ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ಪಡೆಯುವಲ್ಲಿ ಸರಕಾರ ವಿಫಲ

Published : Jun 20, 2017, 07:44 PM ISTUpdated : Apr 11, 2018, 01:12 PM IST
ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ಪಡೆಯುವಲ್ಲಿ ಸರಕಾರ ವಿಫಲ

ಸಾರಾಂಶ

ರೋಗಿಗಳನ್ನು ಸುಲಿಗೆ ಮಾಡುವ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ರಾಜ್ಯ ಸರಕಾರ ತರಲು ಉದ್ದೇಶಿಸಿದ್ದ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ಪಡೆಯುವಲ್ಲಿ ಸರಕಾರ ವಿಫಲವಾಗಿದೆ. ವಿಧಾನಸಭೆಯಲ್ಲಿ ವಿಧೇಯಕದ ಕುರಿತು ಗಂಭೀರ ಚರ್ಚೆಯಾದರೂ ವಿಧೇಯಕ ಜಾರಿಗೆ ಪ್ರತಿಪಕ್ಷಗಳು ಸೇರಿದಂತೆ ಹಲವು ಹಿರಿಯ ಸದಸ್ಯರಿಂದಲೇ ಸಕಾರಾತ್ಮಕ ಬೆಂಬಲ ಸಿಗದ ಕಾರಣಕ್ಕೆ ವಿಧೇಯಕ ಅಂಗೀಕಾರವಾಗದೇ, ಜಂಟಿ ಸದನ ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ. ವಿಧೇಯಕದ ಮೂಲ ಉದ್ದೇಶವನ್ನು ಕೆಲವು ಸದಸ್ಯರನ್ನು ಹೊರತುಪಡಿಸಿದರೆ ಬಹುತೇಕ ಸದಸ್ಯರು ಒಪ್ಪಿಕೊಂಡಿದ್ದು ವಿಶೇಷವಾಗಿತ್ತು.

ಬೆಂಗಳೂರು (ಜೂ.20): ರೋಗಿಗಳನ್ನು ಸುಲಿಗೆ ಮಾಡುವ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ರಾಜ್ಯ ಸರಕಾರ ತರಲು ಉದ್ದೇಶಿಸಿದ್ದ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ಪಡೆಯುವಲ್ಲಿ ಸರಕಾರ ವಿಫಲವಾಗಿದೆ. ವಿಧಾನಸಭೆಯಲ್ಲಿ ವಿಧೇಯಕದ ಕುರಿತು ಗಂಭೀರ ಚರ್ಚೆಯಾದರೂ ವಿಧೇಯಕ ಜಾರಿಗೆ ಪ್ರತಿಪಕ್ಷಗಳು ಸೇರಿದಂತೆ ಹಲವು ಹಿರಿಯ ಸದಸ್ಯರಿಂದಲೇ ಸಕಾರಾತ್ಮಕ ಬೆಂಬಲ ಸಿಗದ ಕಾರಣಕ್ಕೆ ವಿಧೇಯಕ ಅಂಗೀಕಾರವಾಗದೇ, ಜಂಟಿ ಸದನ ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ. ವಿಧೇಯಕದ ಮೂಲ ಉದ್ದೇಶವನ್ನು ಕೆಲವು ಸದಸ್ಯರನ್ನು ಹೊರತುಪಡಿಸಿದರೆ ಬಹುತೇಕ ಸದಸ್ಯರು ಒಪ್ಪಿಕೊಂಡಿದ್ದು ವಿಶೇಷವಾಗಿತ್ತು.

ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿರುವ ಸುಲಿಗೆಗೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯ ಸರಕಾರ ತರಲು ಉದ್ದೇಶಿಸಿದ್ದ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ಗಂಭೀರ ಚರ್ಚೆಗೆ ಕಾರಣವಾಯ್ತು. ವಿಧೇಯಕದ ಅಗತ್ಯತೆಯನ್ನು 90 ನಿಮಿಷಗಳ ಕಾಲ  ಸದನದಲ್ಲಿ ವಿವರಿಸಿದ ಆರೋಗ್ಯ ಸಚಿವರಾದ ರಮೇಶ್ ಕುಮಾರ್ ಅವರು ಸದುದ್ದೇಶದಿಂದ ವಿಧೇಯಕ ತಂದಿರೋದಾಗಿ ಸ್ಪಷ್ಟಪಡಿಸಿದರು. ಯಾವುದೇ ವೈದ್ಯರ ವಿರುದ್ಧ ತಂದಿರುವ ವಿಧೇಯಕ ಇದಲ್ಲ, ಬದಲಾಗಿ ಲೋಪ ಎಸಗುವ ವೈದ್ಯಕೀಯ ಸಂಸ್ಥೆಗಳ ವಿರುದ್ಧ ತಂದಿರುವ ವಿಧೇಯಕ ಅಂತ ಸಮಜಾಯಿಷಿ ನೀಡಿದರು.  ವರ್ಷಕ್ಕೆ 1,028 ಕೋಟಿ ರೂ ವೆಚ್ಚ ಮಾಡುವ ರಾಜ್ಯ ಸರಕಾರ, ಖಾಸಗಿ ವೈದ್ಯಕೀಯ ಸಂಸ್ಥೆಗಳ ಸೇವಾ ವೆಚ್ಚವನ್ನು ನಿಯಂತ್ರಣ ಮಾಡುವುದು ಅನಿವಾರ್ಯವಾಗಿದೆ. ವೈದ್ಯರು ತಮ್ಮದು ಸೇವೆ ಅನ್ನೋದನ್ನು ಮರೆತಿದ್ದಾರೆ. ಅದೊಂದು ಉದ್ಯಮ ಎಂದು ತಿಳಿದುಕೊಂಡಿದ್ದಾರೆ.  ವೈದ್ಯರ ಕಾಲು ದೊಡ್ಡ ಕಂಬ ಇದ್ದಂತೆ. ಆದರೆ ಆ ಕಂಬದ ಕೆಳಗಿರುವ ಇರುವೆಯ ಗೋಳು ಕೇಳೋರು ಯಾರು..? ಆ ಇರುವೆಯಂತಹ ಬಡ ಜನರ ಗೋಳು ಕೇಳೋಕಾಗಿಯೇ ಇದನ್ನು ತರುತ್ತಿರುವುದಾಗಿ ರಮೇಶ್ ಕುಮಾರ್ ಸ್ಪಷ್ಟಪಡಿಸಿದರು.

