
ನವದೆಹಲಿ: ಕಾಂಗ್ರೆಸ್ ಪಕ್ಷದ 6 ಸಂಸದರನ್ನು ಅಮಾನತು ಮಾಡಿರುವ ಲೋಕಸಭಾ ಸ್ಪೀಕರ್ ಕ್ರಮದ ವಿರುದ್ಧ ಪ್ರತಿಪಕ್ಷಗಳು ಇಂದು ಪ್ರತಿಭಟನೆ ನಡೆಸಿವೆ.
ಸಂಸತ್ತು ಕಟ್ಟಡದ ಹೊರಗಡೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಉಪಾದ್ಯಕ್ಷ ರಾಹುಲ್ ಗಾಂಧಿ, ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಇನ್ನಿತರ ಸಂಸದರು ಭಾಗವಹಿಸಿದ್ದರು.
ಪ್ರತಿಭಟನಾನಿರತ ಸಂಸದರನ್ನುದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಈ ಹಿಂದೆ ಮೀರಾ ಕುಮಾರ್ ಸ್ಪೀಕರ್ ಆಗಿದ್ದಾಗ ಇಂತಹ ಗದ್ದಲಗಳು ನಡೆದಿವೆ, ಆದರೆ ಅವರು ಯಾವತ್ತೂ ಸಂಯಮ ಕಳೆದುಕೊಂಡು ಈ ರೀತಿ ವರ್ತಿಸಿರಲಿಲ್ಲವೆಂದು ಹೇಳಿದರು.
ಇನ್ನೋರ್ವ ಕಾಂಗ್ರೆಸ್ ನಾಯಕ ಪಿ.ಎಲ್ ಪುನಿಯಾ ಮಾತನಾಡಿ, ಸಂಸದರ ಧ್ವನಿಯನ್ನು ಹತ್ತಿಕ್ಕುವುದು ಈ ಸರ್ಕಾರದ ಪ್ರವೃತಿಯಾಗಿಬಿಟ್ಟಿದೆ. ಈ ಹಿಂದೆ ಮಾಯಾವತಿಯವರಿಗೆ ಮಾತನಾಡಲು ಅವಕಾಶ ನೀಡಿಲ್ಲ, ಈಗ ಪ್ರತಿಪಕ್ಷದ ಇತರ ಸಂಸದರಿಗೂ ತಮ್ಮ ಅಭಿಪ್ರಾಯ ಮಂಡಿಸಲು ಆಸ್ಪದವಿಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಲೋಕಸಭೆಯ ಘನತೆಗೆ ಚ್ಯುತಿ ಬರುವಂತೆ ವರ್ತಿಸಿದ ಆರೋಪದ ಮೇಲೆ 6 ಮಂದಿ ಕಾಂಗ್ರೆಸ್ ಸಂಸದರನ್ನು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ನಿನ್ನೆ ಅಮಾನತು ಮಾಡಿದ್ದರು.
ಗೌರವ್ ಗೊಗೋಯ್, ಕೆ.ಸುರೇಶ್, ಅಧೀರ್ ರಾಜನ್ ಚೌಧರಿ, ರಂಜಿತ್ ರಂಜನ್, ಸುಷ್ಮಿತಾ ದೇವ್ ಮತ್ತು ಎಂಕೆ ರಾಘವನ್ ಅವರನ್ನು 5 ದಿನಗಳ ಕಾಲ ಸಸ್ಪೆಂಡ್ ಮಾಡಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಆದೇಶ ಹೊರಡಿಸಿದ್ದರು.
ಲೋಕಸಭೆಯಲ್ಲಿ ಗೋಮಾರಾಟಗಾರರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣದ ವಿಚಾರವಾಗಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಆಡಳಿತ ಪಕ್ಷವು ಬೋಫೋರ್ಸ್ ಹಗರಣವನ್ನು ಪ್ರತ್ಯಸ್ತ್ರವಾಗಿ ಬಳಸಿದೆ ಎಂದು ಆರೋಪಿಸಿ ಆ ಆರು ಸಂಸದರು ಸದನದ ಬಾವಿಗೆ ನುಗ್ಗಿ ಕಡತಗಳನ್ನು ಹರಿದು ಸ್ಪೀಕರ್ ಅವರತ್ತ ಎಸೆದು ಗದ್ದಲ ನಡೆಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.