
ಬೆಂಗಳೂರು(ಜೂ.23): ರಾಷ್ಟ್ರೀಯ ಸುದ್ದಿವಾಹಿನಿಯೊಂದರಲ್ಲಿ ಬರುತ್ತಿರುವುದೆಲ್ಲ ಸುಳ್ಳು. ನಾನು ಹಿಂದೆ ನೀಡಿದ್ದ ಹೇಳಿಕೆಯನ್ನು ತಮಗೆ ಬೇಕಾದಂತೆ ಬದಲಾಯಿಸಿ ಕೊಂಡು ಮತ್ತೆ ತೋರಿಸುವ ಮೂಲಕ ನಾನು ಆದಾಯ ತೆರಿಗೆ ಇಲಾಖೆ ಮುಂದೆ ನೀಡಿದ್ದ ಹೇಳಿಕೆ ಗಳನ್ನು ರಾಜಕೀಯವಾಗಿ ದುರ್ಬಳಕೆ ಮಾಡುತ್ತಿದ್ದಾರೆ ಹಾಗೂ ನನ್ನ ತೇಜೋವಧೆಗೆ ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಕೆ. ಗೋವಿಂ ದರಾಜು ಆರೋಪಿಸಿದ್ದಾರೆ.
ಅಲ್ಲದೆ, ಆದಾಯ ಇಲಾಖೆ ಅಧಿಕಾರಿಗಳು ನನಗೆ ಕೇಳಿದ ಪ್ರಶ್ನೆಯೊಂದರಲ್ಲಿ ನನ್ನ ಪಕ್ಷದ ಹಿರಿಯ ನಾಯಕರ ಹೆಸರು ಉಲ್ಲೇಖಿಸಿದ್ದನ್ನು ನಾನು ವಿರೋಧಿಸಿದ್ದೆ. ಆದರೆ, ಆ ಹೇಳಿಕೆಯಲ್ಲಿ ತಮಗೆ ಬೇಕಾದ ಭಾಗವನ್ನು ಮಾತ್ರ ತೆಗೆದುಕೊಂಡು ತಪ್ಪು ಅರ್ಥ ಬರುವಂತೆ ಮಾಧ್ಯಮವು ಪ್ರಸಾರ ಮಾಡುವ ಮೂಲಕ ಇಡೀ ದೇಶವನ್ನು ತಪ್ಪುದಾರಿಗೆ ಎಳೆಯುತ್ತಿದೆ ಎಂದು ದೂರಿದರು. ಗುರುವಾರ ಕನ್ನಡಪ್ರಭದೊಂ ದಿಗೆ ಮಾತನಾಡಿದ ಗೋವಿಂದ ರಾಜು ಅವರು, ಆದಾಯ ತೆರಿಗೆ ಅಧಿಕಾರಿಗಳ ಮುಂದೆ ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ಕೊಟ್ಟಿದ್ದನ್ನು ತಾವು ಒಪ್ಪಿಕೊಂಡಿರುವೆ ಎಂಬುದನ್ನು ಅಲ್ಲಗಳೆದಿದ್ದಾರೆ. ಈ ರಾಷ್ಟ್ರೀಯ ಮಾಧ್ಯಮ ಈ ಹಿಂದೆಯೂ ಇಂತಹ ರಾಜಕೀಯ ಪ್ರೇರಿತ ವರದಿಗಳನ್ನು ಮಾಡಿತ್ತು. ಹೀಗಾಗಿ ಇಂತಹ ವರದಿ ವಿರುದ್ಧ ನಾನು ಈಗಾಗಲೇ ನ್ಯಾಯಾಲಯದಲ್ಲಿ ಮಾನನಷ್ಟಮೊಕದ್ದಮೆ ಹೂಡಿದ್ದೇನೆ. ಆ ಪ್ರಕರಣ ನಡೆದಿದೆ ಎಂದು ಹೇಳಿದರು.
