
ಬೆಂಗಳೂರು: ಕನ್ನಡಿಗರ ಸ್ವಾಭಿಮಾನದ ಪ್ರತೀಕವಾದ ‘ಕೆಂಪು ಹಾಗೂ ಹಳದಿ’ ಧ್ವಜ ತಮ್ಮದು ಎಂದು ಹಕ್ಕು ಸಾಧಿಸಲು ಮುಂದಾಗಿರುವ ಕನ್ನಡಪಕ್ಷದ ಆಕ್ಷೇಪಣೆಯನ್ನು ನಿಭಾಯಿಸುವುದು ಹೇಗೆ? ಚುನಾವಣಾ ಆಯೋಗದಲ್ಲಿ ನೋಂದಣಿಯಾಗಿದ್ದರೆ, ಅದನ್ನು ನಾಡಧ್ವಜವಾಗಿ ಘೋಷಿಸಲು ಅವಕಾಶ ಗಳಿವೆಯೇ? ಎಂಬುದು ಸೇರಿದಂತೆ ನಾಡ ಧ್ವಜ ಘೋಷಣೆಗೆ ಇರುವ ಕಾನೂನಾತ್ಮಕ ಅಡ್ಡಿ ಆತಂಕಗಳ ಬಗ್ಗೆ ಕಾನೂನು ಇಲಾಖೆ ಅಭಿಪ್ರಾಯ ಪಡೆಯಲು ಗುರುವಾರ ನಡೆದ ನಾಡ ಧ್ವಜ ಸಮಿತಿಯ ಮೊದಲ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಚಕ್ರವರ್ತಿ ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಸಭೆಯಲ್ಲಿ ಬೆಳಗಾವಿ ವಿಧಾನಮಂಡಲ ಅಧಿವೇಶನದ ನಂತರ ಮತ್ತೊಂದು ಸಭೆ ನಡೆಸಲು ತೀರ್ಮಾನಿಸಲಾಗಿದ್ದು, ಆ ವೇಳೆಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ನಿರ್ಣಯಿಸಲಾಯಿತು.
ಹಳದಿ ಮತ್ತು ಕೆಂಪು ಬಣ್ಣದ ಧ್ವಜ ನಮ್ಮ ಪಕ್ಷದ ಧ್ವಜವಾಗಿ 1991ರಲ್ಲೇ ಚುನಾವಣಾ ಆಯೋಗದೊಂದಿಗೆ ನೋಂದಣಿಯಾಗಿದೆ. ಹೀಗಾಗಿ ರಾಜ್ಯ ಸರ್ಕಾರವು ಇದನ್ನು ನಾಡ ಧ್ವಜವಾಗಿ ಮಾಡಲು ಹೋದರೆ ಹೈಕೋರ್ಟ್ ಮೊರೆ ಹೋಗುವುದಾಗಿ ಕನ್ನಡ ಪಕ್ಷದ ರಾಜ್ಯಾಧ್ಯಕ್ಷ ಪುರುಷೋತ್ತಮ್ ಜುಲೈ ತಿಂಗಳಲ್ಲಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಹೀಗಾಗಿ ನಾಡ ಧ್ವಜ ಮಾಡಲು ರಚಿಸಿರುವ ತಜ್ಞರ ಸಮಿತಿಯ ಮೊದಲ ಸಭೆಯಲ್ಲಿ ಈ ವಿಷಯ ಪ್ರಮುಖವಾಗಿ ಚರ್ಚೆಗೆ ಬಂದಿದೆ.
ಸಮಿತಿ ರಚನೆಯಾದ ಐದು ತಿಂಗಳ ಬಳಿಕ ಗುರುವಾರ ವಿಕಾಸಸೌಧದಲ್ಲಿ ಮೊದಲ ಸಭೆಯಲ್ಲಿ ನಾಡಧ್ವಜದ ಬಗ್ಗೆ ತರಾತುರಿ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಬೆಳಗಾವಿ ಅಧಿವೇಶನದ ಹಿನ್ನೆಲೆಯಲ್ಲಿ ತರಾತುರಿ ನಿರ್ಧಾರ ತೆಗೆದುಕೊಂಡರೆ ಹಲವು ಗೊಂದಲಗಳಿಗೆ ಕಾರಣವಾಗಲಿದೆ.
ಕನ್ನಡ ಪಕ್ಷವು 1991ರಲ್ಲಿ ನೋಂದಣಿಯಾಗಿದೆಯಾದರೂ ಇದೇ ಧ್ವಜವನ್ನು ಪಕ್ಷದ ಧ್ವಜವಾಗಿ ನೋಂದಣಿ ಮಾಡಿದೆಯೇ ಎಂಬುದನ್ನು ಪರಿಶೀಲಿಸಬೇಕು. ಒಂದು ವೇಳೆ ನೋಂದಣಿ ಮಾಡಿದ್ದರೂ ರಾಜ್ಯದ ನಾಡಧ್ವಜಕ್ಕೆ ಕಾನೂನು ಮಾನ್ಯತೆ ಸಿಗಬೇಕಾದರೆ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.