ಭಾರತಕ್ಕೆ ಬಂದು ಕಾಶ್ಮೀರ ವಿಚಾರದಲ್ಲಿ ಬತ್ತಿ ಇಟ್ಟ ಟರ್ಕಿ ಅಧ್ಯಕ್ಷ

By Suvarna Web DeskFirst Published May 1, 2017, 9:40 AM IST
Highlights

ಕಾಶ್ಮೀರದಲ್ಲಿ ಮೂರನೇ ರಾಷ್ಟ್ರದ ಮಧ್ಯಸ್ಥಿಕೆ ವಹಿಸಬೇಕೆಂಬ ಪಾಕಿಸ್ತಾನದ ವಾದಕ್ಕೆ ಟರ್ಕಿ ಅಧ್ಯಕ್ಷರು ಬೆಂಬಲ ಕೊಟ್ಟಂತಾಗಿದೆ. ಆದರೆ, ಟರ್ಕಿಯಿಂದ ಪ್ರತ್ಯೇಕ ರಾಷ್ಟ್ರ ರಚನೆಗೆ ಹೋರಾಟ ಮಾಡುತ್ತಿರುವ ಕುರ್ಡಿಶ್ ಜನರ ಸಮಸ್ಯೆ ವಿಚಾರದ ಬಗ್ಗೆ ಪ್ರಶ್ನೆ ಕೇಳಿದರೆ ಉಲ್ಟಾ ಆಗುತ್ತಾರೆ ಟರ್ಕಿ ಅಧ್ಯಕ್ಷರು.

ನವದೆಹಲಿ(ಮೇ 01): ತಮಗೊಂದು ನ್ಯಾಯ, ಇನ್ನೊಬ್ಬರಿಗೊಂದು ನ್ಯಾಯ.. ಇದು ಟರ್ಕಿ ಅಧ್ಯಕ್ಷ ತಯ್ಯಿಪ್ ಎರ್ಡೋಗನ್ ಅವರ ಧೋರಣೆಯಾ? ಹೀಗೊಂದು ಅನುಮಾನ ಮೂಡಲು ಕಾರಣವಾಗಿದ್ದು, ಕಾಶ್ಮೀರ ವಿಚಾರದಲ್ಲಿ ಅವರು ನೀಡಿದ ಹೇಳಿಕೆ. ಜಮ್ಮು-ಕಾಶ್ಮೀರ ವಿವಾದ ಬಗೆಹರಿಸಲು ಬಹುಪಕ್ಷೀಯ ಮಾತುಕತೆ ಅಗತ್ಯವೆಂದು ಟರ್ಕಿ ಅಧ್ಯಕ್ಷರು ಪ್ರತಿಪಾದಿಸಿದ್ದಾರೆ. ಆದರೆ, ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದ್ದು, ದ್ವಿಪಕ್ಷೀಯ ಮಾತುಕತೆಗಷ್ಟೇ ತಾನು ಸಿದ್ಧ ಎಂದು ಭಾರತದ ಪ್ರತಿಪಾದನೆಯಾಗಿದೆ.

ನಿನ್ನೆ ಭಾರತಕ್ಕೆ ಬಂದಿಳಿದ ಟರ್ಕಿ ಅಧ್ಯಕ್ಷ ಎರ್ಡೋಗನ್, "ಕಾಶ್ಮೀರದಲ್ಲಿ ಇನ್ನಷ್ಟು ಸಾವು-ನೋವುಗಳಿಗೆ ಆಸ್ಪದ ಕೊಡಬಾರದು. ಬಹುಪಕ್ಷೀಯ ಮಾತುಕತೆಯಿಂದ ನಾವು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು" ಎಂದು ಸಲಹೆ ನೀಡಿದ್ದಾರೆ.

"ಸಂವಾದಕ್ಕೆ ಮತ್ತು ಮಾತುಕತೆಗೆ ನಾವು ಸದಾ ಒಂದು ಅವಕಾಶ ತೆರೆದಿಟ್ಟಿರಬೇಕು. ಇದಕ್ಕಿಂತ ಒಳ್ಳೆಯ ಕ್ರಮ ಯಾವುದೂ ಇಲ್ಲ. ಇದರಿಂದ ಜಾಗತಿಕ ಶಾಂತಿಗೆ ನಾವು ಕೊಡುಗೆ ಕೊಡಬಹುದು," ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಕರ್ಡಿಶ್ ವಿಚಾರಕ್ಕೆ ಬಂದ್ರೆ ಅಧ್ಯಕ್ಷರು ಉಲ್ಟಾ:
ಕಾಶ್ಮೀರದಲ್ಲಿ ಮೂರನೇ ರಾಷ್ಟ್ರದ ಮಧ್ಯಸ್ಥಿಕೆ ವಹಿಸಬೇಕೆಂಬ ಪಾಕಿಸ್ತಾನದ ವಾದಕ್ಕೆ ಟರ್ಕಿ ಅಧ್ಯಕ್ಷರು ಬೆಂಬಲ ಕೊಟ್ಟಂತಾಗಿದೆ. ಆದರೆ, ಟರ್ಕಿಯಿಂದ ಪ್ರತ್ಯೇಕ ರಾಷ್ಟ್ರ ರಚನೆಗೆ ಹೋರಾಟ ಮಾಡುತ್ತಿರುವ ಕುರ್ಡಿಶ್ ಜನರ ಸಮಸ್ಯೆ ವಿಚಾರದ ಬಗ್ಗೆ ಪ್ರಶ್ನೆ ಕೇಳಿದರೆ ಉಲ್ಟಾ ಆಗುತ್ತಾರೆ ಟರ್ಕಿ ಅಧ್ಯಕ್ಷರು. ಕಾಶ್ಮೀರ ಸಮಸ್ಯೆಯೇ ಬೇರೆ, ಕುರ್ಡಿಶ್ ಸಮಸ್ಯೆಯೇ ಬೇರೆ. ಒಂದನ್ನೊಂದು ಹೋಲಿಕೆ ಮಾಡುವುದು ತಪ್ಪಾಗುತ್ತದೆ ಎಂದು ಎರ್ಡೋಗನ್ ಅಭಿಪ್ರಾಯಪಟ್ಟಿದ್ದಾರೆ.

"ನಮಗೆ ಕುರ್ಡಿಶ್ ಜನರಿಂದ ಯಾವುದೇ ತೊಂದರೆ ಇಲ್ಲ. ಒಂದು ಉಗ್ರ ಸಂಘಟನೆಯ ತಲೆ ನೋವಿದೆ ಅಷ್ಟೇ. ಕುರ್ಡಿಶ್ ಸಮಸ್ಯೆ ಒಂದು ಪ್ರದೇಶದ ವಿವಾದವಾಗಿದೆ. ಜಮ್ಮು-ಕಾಶ್ಮೀರದ ಪರಿಸ್ಥಿತಿಯೇ ಬೇರೆ" ಎಂದು ಟರ್ಕಿ ಅಧ್ಯಕ್ಷರು ತೇಲಿಸಿ ಹೇಳಿದ್ದಾರೆ.

ಇಂದು ಬೆಳಗ್ಗೆ ರಾಜಧಾನಿಯಲ್ಲಿ ನಡೆದ ಭಾರತ-ಟರ್ಕಿ ಬ್ಯುಸಿನೆಸ್ ಸಮಿಟ್'ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಟರ್ಕಿ ಅಧ್ಯಕ್ಷ ಎರ್ಡೋಗನ್ ಅವರು ಭಾಗವಹಿಸಿದ್ದರು.

click me!