
ಬೆಂಗಳೂರು (ನ.13): ಪರಿಶಿಷ್ಟಜಾತಿ, ಪಂಗಡಗಳ ಫಲಾನುಭವಿಗಳಿಗೆ ಮಂಜೂರು ಮಾಡಿದ ಜಮೀನು ಮಾರಾಟ ದುರುಪಯೋಗ ತಡೆಗಟ್ಟುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಪಿಟಿಸಿಎಲ್ ಕಾಯ್ದೆಗೆ ಮತ್ತಷ್ಟು ಷರತ್ತುಗಳನ್ನು ವಿಧಿಸಿದೆ.
ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ವರ್ಗದ ಜನ ಭೂ ರಹಿತರಾಗುವುದನ್ನು ತಪ್ಪಿಸುವ ಉದ್ದೇಶದಿಂದ ಕಂದಾಯ ಇಲಾಖೆ ಗುರುವಾರ ಸುತ್ತೋಲೆ ಹೊರಡಿಸಿದ್ದು, 2009ರ ಸುತ್ತೋಲೆಯನ್ನು ಹಿಂಪಡೆದುಕೊಂಡಿದೆ.
‘ಪರಿಶಿಷ್ಟಜಾತಿ ಮತ್ತು ಪಂಗಡ ವರ್ಗದ ಜನರಿಗೆ ಮಂಜೂರು ಮಾಡಿರುವ ಜಮೀನು ಪರಭಾರೆಗೆ ಸರ್ಕಾರದ ಪೂರ್ವಾನುಮತಿ ಕೋರಿ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಅರ್ಜಿದಾರರು ಬದಲಿ ಜಮೀನನ್ನು ಕ್ರಯಕ್ಕೆ ಪಡೆದುಕೊಂಡ ಬಗ್ಗೆ ಶುದ್ಧ ನೋಂದಣಿ ಕ್ರಯ ಪತ್ರ ಹಾಜರುಪಡಿಸಿದರೆ ಮಾತ್ರ ಅಂಥ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕು' ಎಂದು ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ಪಿಟಿಸಿಎಲ್ ಕಾಯ್ದೆಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಜಿಲ್ಲಾಧಿಕಾರಿಗಳು ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಬೇಕು. ಪ್ರಾದೇಶಿಕ ಆಯುಕ್ತರು ನಿಯಮಾನುಸಾರ ಪರಿಶೀಲಿಸಿ ಅದನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಎಲ್ಲಾ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರ್‌ಗಳಿಗೆ ಸೂಚಿಸಿದೆ.
ಪಿಟಿಸಿಎಲ್ ಕಾಯ್ದೆ ಅಡಿ ಜಮೀನು ಮಾರಾಟ ಮಾಡಲು ಅನುಮತಿ ಕೋರಿ ಸಲ್ಲಿಕೆಯಾಗುತ್ತಿದ್ದ ಪ್ರಸ್ತಾವನೆಗಳನ್ನು ಕಳುಹಿಸುವ ಸಂದರ್ಭದಲ್ಲಿ ಪ್ರಾದೇಶಿಕ ಆಯುಕ್ತರ ಹಂತದಲ್ಲಿ ವಿಳಂಬವಾಗುತ್ತಿತ್ತು. ಹೀಗಾಗಿ ಎಲ್ಲಾ ಜಿಲ್ಲಾಧಿಕಾರಿಗಳು ನೇರವಾಗಿ ಪಿಟಿಸಿಎಲ್ ಕಾಯ್ದೆಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ನೇರವಾಗಿ ಸಲ್ಲಿಸುತ್ತಿದ್ದರು. ಈ ವರ್ಗದ ಜನರಿಗೆ ಮಂಜೂರಾಗಿರುವ ಜಮೀನುಗಳನ್ನು ಅತ್ಯಂತ ಕಡಿಮೆ ದರದಲ್ಲಿ ಖರೀದಿಸುತ್ತಿರುವ ಹಲವು ಪ್ರಭಾವಿ ಸಂಘ, ಸಂಸ್ಥೆಗಳು, ವ್ಯಕ್ತಿಗಳು ಅತ್ಯಂತ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನಲೆಯಲ್ಲಿ ಕಂದಾಯ ಇಲಾಖೆ ಹೊಸ ಸುತ್ತೋಲೆ ಹೊರಡಿಸಿದೆ.
ಜಮೀನುಗಳ ಬೆಲೆ ವ್ಯಾಪಕವಾಗಿ ಹೆಚ್ಚಳವಾಗುತ್ತಿರುವ ಕಾರಣ ಪಿಟಿಸಿಎಲ್ ಅಡಿ ಮಂಜೂರಾದ ಜಮೀನುಗಳು ಅವ್ಯಾಹತವಾಗಿ ಮಾರಾಟವಾಗುತ್ತಿದೆ. ಪರಿಶಿಷ್ಟಜಾತಿ, ಪಂಗಡ ವರ್ಗದ ಜನರ ಜೀವನೋಪಾಯಕ್ಕೆ ಸರ್ಕಾರ ಮಂಜೂರು ಮಾಡಿರುವ ಜಮೀನುಗಳು ಉದ್ಯಮಿಗಳು, ಕಟ್ಟಡ ನಿರ್ಮಾಣ ಸಂಸ್ಥೆಗಳು, ಪ್ರತಿಷ್ಠಿತ ಗೃಹ ನಿರ್ಮಾಣ ಸಹಕಾರ ಸಂಘಗಳು ಮತ್ತು ಪ್ರಭಾವಶಾಲಿ ರಾಜಕಾರಣಿಗಳ ಕೈ ಸೇರುತ್ತಿವೆ.
