ಅನಾರೋಗ್ಯ : ಬದಲಾಗುತ್ತಾರಾ ಮುಖ್ಯಮಂತ್ರಿ?

By Web DeskFirst Published Sep 24, 2018, 11:03 AM IST
Highlights

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಭಾನುವಾರ ಹೊಸ ಘೋಷಣೆ ಮಾಡಿದ್ದು, ‘ಮನೋಹರ ಪರ್ರಿಕರ್ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ’ ಎಂದು ಹೇಳಿದ್ದಾರೆ.

ನವದೆಹಲಿ/ಪಣಜಿ: ಗೋವಾ ಬೃಹನ್ನಾಟಕಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಭಾನುವಾರ ಹೊಸ ಘೋಷಣೆ ಮಾಡಿದ್ದು, ‘ಮನೋಹರ ಪರ್ರಿಕರ್ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ’ ಎಂದು ಹೇಳಿದ್ದಾರೆ.

ಆದರೆ ಇದೇ ವೇಳೆ ಪರ್ರಿಕರ್ ಅವರ ಬಳಿಯ ಖಾತೆಗಳನ್ನು ಬೇರೆಯವರಿಗೆ ವರ್ಗಾಯಿಸುವ ನಿಟ್ಟಿನಲ್ಲಿ ಹಾಗೂ ಪರ್ರಿಕರ್ ಅನುಪಸ್ಥಿತಿಯಲ್ಲಿ ಈ ಹಿಂದೆ ಇದ್ದಂತೆ ಉನ್ನತ ಸಚಿವರ ಸಲಹಾ ಸಮಿತಿ ರಚಿಸುವ ದಿಸೆಯಲ್ಲಿ, ಸಂಪುಟದಲ್ಲಿ ಕೆಲವು ಬದಲಾವಣೆ ಆಗಬಹುದು ಎಂಬ ಮುನ್ಸೂಚನೆಯನ್ನು ಶಾ ನೀಡಿದ್ದಾರೆ.

‘ಪರ‌್ರಿಕರ್ ಅವರೇ ಗೋವಾ ಸರ್ಕಾರದ ನೇತೃತ್ವವನ್ನು ಮುಂದುವರಿಸಲಿದ್ದಾರೆ ಎಂದು ಚರ್ಚೆಯ ಬಳಿಕ ತೀರ್ಮಾನಿಸಲಾಗಿದೆ. ಶೀಘ್ರದಲ್ಲಿ ಸಂಪುಟ ಪುನಾರಚನೆ ಆಗಲಿದ್ದು, ಅವರ ಖಾತೆಗಳು ಕೂಡ ಬದಲಾಗಲಿವೆ’ ಎಂದು ಶಾ ಟ್ವೀಟ್ ಮಾಡಿದ್ದಾರೆ. ಅಸ್ವಸ್ಥ ಪರ್ರಿಕರ್ ಈಗ ದಿಲ್ಲಿಯ ಏಮ್ಸ್  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಈ ಹಿಂದೆ ಅವರು ಅಮೆರಿಕಕ್ಕೆ ಚಿಕಿತ್ಸೆಗೆಂದು ತೆರಳಿದ್ದಾಗ ಸರ್ಕಾರ ಮುನ್ನಡೆಸಲು ಉನ್ನತ ಸಚಿವರ ಸಲಹಾ ಮಂಡಳಿ ರಚಿಸಲಾಗಿತ್ತು. ಈಗ ಅದೇ ರೀತಿ ಮಂಡಳಿ ರಚಿಸಿ ಖಾತೆ ಮರು ಹಂಚಿಕೆ ಮಾಡುವ ನಿರೀಕ್ಷೆಯಿದೆ. ಪರ್ರಿಕರ್ ಅವರಲ್ಲಿ ಮಾತ್ರ ವಿಶ್ವಾಸ ಇಟ್ಟು ಸರ್ಕಾರಕ್ಕೆ ಬೆಂಬಲ ನೀಡಿರುವುದಾಗಿ ಪ್ರಮುಖ ಮಿತ್ರಪಕ್ಷ ‘ಗೋವಾ ಫಾರ್ವರ್ಡ್’ ಷರತ್ತು ಹಾಕಿದ ಕಾರಣ ಬಿಜೆಪಿ ಈ ತೀರ್ಮಾನಕ್ಕೆ ಬಂದಿದೆ. ಶಾ ಹೇಳಿಕೆಯನ್ನು ಗೋವಾ ಫಾರ್ವರ್ಡ್ ಸ್ವಾಗತಿಸಿದ್ದರೆ, ಕಾಂಗ್ರೆಸ್ ವಿರೋಧಿಸಿದೆ. 

click me!