
ಬೆಂಗಳೂರು(ಮೇ.01): ರಾಜ್ಯದ ಶಕ್ತಿಕೇಂದ್ರವಾಗಿರುವ ವಿಧಾನಸೌಧದ ಆಧುನೀಕರಣ ಕಾಮಗಾರಿಗಾಗಿ ಲೋಕೋಪಯೋಗಿ ಇಲಾಖೆ 23 ಕೋಟಿ ರು.ಗಳ ಕ್ರಿಯಾಯೋಜನೆ ರೂಪಿಸಿದ್ದು, ಅದಕ್ಕಾಗಿ ಸಚಿವ ಸಂಪುಟ ಅನುಮೋದನೆಯನ್ನೂ ನೀಡಿದೆ. ಇನ್ನೇನು ಲೋಕೋಪಯೋಗಿ ಇಲಾಖೆ ಟೆಂಡರ್ ಕರೆಯುವ ಹಂತದಲ್ಲಿ ಇದ್ದಾಗಲೇ ವಿಧಾನಸಭೆಯ ಸಚಿವಾಲಯ ಈ ಕಾಮಗಾರಿಯನ್ನು ತಾನೇ ನಡೆಸುವುದಾಗಿ ಮಧ್ಯಪ್ರವೇಶಿಸಿದ್ದು, ವಿವಾದಕ್ಕೆ ಕಾರಣವಾಗಿದೆ.
ಮುಂದಿನ ವಿಧಾನಸಭೆ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿ ಇರುವಂತೆಯೇ ಸುಮಾರು 23 ಕೋಟಿ ರು.ಗಳ ವೆಚ್ಚದಲ್ಲಿ ವಿಧಾನಸೌಧದ ಕೊಠಡಿಗಳ ನವೀಕರಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯಿಂದ ಪಡೆದು ತಾನೇ ಮಾಡಲು ವಿಧಾನಸಭೆ ಸಚಿವಾಲಯ ಮುಂದಾದ ಪ್ರಸಂಗವಿದು.
ವಿಧಾನಸೌಧದಲ್ಲಿರುವ ಸರ್ಕಾರದ ಉನ್ನತ ಮೂಲಗಳ ಪ್ರಕಾರ, ವಿಧಾನಸೌಧದ 40ಕ್ಕೂ ಹೆಚ್ಚು ಕೊಠಡಿಗಳ ನವೀಕರಣ ಮತ್ತು ದುರಸ್ತಿ ಕಾಮಗಾರಿಗಳನ್ನು ಒಳಗೊಂಡ ಸುಮಾರು 23 ಕೋಟಿ ರು.ಗಳ ಕ್ರಿಯಾಯೋಜನೆ ಅನುಷ್ಠಾ®Üಗೊಳಿಸಲು ಇದೀಗ ಲೋಕೋಪಯೋಗಿ ಇಲಾಖೆ ಮತ್ತು ಅಸೆಂಬ್ಲಿ ಸಚಿವಾಲಯದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ವಿಧಾನಸೌಧ ನಿರ್ಮಾಣವಾದಾಗಿನಿಂದ ಸೌಧದ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆಯೇ ನೋಡಿಕೊಳ್ಳುತ್ತಿದೆ. ಆದರೆ ಕೆಲ ತಿಂಗಳ ಹಿಂದೆ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ಸೌಧದಲ್ಲಿರುವ ವಿಧಾನಸಭೆ ಸಚಿವಾಲಯದ ಕಚೇರಿಗಳನ್ನು ಅಸೆಂಬ್ಲಿ ಸಚಿವಾಲಯವೇ ನೋಡಿಕೊಳ್ಳ ¸æೕಕು ಎಂಬ ಪ್ರಸ್ತಾವ ಮುಂದಿಟ್ಟಿದ್ದರು. ಈ ಕುರಿತು ಸರ್ಕಾರ ಈ ತನಕ ನಿರ್ಧಾರ ತೆಗೆದುಕೊಂಡಿಲ್ಲ. ಆದಾಗ್ಯೂ ಅಸೆಂಬ್ಲಿ ಕಾರ್ಯದರ್ಶಿಗಳ ಕಚೇರಿಯಿಂದಲೇ ಸ್ವಯಂಪ್ರೇರಿತವಾಗಿ ಸಿವಿಲ್ ಕಾಮಗಾರಿ ಮತ್ತು ನಿರ್ವಹಣಾ ಕಾಮಗಾರಿ ನಡೆಸಲು ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿದೆ.