ಬೆಂಗಳೂರು, ತುಮಕೂರು ಸೇರಿ ನಗರ ವ್ಯಾಪ್ತಿಯ ಪ್ರದೇಶಗಳಲ್ಲಿ ಪರಿಶಿಷ್ಟಜಾತಿ, ಪಂಗಡ ವರ್ಗದ ಜಮೀನುಗಳನ್ನು ಮಾರಾಟ ಮಾಡಲಾಗುತ್ತಿದೆ. ಬಹುತೇಕ ಪ್ರಕರಣಗಳಲ್ಲಿ ಈ ವರ್ಗದ ಜನರ ಆರ್ಥಿಕ ಸಂಕಷ್ಟವನ್ನು ಬಲಾಢ್ಯರು ದುರುಪಯೋಗಪಡಿಸಿPæೂಂಡು ಅವರಿಗೆ ಮಂಜೂರಾಗಿರುವ ಜಮೀನುಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸುತ್ತಿದ್ದಾರೆ.
ಮಂಜೂರಾಗಿರುವ ಜಮೀನು ಮಾರಾಟ ಮಾಡಿದ ನಂತರ ಭೂರಹಿತರಾಗುತ್ತಿರುವ ಪರಿಶಿಷ್ಟಜಾತಿ, ಪಂಗಡ ವರ್ಗದ ಜನರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂಥÜ ಜಮೀನು ಮಾರಾಟ ಮಾಡುವ ಪೂರ್ವದಲ್ಲಿ ಹೊಸದಾಗಿ ಜಮೀನು ಖರೀದಿಸಬೇಕೆಂಬ ನಿಬಂಧನೆ ಪಾಲನೆಯಾಗುತ್ತಿಲ್ಲ. ಮಾರಾಟ ಮಾಡುವಾಗಲೂ ಕೇವಲ ಕ್ರಯ ಪತ್ರವನ್ನಷ್ಟೇ ಹಾಜರುಪಡಿಸಿ, ನಂತರ ಕ್ರಯ ನೋಂದಣಿ ಪತ್ರ ಮಾಡದೇ ಸರ್ಕಾರ ವಿಧಿಸಿರುವ ಷರತ್ತು, ನಿಬಂಧನೆಗಳನ್ನು ಉಲ್ಲಂಘಿಸುತ್ತಿರುವ ಪ್ರಕರಣಗಳ ಸಂಖ್ಯೆಯೂ ಹೆಚ್ಚಿವೆ. ಇದರಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು, ಉದ್ಯಮಿಗಳ ಜತೆ ಕೈ ಜೋಡಿಸಿ ಹಲವು ಜಮೀನುಗಳು ಇಂದಿಗೂ ಮಾರಾಟವಾಗುತ್ತಿವೆ.
ಪಿಟಿಸಿಎಲ್ ಕಾಯ್ದೆ ಕಲಂ 4(1)ರ ಅನ್ವಯ ಮಂಜೂರಾತಿಯ ಯಾವುದೇ ಕಾಯ್ದೆ, ಮಂಜೂರಾತಿಯ ನಿಯಮಗಳಲ್ಲಿನ ಷರತ್ತುಗಳಿಗೆ ವಿರುದ್ಧವಾಗಿ ಪರಭಾರೆ ಮಾಡುವುದು ಕಾಯ್ದೆಯ ಉಲ್ಲಂಘನೆ. ಮಂಜೂರಾತಿ ಷರತ್ತುಗಳಲ್ಲಿ ವಿಧಿಸಲಾಗಿರುವ ಪರಭಾರೆ ನಿಷೇಧ ಅವಧಿ ಪೂರ್ಣಗೊಂಡಿಲ್ಲದ ಜಮೀನುಗಳನ್ನು ಪರಭಾರೆ ಮಾಡಲು ಅನುಮತಿ ನೀಡಲು ಅವಕಾಶವಿಲ್ಲ. ಆದರೂ ಪಿಟಿಸಿಎಲ್ ಅಡಿ ಮಂಜೂರಾಗಿರುವ ಜಮೀನುಗಳು ಮಾರಾಟವಾಗುತ್ತಲೇ ಇವೆ.
ಹತ್ತು ವರ್ಷಗಳಲ್ಲಿ ಪಿಟಿಸಿಎಲ್ ಕಾಯ್ದೆಯಡಿ ಒಟ್ಟು 22,938 ಪ್ರಕರಣಗಳು ಉಲ್ಲಂಘನೆಯಾಗಿ ನೋಂದಣಿಯಾಗಿವೆ. ಈ ಪೈಕಿ 18,165 ಪ್ರಕರಣಗಳನ್ನು ಕಂದಾಯ ಇಲಾಖೆ ಬಗೆಹರಿಸಿದೆ. ಉಳಿದ 4,773 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.