
ಬೆಂಗಳೂರು : ವಿಧಾನಸಭೆ ಸಚಿವಾಲಯದಲ್ಲಿ ಅಗತ್ಯಕ್ಕಿಂತ ಹೆಚ್ಚು ಸಿಬ್ಬಂದಿ ತುಂಬಿ ತುಳುಕುತ್ತಿದ್ದರೂ ಸರ್ಕಾರಿ ನಿಯಮ ಹಾಗೂ ಆದೇಶ ಗಾಳಿಗೆ ತೂರಿ ಹೊಸತಾಗಿ 151 ಹುದ್ದೆಗಳಿಗೆ ನೇಮಕಾತಿ ಮಾಡಲಾಗಿದೆ. ಅಷ್ಟೇ ಅಲ್ಲ, ಈ ಪ್ರಕ್ರಿಯೆಯಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಗಳಿಗೆ 371 ಜೆ ಮೀಸಲಾತಿ ಕಲ್ಪಿಸದೆ ಅನ್ಯಾಯ ಕೂಡ ಮಾಡಲಾಗಿದೆ.
ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆಯದೆ ನೇರ ನೇಮಕಾತಿ ಮೂಲಕ ಈ ಹುದ್ದೆಗಳನ್ನು ತುಂಬಲಾಗಿದೆ. ಎಲ್ಲ ಪ್ರಕ್ರಿಯೆಗಳನ್ನು ರಹಸ್ಯವಾಗಿ ಹಾಗೂ ತರಾತುರಿಯಲ್ಲಿ ನಡೆಸಿ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ. ಪೊಲೀಸ್ ಪರಿಶೀಲನೆ ಕೂಡ ನಡೆಸದೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ತುಂಬಿ ತುಳುಕುತ್ತಿದ್ದರೂ ಮತ್ತೆ ನೇಮಕ:
ಕಾಗೋಡು ತಿಮ್ಮಪ್ಪ ಅವರು ವಿಧಾನಸಭಾಧ್ಯಕ್ಷರಾಗಿದ್ದ ಅವಧಿಯಲ್ಲಿ ಸಚಿವಾಲಯದಲ್ಲಿ ದಲಾಯತ್, ಭದ್ರತಾ ಸಿಬ್ಬಂದಿ ಮತ್ತು ಸ್ವಾಗತಕಾರರ ಹುದ್ದೆಗಳು ಹೆಚ್ಚುವರಿಯಾಗಿವೆ ಎಂದು ತಿಳಿಸಿ 36 ಹುದ್ದೆಗಳನ್ನು 2016ರ ಜೂ.21ರಂದು ರದ್ದು ಮಾಡಲಾಗಿತ್ತು. ಆ ವೇಳೆ ವಿಧಾನಸಭಾ ಪ್ರಭಾರ ಕಾರ್ಯದರ್ಶಿಯವರು ದೇಶದ ಯಾವುದೇ ವಿಧಾನಮಂಡಲದಲ್ಲಿ ಇಲ್ಲದಷ್ಟುಸಿಬ್ಬಂದಿ ರಾಜ್ಯದಲ್ಲಿದೆ. ಅಗತ್ಯಕ್ಕಿಂತ ಹೆಚ್ಚುವರಿ ಸಿಬ್ಬಂದಿ ಇರುವುದರಿಂದ ಸರ್ಕಾರಕ್ಕೆ ವಾರ್ಷಿಕ 8ರಿಂದ 12 ಕೋಟಿ ರು. ನಷ್ಟವಾಗುತ್ತಿದೆ ಎಂದು ತಿಳಿಸಿದ್ದರು. ಇದೀಗ ಅಗತ್ಯವಿರುವ 90 ಹುದ್ದೆಗಳಿಗೆ ಮತ್ತೆ ಹೆಚ್ಚುವರಿಯಾಗಿ 151 ಮಂದಿಯನ್ನು ನೇಮಕ ಮಾಡಲಾಗಿದೆ.
ವಿಧಾನಸಭೆ ಸಚಿವಾಲಯದ ‘ಬಿ’, ‘ಸಿ’ ಮತ್ತು ‘ಡಿ’ ಹುದ್ದೆಗಳ ನೇಮಕಾತಿ ಕುರಿತು ನ.20ರಂದು ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ನಂತರ ಅಂದಾಜು 10 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಶೇ.50ರಷ್ಟುಹುದ್ದೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ, ಉಪಾಧ್ಯಕ್ಷ ಶಿವಶಂಕರ್‌ರೆಡ್ಡಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ್ ಪಟ್ಟಣ ಅವರ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಗುತ್ತಿಗೆ ಸಿಬ್ಬಂದಿ ಮತ್ತು ಆಪ್ತರು, ಸಂಬಂಧಿಕರನ್ನು ನೇರ ನೇಮಕ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿವೆ. ಈ ನೇಮಕಾತಿಯಲ್ಲಿ ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರ ನಡೆಸಲಾಗಿದೆ ಎಂದೂ ಹೇಳಲಾಗುತ್ತಿದೆ.