ಸಚಿವರ ಸಮಜಾಯಿಷಿಗೆ ಸದನದಲ್ಲಿ ಸಹಮತ ವ್ಯಕ್ತವಾದರೂ,  ವಿಧೇಯಕದಲ್ಲಿರುವ ಕೆಲವು ಪ್ರಸ್ತಾಪಗಳ ಕುರಿತು ಗಂಭೀರ ಚರ್ಚೆ ನಡೆಸಲಾಯ್ತು. ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ವಿಧೇಯಕ ಕುರಿತು ಮಾತನಾಡಿ, ವಿಧೇಯಕದ ಹಿಂದಿನ ಉದ್ದೇಶಕ್ಕೆ ಸಾತ್ವಿಕ ಆಕ್ರೋಶವಿದೆ. ವಿಧೇಯಕದ ನೀತಿಯನ್ನು ನೂರಕ್ಕೆ ನೂರು ಒಪ್ಪುತ್ತೇವೆ. ಆದರೆ, ತರಾತುರಿಯಲ್ಲಿ ವಿಧೇಯಕ್ಕೆ ಒಪ್ಪಿಗೆ ಬೇಡ. ಒಂದು ತಿಂಗಳ ಅವಕಾಶ ನೀಡಿ ಸಮಗ್ರ ಪರಿಶೀಲನೆಗಾಗಿ ಜಂಟಿ ಸಲಹಾ ಸಮಿತಿಗೆ ಒಪ್ಪಿಸುವುದು ಸೂಕ್ತ ಎಂದ್ರು. ಕಾಂಗ್ರೆಸ್ ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ಮಾತನಾಡಿ, ವೈದ್ಯಕೀಯ ವೃತ್ತಿ ಜ್ಞಾನ ಆಧಾರಿತವಾಗಿರುವುದರಿಂದ ತರಾತುರಿ ಮಾಡದೇ ಸರ್ಕಾರ ಎಚ್ಚರಿಕೆ ಹೆಜ್ಜೆ ಇಡಬೇಕು. ವಿಧೇಯಕದಲ್ಲಿ ದರಪಟ್ಟಿ ಪ್ರದರ್ಶನ ಕಡ್ಡಾಯ ಮಾಡಿರುವುದಕ್ಕೆ ಆಕ್ಷೇಪವಿದೆ ಅಂತ ಹೇಳುವ ಮೂಲಕ ಸಚಿವ ರಮೇಶ್ ಕುಮಾರ್ ವಿರುದ್ಧ ಪರೋಕ್ಷಾಗಿ ಅಸಮಾಧಾನ ಹೊರ ಹಾಕಿದ್ರು. ಶಿವರಾಜ್ ಪಾಟೀಲ್ ಮಾತನಾಡಿ, ವಿಧೇಯಕ ಕಾನೂನು ಆದರೆ, ವೈದ್ಯರು ಮುಕ್ತ ವಾತಾವರಣದಲ್ಲಿ ಕೆಲಸ ಮಾಡುವುದು ಕಷ್ಟವಾಗಲಿದ್ದು, ಸೂಕ್ತ ಪರಿಷ್ಕರಣೆ ಮಾಡಬೇಕು ಎಂದು ಸಲಹೆ ಮಾಡಿದರು. ಬಿಜೆಪಿ ಶಾಸಕ ಡಾ. ಅಶ್ವತ್ಥನಾರಾಯಣ ಮಾತನಾಡಿ, ವಿಧೇಯಕದಲ್ಲಿನ ಹಲವು ಪ್ರಸ್ತಾಪಗಳು ಕಾನೂನು ವಿರೋಧಿಯಾಗಿವೆ. ಕಾನೂನು ಹೇರುವ ಮೂಲಕ ಸುಧಾರಣೆ ತರಲು ಸಾಧ್ಯವಿಲ್ಲ ಎಂದರು. ಈ ಸಂದರ್ಭದಲ್ಲಿ ಸಚಿವ ರಮೇಶ್ ಕುಮಾರ್ ಮತ್ತು ಅಶ್ವಥ್ ನಾರಾಯಣ ವಿರುದ್ಧ ಮಾತಿನ ಚಕಮಕಿ ನಡೆಯಿತು. 

ಇದೇ ವೇಳೆ ರಾಜ್ಯದ ಗ್ರಾಮೀಣ ಭಾಗದಲ್ಲಿ ಕಡ್ಡಾಯ  ವೈದ್ಯಕೀಯ ಸೇವೆ ಸಲ್ಲಿಸುವ ಕರ್ನಾಟಕ ವೈದ್ಯಕೀಯ ಕೋರ್ಸ್'ಗಳನ್ನು  ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿ ತಿದ್ದುಪಡಿ ವಿಧೇಯಕವೂ ಸಹ ವಿಧಾನಸಭೆಯಲ್ಲಿ ಅಂಗಿಕಾರವಾಯ್ತು. ಮ್ಯಾನೇಜ್ ಮೆಂಟ್ ಕೋಟಾ ಮತ್ತು ಎನ್ ಆರ್ ಐ ಕೋಟಾದಡಿ ಎಂಬಿಬಿಎಸ್ ಮುಗಿಸಿದ ವೈದ್ಯರನ್ನು ಹೊರತುಪಡಿಸಿ ಉಳಿದವರೆಲ್ಲಾ ಗ್ರಾಮೀಣ ಭಾಗದಲ್ಲಿ ಕಡ್ಡಾಯವಾಗಿ ಒಂದು ವರ್ಷ ಸೇವೆ ಸಲ್ಲಿಸಲೇಬೇಕೆಂಬ ನಿಯಮವನ್ನು ಈ ವಿಧೇಯಕದಲ್ಲಿ ಪ್ರಸ್ತಾಪ ಮಾಡಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಾಲ್‌ನಲ್ಲಿ ಹುಡುಗಿಗೆ ಪ್ರಪೋಸ್ ಮಾಡಿ ಅಲ್ಲೇ ತಾಳಿ ಕಟ್ಟಿದ ಯುವಕ: ವೀಡಿಯೋ ಭಾರಿ ವೈರಲ್
Hate Speech Bill: ಸರ್ವಜನಾಂಗ ಶಾಂತಿಯ ತೋಟ ಆಗಲು ಈ ಮಸೂದೆ ಬೇಕೇಬೇಕು