ವಿದ್ಯಾರ್ಥಿಗಳಿಗೆ 1 ವರ್ಷ ವಾರಂಟಿಯ ಶೂ ವಿತರಣೆ

Published : Apr 30, 2017, 07:33 AM ISTUpdated : Apr 11, 2018, 12:42 PM IST
ವಿದ್ಯಾರ್ಥಿಗಳಿಗೆ 1 ವರ್ಷ ವಾರಂಟಿಯ ಶೂ ವಿತರಣೆ

ಸಾರಾಂಶ

ಕಳೆದ ವರ್ಷ ನಿಲ್ಲಿಸಿದ್ದ ‘ಶೂ ಭಾಗ್ಯ' ಈ ವರ್ಷ ಮತ್ತೆ ಜಾರಿ | 1ರಿಂದ 10ನೇ ಕ್ಲಾಸ್‌ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಶೂ

ಬೆಂಗಳೂರು (ಏ.30): ಕಳೆದ ವರ್ಷ ಸರ್ಕಾರಿ ಶಾಲಾ ಮಕ್ಕಳ ‘ಶೂ ಮತ್ತು ಸಾಕ್ಸ್‌' ಭಾಗ್ಯ ಯೋಜನೆಗೆ ಕತ್ತರಿ ಹಾಕಿದ್ದ ರಾಜ್ಯ ಸರ್ಕಾರ ಈ ವರ್ಷ ಮತ್ತೆ ಯೋಜನೆ ಮುಂದುವರೆಸುತ್ತಿದ್ದು, ಮಕ್ಕಳ ಪೋಷಕರಿಂದ ಈ ಹಿಂದೆ ಕಳಪೆ ಶೂ ವಿತರಣೆ ಬಗ್ಗೆ ದೂರುಗಳು ಬಂದಿರುವುದರಿಂದ ಒಂದು ವರ್ಷ ಹಾಳಾಗದ ಖಾತರಿ (ಗ್ಯಾರಂಟಿ)ಯಿರುವ ಶೂಗಳನ್ನು ನೀಡಲು ಚಿಂತನೆ ನಡೆಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ 2015-16ನೇ ಶೈಕ್ಷಣಿಕ ಸಾಲಿನಲ್ಲಿ 1ರಿಂದ 10ನೇ ತರಗತಿವರೆಗಿನ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ‘ಶೂ ಮತ್ತು ಸಾಕ್ಸ್‌' ಭಾಗ್ಯ ಜಾರಿಗೊಳಿಸಿತ್ತು. ಯೋಜನೆ ಜಾರಿಯಾದ ವರ್ಷ ಶೈಕ್ಷಣಿಕ ವರ್ಷದ ಆರಂಭದಲ್ಲಿ ಮಕ್ಕಳಿಗೆ ಶೂ ಮತ್ತು ಸಾಕ್ಸ್‌ ನೀಡಲು ಸಾಧ್ಯವಾಗಿರಲಿಲ್ಲ. ಬದಲಿಗೆ ಶೈಕ್ಷಣಿಕ ವರ್ಷ ಬಹುತೇಕ ಪೂರ್ಣಗೊಂಡು ಮಕ್ಕಳು ಇನ್ನೇನು ಬೇಸಿಗೆ ರಜೆಗೆ ತೆರಳುವಾಗ ವಿತರಿಸಲಾಗಿತ್ತು. ಇದರಿಂದ ಆ ಶೂಗಳು ಹೇಗೂ ಬಳಕೆಯಾಗಿಲ್ಲ. ಅವನ್ನೇ 2016-17ನೇ ಶೈಕ್ಷಣಿಕ ಸಾಲಿಗೆ ಬಳಸಬಹುದು ಎಂಬ ಕಾರಣಕ್ಕೆ ಕಳೆದ ವರ್ಷ ಹೊಸ ಶೂ ಮತ್ತು ಸಾಕ್ಸ್‌ಗಳನ್ನು ಸರ್ಕಾರ ನೀಡಿರಲಿಲ್ಲ. ಇದರಿಂದ ಸರ್ಕಾರಕ್ಕೆ ಸುಮಾರು 120 ಕೋಟಿ ರು.ನಷ್ಟುಹಣ ಉಳಿತಾಯವಾಗಿತ್ತು.