ಸ್ಪೀಕರ್ ಕೋಳಿವಾಡ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ 7 ಮಂದಿ ಮತ್ತು ಅವರ ವಿಧಾನಸಭಾ ಕ್ಷೇತ್ರವಾದ ರಾಣೆಬೆನ್ನೂರಿನ 20 ಮಂದಿ, ಸಿಎಂ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ 9 ಮಂದಿ ಈಗಿನ ನೇಮಕಾತಿಯಲ್ಲಿ ಹುದ್ದೆ ಗಿಟ್ಟಿಸಿದ್ದಾರೆ. ವಿಧಾನಸಭೆ ಜಂಟಿ ಕಾರ್ಯದರ್ಶಿ ಮಲ್ಲಪ್ಪ ಬಿ. ಕಾಳೆ ಪುತ್ರಿ ಎಂ.ಕೆ. ಶಿಲ್ಪಾ ಅವರನ್ನು ಕಂಪ್ಯೂಟರ್ ಆಪರೇಟರ್, ವಿಧಾನಸಭೆ ಮೇಸ್ತ್ರಿ ಧನರಾಜ್ ಪುತ್ರ ಕಿರಣ್ ಅವರನ್ನು ಸ್ವೀಪರ್ ಹುದ್ದೆಗೆ ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ.
ನಿಯಮಗಳ ಉಲ್ಲಂಘನೆ:
ಫೆ.23ರಿಂದ 25ರ ವರೆಗೆ ದಲಾಯತ್ ಹುದ್ದೆಗೆ ಸಂದರ್ಶನ ನಡೆಸಲಾಗಿದೆ. ಫೆ.28ರಂದು ಎರಡೇ ದಿನಗಳಲ್ಲಿ ಏಕಾಏಕಿ ಆದೇಶ ನೀಡಲಾಗಿದೆ. ಈ ವೇಳೆ ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಪ್ರಕರಣಗಳಿವೆಯೇ ಎಂಬುದನ್ನು ಸಹ ಪರಿಶೀಲಿಸಿಲ್ಲ. ನಿಯಮಗಳ ಪ್ರಕಾರ ಆಯ್ಕೆಯಾಗಿರುವ ಅಭ್ಯರ್ಥಿಗಳ ಪೊಲೀಸ್ ಪರಿಶೀಲನೆ ನಡೆಸಬೇಕು. ಅದೇ ರೀತಿ ಕಂಪ್ಯೂಟರ್ ಆಪರೇಟರ್ ಹುದ್ದೆಗೆ ವಿದ್ಯಾರ್ಹತೆಯನ್ನೇ ಬದಲಿಸಲಾಗಿದೆ.
ಹೈ-ಕ ಭಾಗಕ್ಕೆ ಅನ್ಯಾಯ: ವಿಧಾನಸಭೆ ಸಚಿವಾಲಯದ ವಿವಿಧ ವೃಂದಗಳ ನೇಮಕಾತಿ ಮತ್ತು ಮುಂಬಡ್ತಿಯಲ್ಲಿ ಹೈದರಾಬಾದ್- ಕರ್ನಾಟಕ ಅಭ್ಯರ್ಥಿಗಳಿಗೆ 371(ಜೆ) ಅನ್ವಯ ಕಡ್ಡಾಯ ಮೀಸಲಾತಿ ನೀಡಬೇಕು. ಈ ಸಂಬಂಧ 2014ರಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಈ ನಿಯಮವನ್ನು ಉಲ್ಲಂಘನೆ ಮಾಡಲಾಗಿದೆ. 2016ರಲ್ಲಿ ವಿಧಾನಪರಿಷತ್‌ನಲ್ಲಿ ಮಾಡಿರುವ ನೇಮಕಾತಿಯಲ್ಲಿ ಹೈ-ಕ ಅಭ್ಯರ್ಥಿಗಳಿಗೆ ಮೀಸಲಾತಿ ಕಲ್ಪಿಸಲಾಗಿತ್ತು.
ನೇಮಕಾತಿ ತಡೆಗೆ ಸರ್ಕಾರಕ್ಕೆ ಚು.ಆಯೋಗ ಸೂಚನೆ
ಚುನಾವಣೆ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಕೂಡಲೇ ನೇಮಕಾತಿಯನ್ನು ತಡೆಹಿಡಿಯುವ ಬಗ್ಗೆ ಕ್ರಮ ವಹಿಸುವಂತೆ ತಿಳಿಸಿ ಫೆ.21ರಂದು ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬಂದಿದೆ ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.