿಂದ ಇತರೆ ಹೋಟೆಲ್ ಮಾಲೀಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಜಿಎಸ್‌ಟಿಯಿಂದ ಹೋಟೆಲ್ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದೆ. ಪ್ರಮುಖವಾಗಿ ಮಧ್ಯಮ ವರ್ಗದ ಹೋಟೆಲ್‌ಗಳಿಗೆ ಭಾರಿ ಹೊಡೆತ ಬಿದ್ದಿದೆ. ಜಿಎಸ್‌ಟಿ ಪ್ರಮಾಣ ಹೆಚ್ಚಾಗಿರುವುದರಿಂದ ಗ್ರಾಹಕರು ಹೋಟೆಲ್‌ಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಹೋಟೆಲ್ ಮಾಲೀಕರಿಗೆ ನಷ್ಟ ಉಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ. ಹಾಗಾಗಿ ಕೂಡಲೇ ಕೇಂದ್ರ ಸರ್ಕಾರ ಇತ್ತ ಗಮನಹರಿಸಬೇಕು.
- ರಾಜೀವ್ ಶೆಟ್ಟಿ, ಉಪಾಧ್ಯಕ್ಷ, ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘ
ಲಾಭವಿಲ್ಲದೆ ಹೋಟೆಲ್ ನಡೆಸುವುದಾದರೂ ಹೇಗೆ? ನಾಲ್ಕು ಕಾಸು ಸಂಪಾದನೆ ಮಾಡುವ ಉದ್ದೇಶದಿಂದ ಹೋಟೆಲ್ ತೆರೆದಿದ್ದೇವೆ. ಇದೀಗ ಜಿಎಸ್‌ಟಿಯಿಂದ ಗ್ರಾಹಕರಿಗೆ ಹೊರೆಯಾಗಿರುವುದರಿಂದ ಹೋಟೆಲ್‌ಗೆ ಬರುವವರ ಸಂಖ್ಯೆ ಕ್ಷೀಣಿಸಿದೆ. ಗ್ರಾಹಕರೇ ಬಾರದಿದ್ದರೆ ಹೋಟೆಲ್ ಮುನ್ನಡೆಸುವುದು ಕಷ್ಟ. ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿ ಕೈ ಸುಟ್ಟಿಕೊಳ್ಳುವುದಕ್ಕಿಂತ ಹೋಟೆಲ್ ಮುಚ್ಚವುದೇ ಸೂಕ್ತ ಎಂದು ಮುನೇಶ್ವರ ಬಡಾವಣೆಯ ಚನ್ನವೀರ ಹೋಟೆಲ್‌ನ ಮಾಲೀಕ ಮಂಜನಾಥ್ ಅಭಿಪ್ರಾಯಪಟ್ಟರು.
ಜಿಎಸ್‌ಟಿಯಿಂದ ಕೆಲ ಸರಕುಗಳ ದರದಲ್ಲೂ ಏರಿಕೆಯಾಗಿರುವುದರಿಂದ ಕೆಲ ಹೋಟೆಲ್‌ಗಳಲ್ಲಿ ತಿಂಡಿ- ಊಟದ ದರವನ್ನೂ ಹೆಚ್ಚಿಸಲಾಗಿದೆ. ಇತ್ತ ಜಿಎಸ್‌ಟಿ ಅದರ ಜತೆಗೆ ತಿಂಡಿ-ಊಟದ ದರ ಹೆಚ್ಚಳದಿಂದ ಗ್ರಾಹಕರಿಗೆ ಹೊರೆಯಾಗುತ್ತಿರುವುದರಿಂದ ಗ್ರಾಹಕರು ಹೋಟೆಲ್‌ಗಳಿಗೆ ಬರುವುದು ಕಡಿಮೆಯಾಗುತ್ತಿದೆ. ಗ್ರಾಹಕರನ್ನು ಕಳೆದುಕೊಳ್ಳಬಾರದು ಎಂಬ ಉದ್ದೇಶದಿಂದ ಜಿಎಸ್‌ಟಿ ಅನ್ವಯಿಸಿದರೂ ತಿಂಡಿ-ಊಟಕ್ಕೆ ಗ್ರಾಹಕರಿಂದ ಈ ಹಿಂದಿನ ದರವನ್ನು ಪಡೆಯುತ್ತಿದ್ದೇವೆ. ಈ ಮೂಲಕ ಗ್ರಾಹಕರ ಮೇಲಿನ ಹೊರೆಯನ್ನು ತಪ್ಪಿಸುತ್ತಿದ್ದೇವೆ. ಇದರಿಂದ ನಿತ್ಯ ₹18 ಸಾವಿರ ನಷ್ಟವಾಗುತ್ತಿದೆ. ಈ ರೀತಿ ಹೆಚ್ಚು ಕಾಲ ಹೋಟೆಲ್ ನಡೆಸುವುದು ಕಷ್ಟ. ಸಮಸ್ಯೆಗೆ ಪರಿಹಾರ ಕಂಡು ಹಿಡಿಯದಿದ್ದಲ್ಲಿ ಹೋಟೆಲ್ ಮುಚ್ಚುವುದು ಅನಿವಾರ್ಯವಾಗುತ್ತದೆ ಎಂದು ಮಾಧವ ನಗರದ ಸೌತ್ ರುಚಿ ಸ್ಕ್ವೇರ್ ಹೋಟೆಲ್‌ನ ವ್ಯವಸ್ಥಾಪಕ ವೆಂಕಟೇಶ್ ತಿಳಿಸುತ್ತಾರೆ.