ಇದೀಗ, ಸರ್ಕಾರ ಮತ್ತೆ ಶೂ ಮತ್ತು ಸಾಕ್ಸ್‌ ಭಾಗ್ಯ ಯೋಜನೆ ಮುಂದುವರೆಸಲು ನಿರ್ಧರಿ ಸಿದ್ದು, 2017-18ನೇ ಶೈಕ್ಷಣಿಕ ಸಾಲಿನ ಆರಂಭ ದಲ್ಲೇ ಮಕ್ಕಳಿಗೆ ಶೂ ಮತ್ತು ಸಾಕ್ಸ್‌ ವಿತರಿಸಲು ಈಗಾಗಲೇ ಸಿದ್ಧತೆ ಆರಂಭಿಸಿದೆ. ಅಲ್ಲದೆ, ಕಳೆದ ಬಾರಿ ವಿತರಿಸಿದ ಶೂಗಳು ಕಳಪೆಯಾಗಿದ್ದು, ಕೆಲವೇ ತಿಂಗಳಲ್ಲಿ ಹಾಳಾಗಿದ್ದಾಗಿ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಇಲಾಖೆ ಈ ಬಾರಿ ಶೂ ಖರೀದಿಸುವಾಗ ಒಂದು ವರ್ಷ ಹಾಳಾಗದಂತಹ ಖಾತರಿ ನೀಡುವ ಅಥವಾ ಒಂದು ವೇಳೆ ಹಾಳಾದರೆ ಶೂ ಬದಲಿಸಿ ಹೊಸ ಶೂ ನೀಡುವಂತಹ ಮಳಿಗೆಗಳಲ್ಲಿ ಮಾತ್ರ ಶೂ ಖರೀದಿಸಲು ಚಿಂತನೆ ನಡೆಸಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮಧ್ಯೆ ಒಂದು ವರ್ಷ ಗ್ಯಾರಂಟಿ ಇರುವ ಶೂ ನೀಡಲು ಸಾಧ್ಯವಾಗದಿದ್ದರೆ, ಕನಿಷ್ಠ ಒಂದು ವರ್ಷ ವಾರಂಟಿ ಇರುವ ಶೂಗಳನ್ನಾದರೂ ನೀಡಬೇಕೆಂಬ ಆಲೋಚನೆಯೂ ಇದೆ. ಇದರಿಂದ ಶೂ ಹಾಳಾದರೆ ಬದಲಾವಣೆ ಸಾಧ್ಯವಾಗದಿದ್ದರೂ, ಅವಧಿಗೂ ಮೊದಲೇ ಹಾಳಾದ ಶೂಗಳನ್ನು ಮಾರಾಟಗಾರರೇ ರಿಪೇರಿ ಮಾಡಿಸಿಕೊಡುವಂತಾ​ದರೂ ಆಗಬೇಕು ಎಂಬುದು ಇಲಾಖೆಯ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.

ಎಸ್‌ಡಿಎಂಸಿಗಳ ಮೂಲಕ ಶೂ ವಿತರಣೆ: ಮಕ್ಕಳ ಕಾಲು ಅಳತೆಯ ಸಮಸ್ಯೆಯಿಂದಾಗಿ ಟೆಂಡರ್‌ ಮೂಲಕ ಶೂ ಸಾಕ್ಸ್‌ ಖರೀದಿಸಿ ವಿತರಿಸುವುದು ಕಷ್ಟಸಾಧ್ಯ. ಇದು ಯೋಜನೆ ಜಾರಿಯಾದ ಮೊದಲ ವರ್ಷ ನಡೆಸಿದ ಪ್ರಯತ್ನದಲ್ಲೇ ಸರ್ಕಾರದ ಗಮನಕ್ಕೆ ಬಂದು ಟೆಂಡರ್‌ ಪ್ರಕ್ರಿಯೆ ಕೈಬಿಟ್ಟು ಶಿಕ್ಷಣ ಇಲಾಖೆ ಆಯಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ)ಗಳ ಮೂಲಕ ಮಕ್ಕಳಿಗೆ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್‌ ವಿತರಣೆ ಮಾಡಿತ್ತು.
ಈ ವರ್ಷ ಕೂಡ ಎಸ್‌ಡಿಎಂಸಿಗಳ ಮೂಲಕವೇ ಶೂ ಮತ್ತು ಸಾಕ್ಸ್‌ ಖರೀದಿಸಿ ನೀಡಲು ಸರ್ಕಾರ ನಿರ್ಧರಿಸಿದ್ದು, ಎಸ್‌ಡಿಎಂಸಿಗಳಿಗೆ ಒಂದು ವರ್ಷ ಖಾತರಿ ನೀಡುವ ಮಳಿಗೆಗಳಲ್ಲಿ ಮಾತ್ರ ಶೂ ಖರೀದಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡುವ ಸಾಧ್ಯತೆ ಇದೆ. 2016-17ನೇ ಸಾಲಿನಲ್ಲಿ 1ರಿಂದ 10ನೇ ತರಗತಿವರೆಗಿನ ಸುಮಾರು 45 ಲಕ್ಷ ಮಕ್ಕಳಿಗೆ ಶೂ ಭಾಗ್ಯ ಯೋಜನೆ ಮೂಲಕ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್‌ ನೀಡಲು 120 ಕೋಟಿ ರು. ಅನುದಾನವನ್ನು ಸರ್ಕಾರ ನೀಡಿತ್ತು. 1ರಿಂದ 5ನೇ ತರಗತಿ ಮಕ್ಕಳಿಗೆ ಒಂದು ಜೊತೆ ಶೂಗೆ 225 ರು., 6 ರಿಂದ 8ನೇ ತರಗತಿ ಮಕ್ಕಳಿಗೆ 250 ರು., 9 ಮತ್ತು 10ನೇ ತರಗತಿ ಮಕ್ಕಳಿಗೆ ಒಂದು ಜೊತೆ ಶೂಗೆ 275 ರು. ನಿಗದಿಪಡಿಸಲಾಗಿತ್ತು. (ಕನ್ನಡಪ್ರಭ)

(ಸಾಂದರ್ಭಿಕ ಚಿತ್ರ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳಗಾವಿ ಡಿಸಿ ಟಾರ್ಗೆಟ್; ಎಂಇಎಸ್ ಪರ ನಿಂತು ಲೋಕಸಭೆ ಸ್ಪೀಕರ್‌ಗೆ ದೂರು ನೀಡಿದ ಮಹಾರಾಷ್ಟ್ರದ ಸಂಸದ ಮಾನೆ!
ಹಿಂದೂಗಳಿಗಿಂತ ಮುಸ್ಲಿಮರ ಮೇಲೆ ಹೆಚ್ಚು ಬಾಂಡ್: ಎಸ್‌ಡಿಪಿಐ ಆರೋಪಕ್ಕೆ ಅಂಕಿ-ಅಂಶ ಸಮೇತ ಕಮಿಷನರ್ ತಿರುಗೇಟು!