ಏನಿದು ಸಿವಿಲ್ ಕಾಮಗಾರಿ ವಿವಾದ?: ವಿಧಾ®Üಸೌಧದ ನೆಲಮಹಡಿ ಸೇರಿದಂತೆ ನಾಲ್ಕು ಮಹಡಿಗಳಲ್ಲಿರುವ ಎಲ್ಲ ಕೊಠಡಿಗಳ ನಿರ್ವಹಣೆಯನ್ನು ಸೌಧ ನಿರ್ಮಾಣಗೊಂಡ ಕಾಲದಿಂದಲೂ ಲೋಕೋಪಯೋಗಿ ಇಲಾಖೆ ನೋಡಿಕೊಳ್ಳುತ್ತಿದೆ. ಸರ್ಕಾರದ ಭಾಗವೇ ಆಗಿರುವ ಈ ಇಲಾಖೆ ಕಾಲಕಾಲಕ್ಕೆ ದುರಸ್ತಿ, ನವೀಕರಣ ಕಾಮಗಾರಿ ನಡೆಸುತ್ತಿದೆ. ಈ ಪ್ರಕ್ರಿಯೆಯ ಭಾಗವಾಗಿ ಕಳೆದ ಮೂರು ವರ್ಷಗಳಲ್ಲಿ ಬೇರೆ ಬೇರೆ ಇಲಾಖೆ ಮತ್ತು ಸಚಿವಾಲಯಕ್ಕೆ ಹಂಚಿಕೆಯಾಗಿರುವ ವಿಧಾನಸೌಧದಲ್ಲಿರುವ ಸುಮಾರು 40 ಕೊಠಡಿಗಳ ನವೀಕರಣ ಮತ್ತು ದುರಸ್ತಿಗಾಗಿ ಲೋಕೋಪಯೋಗಿ ಇಲಾಖೆ 23 ಕೋಟಿ ರು.ಗಳ ಕ್ರಿಯಾ ಯೋಜನೆ ರೂಪಿಸಿ, ಸರ್ಕಾರಕ್ಕೆ ಸಲ್ಲಿಸಿತ್ತು. ಈ ಕ್ರಿಯಾಯೋಜನೆಗೆ ಈಗಾಗಲೇ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ ವಿಧಾನಸೌಧ ನಿರ್ವಹಣೆ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯಿಂದ ಟೆಂಡರ್ ಕರೆಯಲು ಸಿದ್ಧತೆಯೂ ನಡೆದಿತ್ತು. 'ಆದರೆ ಈ ವಿಷಯ ತಿಳಿದ ಅಸೆಂಬ್ಲಿ ಸಚಿವಾಲಯವು ವಿಧಾನಸೌಧದ ಮೊದಲನೇ ಮಹಡಿ ಸಂಪೂರ್ಣ ಹಾಗೂ ನೆಲಮಹಡಿ ಮತ್ತು ಎರಡನೇ ಮಹಡಿಯ ಕೆಲ ಕೊಠಡಿಗಳ ನವೀಕರಣ ಕಾಮಗಾರಿ ತಾನೇ ನಡೆಸುವುದಾಗಿ ನಿರ್ಧಾರ ತೆಗೆದುಕೊಂಡಿದೆ.
ಸುಮಾರು 23 ಕೋಟಿ ರು.ಗಳ ಸಿವಿಲ್ ಕಾಮಗಾರಿಗೆ ಟೆಂಡರ್ ಕರೆಯಲಾಗುತ್ತಿದೆ ಎಂಬ ಮಾಹಿತಿ ಪಡೆದ ಸ್ಪೀಕರ್ ಕೆ.ಬಿ.ಕೋಳಿವಾಡ ಮತ್ತು ಅಸೆಂಬ್ಲಿ ಕಾರ್ಯದರ್ಶಿ ಎನ್.ಮೂರ್ತಿ ಅವರ ಕಚೇರಿ ನೇರವಾಗಿ ಮಧ್ಯಪ್ರವೇಶ ಮಾಡಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಕಾಮಗಾರಿ ನಡೆಸದಂತೆ ಸೂಚನೆ ನೀಡಿದೆ. ಹೀಗಾಗಿ ಲೋಕೋಪಯೋಗಿ ಇಲಾಖೆ ಸ್ಪೀಕರ್ ಕಚೇರಿ ಜತೆ ವಿವಾದಕ್ಕೆ ಎಡೆ ಮಾಡಿ ಕೊಡಬಾರದು ಎಂಬ ಕಾರಣಕ್ಕೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ, ಸುಮ್ಮನಾಗಿದೆ. ಹೀಗಾಗಿ ಲೋಕೋಪಯೋಗಿ ಇಲಾಖೆ ಈ ವಿಚಾರದಲ್ಲಿ ತಟಸ್ಥವಾಗಿರುವುದರಿಂದ ವಿಧಾನಸಭಾ ಸಚಿವಾಲಯ ತನ್ನ ಕ್ರಿಯಾಯೋಜನೆ ರೂಪಿಸುವ ಕಾರ್ಯವನ್ನು ಆರಂಭಿಸಿದೆ. ಈಗ ಅಂತಿಮವಾಗಿ ಈ ಕಾಮಗಾರಿ ಲೋಕೋಪಯೋಗಿ ಅಥವಾ ಸಚಿವಾಲಯ ಈ ಪೈಕಿ ಯಾರ ಪಾಲಾಗಲಿದೆ ಎಂಬುದು ಸದ್ಯದ ಕುತೂಹಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.