ಸಿರಿಧಾನ್ಯಗಳಿಂದ ತಯಾರಿಸಿದ ಎರಡು ಊಟ ಆರ್ಡರ್ ಮಾಡಿದ್ದೆವು. ಒಂದು ಊಟಕ್ಕೆ ₹211.86 ರಂತೆ ಎರಡಕ್ಕೆ ₹ 423.72 ಬಿಲ್ ಬಂದಿದೆ. ಶೇ.18ರ ಜಿಎಸ್‌ಟಿ ಸೇರಿ ₹500 ಪಾವತಿಸಿದ್ದೇವೆ. ಎರಡು ಊಟಕ್ಕೆ ₹76 ತೆರಿಗೆ ಪಾವತಿಸಿದ್ದೇವೆ. ಇದು ಯಾವ ಸೀಮೆ ತೆರಿಗೆ ? ಇಷ್ಟೊಂದು ಪ್ರಮಾಣದ ತೆರಿಗೆ ವಿಧಿಸಿದರೆ ಗ್ರಾಹಕರು ಎಲ್ಲಿಂದ ಕಟ್ಟಬೇಕು. ಕೇಂದ್ರ ಸರ್ಕಾರ ಕೂಡಲೇ ತೆರಿಗೆ ಪ್ರಮಾಣ ಕಡಿಮೆ ಮಾಡಬೇಕು.
- ಪ್ರಭಾಕರ್, ಗ್ರಾಹಕ
ಗ್ರಾಹಕರಿಗೂ ಹೊಡೆತ
ಪ್ರಸ್ತುತ ತರಕಾರಿ ಬೆಲೆಗಳು ಗಗನಕ್ಕೇರಿದೆ. ಟೊಮ್ಯಾಟೋ ಕೆ.ಜಿ.ಗೆ ₹80, ಕ್ಯಾರೇಟ್ ಹಾಗೂ ಬೀನ್ಸ್ ಕೆ.ಜಿ.ಗೆ 75 ಮುಟ್ಟಿದೆ. ಇನ್ನು ಕೆಲ ಸರಕುಗಳ ದರ ಏರಿಕೆಯಾಗಿದೆ. ವಾಸ್ತವ ಹೀಗಿರುವಾಗ ತಿಂಡಿ-ಊಟದ ದರ ಕೊಂಚ ಏರಿಕೆ ಮಾಡುವುದು ಅನಿವಾರ್ಯ ಎಂಬ ವಾದ ಕೇಳಿಬರುತ್ತಿದೆ.
ಇದರ ಜತೆಗೆ ಜಿಎಸ್‌ಟಿ. ಇದು ಗ್ರಾಹಕರ ಮೇಲೆ ನೇರ ಪರಿಣಾಮ ಬೀರುತ್ತದೆ. ಯಾವುದೇ ಕ್ಷೇತ್ರದಲ್ಲಿ ಮಾಲೀಕ ನಷ್ಟ ಮಾಡಿಕೊಂಡು ಉದ್ಯಮ ನಡೆಸಲು ಇಷ್ಟಪಡುವುದಿಲ್ಲ. ಹೋಟೆಲ್‌ಗಳಲ್ಲೂ ಮಾಲೀಕರು ಗ್ರಾಹಕರ ಜತೆಗೆ ದರದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಜಿಎಸ್‌ಟಿ ಜಾರಿಯಾಗಿ ಇಂದಿಗೆ ಒಂಬತ್ತು ದಿನ ಕಳೆದಿದೆ. ಈಗಲೇ ಲಾಭ-ನಷ್ಟ ಖಚಿತ ಮಾಹಿತಿ ನೀಡಲಾಗದು. ಮಾಸಾಂತ್ಯದ ಲೆಕ್ಕಚಾರದ ವೇಳೆ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ ಎಂದು ಚಾಮರಾಜಪೇಟೆಯ ನೆನಪು ದರ್ಶಿನಿ ಹೋಟೆಲ್ ಮಾಲೀಕ ರಾಮಚಂದ್ರ ಹೇಳುತ್ತಾರೆ.
ವ್ಯವಹಾರ ಇಳಿಕೆ
ಜಿಎಸ್‌ಟಿ ಜಾರಿಯಾದಾಗಿನಿಂದ ಹೋಟೆಲ್‌ಗೆ ಗ್ರಾಹಕರು ಕಡಿಮೆಯಾಗಿದ್ದಾರೆ. ಈ ಹಿಂದೆ ದಿನಕ್ಕೆ ₹ 40ರಿಂದ ₹ 50 ಸಾವಿರ ವ್ಯವಹಾರ ನಡೆಯುತ್ತಿತ್ತು. ಕಳೆದ ಒಂದು ವಾರದಿಂದ ₹25ರಿಂದ ₹ 30 ಸಾವಿರಕ್ಕೆ ವ್ಯವಹಾರ ಕುಸಿದಿದೆ. ಮಾರುಕಟ್ಟೆಯಲ್ಲಿ ತರಕಾರಿ, ಧವಸ-ಧಾನ್ಯದ ದರಗಳು ಕೊಂಚ ಏರಿಕೆಯಾಗಿವೆ. ಆದರೂ ನಾವು ತಿಂಡಿ-ಊಟದ ದರ ಹೆಚ್ಚಳ ಮಾಡಿಲ್ಲ. ಜಿಎಸ್‌ಟಿ ಕಾರಣದಿಂದ ಹೋಟೆಲ್‌ಗೆ ಬರುವ ಗ್ರಾಹಕರು ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಅಂದಾಜು ಒಂದು ಲಕ್ಷ ನಷ್ಟವಾಗಿದೆ ಎಂದು ಶ್ರೀನಿವಾಸನಗರದ ಮಾತೃಕೃಪಾ ಹೋಟೆಲ್‌ನ ವ್ಯವಸ್ಥಾಪಕ ಶ್ರೀಧರ್ ಕಟೀಲ್ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.