ನಾನು ಹೇಳಿದ್ದನ್ನು ಪ್ರಸಾರ ಮಾಡುತ್ತಿಲ್ಲ
ಗೋವಿಂದರಾಜು ಹೇಳಿರುವುದು ಇಷ್ಟು: ರಾಷ್ಟ್ರೀಯ ಮಾಧ್ಯಮವು ನಾನು ಹೇಳಿದನ್ನು ಸಂಪೂರ್ಣವಾಗಿ ಬಿತ್ತರ ಮಾಡುತ್ತಿಲ್ಲ. 2016ರ ಮೇ 3ರಂದು ಇಲಾಖೆ ಅಧಿಕಾರಿಗಳಿಗೆ ನೀಡಿದ ಹೇಳಿಕೆಯನ್ನು ತಿರುಚಿ ವರದಿ ಮಾಡುತ್ತಿದ್ದಾರೆ. ನನ್ನ ಹೇಳಿಕೆ ಕುರಿತು ಚಾನೆಲ್‌ನವರು ಎಕೆಜಿ -3 ಅಂತ ತೋರಿಸುತ್ತಿದ್ದಾರೆ. ಆದರೆ, ನಾನು ಹೇಳಿಕೆ ನೀಡಿರುವುದು ಎಕೆಜಿ- 9. ಅಂದರೆ, ನಾನು ಎಕೆಜಿ-9ನಲ್ಲಿ ನೀಡಿದ ಹೇಳಿಕೆಯನ್ನು ತಿರುಚಿ ಎಕೆಜಿ-3ಗೆ ಲಿಂಕ್ ಮಾಡಿ ತೋರಿಸುತ್ತಿದ್ದಾರೆ. ತನ್ಮೂಲಕ ದೇಶವನ್ನು ತಪ್ಪು ದಾರಿಗೆಳೆಯು ತ್ತಿದ್ದಾರೆ. ವಿಚಾರಣೆ ವೇಳೆ ಪಕ್ಷದ ರಾಷ್ಟ್ರೀಯ ನಾಯಕರ ಹೆಸರನ್ನು ಉಲ್ಲೇಖಿಸಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳನ್ನು ನನಗೆ ಪ್ರಶ್ನೆಯನ್ನು ಕೇಳಿದ್ದರು. ಇದಕ್ಕೆ ನಾನು ನನ್ನ ಮನೆಯ ಮಲಗುವ ಕೋಣೆಯಲ್ಲಿ ದೊರಕಿದೆ ಎಂದು ನೀವು ಹೇಳುತ್ತಿರುವ ಡೈರಿಯು ನನ್ನದಲ್ಲ. ಹೀಗಾಗಿ ಆ ಡೈರಿಯನ್ನು ಆಧರಿಸಿ ನೀವು ಕೇಳುತ್ತಿರುವ ಪ್ರಶ್ನೆಯೇ ಆಧಾರ ರಹಿತ ಹಾಗೂ ಅಪ್ರಸ್ತುತ. ಅಲ್ಲದೆ, ನನಗೆ ಕೇಳುತ್ತಿರುವ ಪ್ರಶ್ನೆಯಲ್ಲಿ ನೀವು ಉಲ್ಲೇಖಿಸುತ್ತಿರುವ ಕೆಲ ಹೆಸರುಗಳು ನನ್ನ ಪಕ್ಷದ ಅತಿ ಉನ್ನತ ಹಾಗೂ ಗೌರವಾನ್ವಿತ ನಾಯಕರು. ಹೀಗಾಗಿ ನೀವು ಪ್ರಶ್ನೆಯಲ್ಲಿ ಇರುವ ನಾಯಕರ ಹೆಸರನ್ನು ಉಲ್ಲೇಖಿಸಿರುವುದನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆ ಹಾಗೂ ಖಂಡಿಸುತ್ತೇನೆ ಎಂದು ನಾನು ವಿಚಾರಣೆ ವೇಳೆ ಅಧಿಕಾರಿಗಳಿಗೆ ಹೇಳಿದ್ದೆ. ಆದರೆ, ಮಾಧ್ಯಮದವವರು ನನ್ನ ಪಕ್ಷದ ಗೌರವಾನ್ವಿತ ನಾಯಕರು ಎಂದು ಹೇಳಿದನ್ನು ಕಟ್ ಮಾಡಿ ಅಪೂರ್ಣ ಅಂಶಗಳನ್ನು ತೋರಿಸುವ ಮೂಲಕ ಎಲ್ಲರನ್ನು ದಾರಿ ತಪ್ಪಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.