ಸರ್ಕಾರಿ ನೌಕರರು ಇನ್ನುಮುಂದೆ ಸರ್ಕಾರವನ್ನು ಟೀಕಿಸುವಂತಿಲ್ಲ..!

By Suvarna Web DeskFirst Published Dec 26, 2017, 12:10 PM IST
Highlights

ಸಾರ್ವಜನಿಕ ವಲಯ ಅಧೀನದ (ಪಿಎಸ್‌ಯು) ನೌಕರರಿಗೆ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ರೂಪಿಸಿದೆ. ಹೊಸ ನೀತಿಸಂಹಿತೆಯ ಪ್ರಕಾರ, ಪಿಎಸ್‌ಯು ನೌಕರರು ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ, ಸರ್ಕಾರದ ನೀತಿ ಅಥವಾ ಕ್ರಿಯೆಗಳನ್ನು ಟೀಕಿಸುವುದಕ್ಕೆ ನಿಷೇಧ ಹೇರಲಾಗಿದೆ.

ನವದೆಹಲಿ (ಡಿ.26): ಸಾರ್ವಜನಿಕ ವಲಯ ಅಧೀನದ (ಪಿಎಸ್‌ಯು) ನೌಕರರಿಗೆ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ರೂಪಿಸಿದೆ. ಹೊಸ ನೀತಿಸಂಹಿತೆಯ ಪ್ರಕಾರ, ಪಿಎಸ್‌ಯು ನೌಕರರು ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ, ಸರ್ಕಾರದ ನೀತಿ ಅಥವಾ ಕ್ರಿಯೆಗಳನ್ನು ಟೀಕಿಸುವುದಕ್ಕೆ ನಿಷೇಧ ಹೇರಲಾಗಿದೆ.

‘ಸಿಪಿಎಸ್‌ಇಗಳಿಗೆ ಕ್ರೋಢೀಕೃತ ನೀತಿ ಸಂಹಿತೆ, ಶಿಸ್ತುಕ್ರಮ ಮತ್ತು ಮೇಲ್ಮನವಿ ನಿಯಮಗಳು’ ಇದರನ್ವಯ, ಪಿಎಸ್‌ಯು ನೌಕರರು ಯಾವುದೇ ಉಡುಗೊರೆ ಸ್ವೀಕರಿಸವಂತಿಲ್ಲ, ಸಾರ್ವಜನಿಕ ಸ್ಥಳಗಳಲ್ಲಿ ಅಮಲು ಪದಾರ್ಥ ಅಥವಾ ಮಾದಕ ದ್ರವ್ಯ ಸೇವನೆ ಮಾಡಕೂಡದು ಮತ್ತು ಅಂತಹ ಸ್ಥಿತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಕೂಡದು ಎಂಬ ನಿಯಮವಿದೆ.

ಕೇಂದ್ರೀಯ ಸಾರ್ವಜನಿಕ ವಲಯ ಉದ್ಯಮ ಮತ್ತು ಸಾರ್ವಜನಿಕರ ನಡುವಿನ ಸಂಬಂಧಕ್ಕೆ ಮುಜುಗರವಾಗುವಂತಹ ಯಾವುದೇ ಹೇಳಿಕೆಗಳನ್ನು, ಟೀಕೆಗಳನ್ನು ನೌಕರರು ಮಾಡಕೂಡದು. ಮಾಧ್ಯಮಗಳಲ್ಲಿ ಯಾವುದೇ ಸ್ವರೂಪದ ಟೀಕೆಯನ್ನು ಸ್ವತಃ ಅಥವಾ ಅವರ ಹೆಸರಲ್ಲಿ ಬೇರೊಬ್ಬರು ಮಾಡ ಕೂಡದು.

ನೌಕರರು ಯಾವುದೇ ಶಾಸಕಾಂಗ ಅಥವಾ ಸ್ಥಳೀಯಾಡಳಿತ ಚುನಾವಣೆಗಳಿಗೆ ಸ್ಪರ್ಧಿಸುವಂತಿಲ್ಲ, ಚುನಾವಣಾ ಪ್ರಚಾರದಲ್ಲಿ ತೊಡಗುವಂತಿಲ್ಲ. ರಾಜಕೀಯ ಪಕ್ಷಗಳು ಅಥವಾ ರಾಜಕೀಯ ಶೈಲಿಯ ಪ್ರತಿಭಟನೆ, ಚಳವಳಿ ನಡೆಸುವ ಸಂಘಟನೆಗಳ ಪದಾಧಿಕಾರ ಹೊಂದುವಂತಿಲ್ಲ. ಅಪರಾಧಕ್ಕೆ ಪ್ರಚೋದನೆ ನೀಡುವ ಯಾವುದೇ ಪ್ರತಿಭಟನೆಗಳಲ್ಲಿ ತೊಡಗಬಾರದೆಂಬ ನಿಯಮಗಳನ್ನು ನೂತನ ನೀತಿ ಸಂಹಿತೆಯಲ್ಲಿ ಅಳವಡಿಸಿಕೊಳ್ಳಲಾಗಿದೆ.

click me!