ಖಾಸಗಿ ಶಾಲೆಯಂತೆ ಸರ್ಕಾರಿ ಶಾಲೆಗೂ ವೆಬ್‌ಸೈಟ್!

By Web DeskFirst Published Jun 3, 2019, 8:44 AM IST
Highlights

ಶಿಕ್ಷಣ ಇಲಾಖೆ ವೆಬ್‌ಸೈಟ್‌ನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ ಮಾಹಿತಿ | ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯಲು ಈ ತಂತ್ರ | ಸೌಲಭ್ಯ, ಪಠ್ಯೇತರ ಚಟುವಟಿಕೆ, ಶಿಕ್ಷಕರ ಸಂಖ್ಯೆ ಇತ್ಯಾದಿ ಮಾಹಿತಿಗಳು ವೆಬ್‌ಸೈಟ್‌ನಲ್ಲಿ ಲಭ್ಯ| 

ಬೆಂಗಳೂರು (ಜೂ. 02): ಶಾಲೆಯಲ್ಲಿ ಸಿಗುವ ಶಿಕ್ಷಣ ಕ್ರಮ, ಸೌಲಭ್ಯಗಳನ್ನು ವೆಬ್‌ಸೈಟ್‌ನಲ್ಲಿ ಪ್ರಚಾರ ಮಾಡುವ ಮೂಲಕ ಮಕ್ಕಳನ್ನು ತಮ್ಮ ಶಾಲೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಸೆಳೆಯುವ ಮಾದರಿಯಲ್ಲಿ ಇನ್ನು ಮುಂದೆ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳ ವಿವರಗಳೂ ಬೆರಳ ತುದಿಯಲ್ಲಿ, ಶೀಘ್ರದಲ್ಲೇ ಲಭ್ಯವಾಗಲಿದೆ.

ಬಹುತೇಕ ಖಾಸಗಿ ಶಾಲೆಗಳು ತಮ್ಮಲ್ಲಿರುವ ಶಿಕ್ಷಣ ವ್ಯವಸ್ಥೆ, ಮೂಲ ಸೌಕರ್ಯ, ಬೋಧನಾ ವ್ಯವಸ್ಥೆ, ಪಠ್ಯೇತರ ಚಟುವಟಿಕೆಗಳನ್ನು ವೆಬ್‌ಸೈಟ್‌ನಲ್ಲಿ ಅಪ್ ಲೋಡ್ ಮಾಡಿ ಪೋಷಕರನ್ನು ಸೆಳೆಯುತ್ತಿವೆ. ಅದೇ ರೀತಿ ಸರ್ಕಾರಿ ಶಾಲೆಗಳನ್ನು ಕೂಡ ಮೇಲ್ದರ್ಜೆಗೇರಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ರಾಜ್ಯದಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೇರಿ ಒಟ್ಟಾರೆ 76 ಸಾವಿರಕ್ಕೂ ಹೆಚ್ಚಿನ ಶಾಲೆಗಳಿವೆ. ಈ ಎಲ್ಲಾ ಶಾಲೆಗಳ ಇತಿಹಾಸ, ಬೆಳೆದು ಬಂದ ಬಗೆ, ಪ್ರಸ್ತುತ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ, ಶಿಕ್ಷಕರು, ಬೋಧನಾ ವ್ಯವಸ್ಥೆ, ಪಠ್ಯೇತರ ಚಟುವಟಿಕೆ, ಆಟದ ಮೈದಾನ, ಶಾಲೆಗಳಲ್ಲಿರುವ ಕೊರತೆಗಳು, ಶಾಲೆಗಳ ಬೇಡಿಕೆಗಳು ಸೇರಿದಂತೆ ಶಾಲೆಗಳ ಸಂಪೂರ್ಣ ಚಿತ್ರಣ ಇನ್ನು ಮುಂದೆ ಇಲಾಖೆ ವೆಬ್‌ಸೈಟ್‌ನಲ್ಲಿಯೇ ಲಭ್ಯವಾಗಲಿದೆ.

‘ನನ್ನ ಶಾಲೆ ಬಗ್ಗೆ ತಿಳಿ’: ಶಿಕ್ಷಣ ಇಲಾಖೆಯು ಸದ್ಯ ಶಾಲೆಗಳ ರಿಪೋರ್ಟ್ ಕಾರ್ಡ್ ಸಿದ್ಧಗೊಳಿಸುತ್ತಿದೆ. ಇದಾದ ಬಳಿಕ ‘ನೌ ಮೈ ಸ್ಕೂಲ್‌‘ (ಝ್ಞಟಡಿ ಞ ಠ್ಚಟಟ್ಝ) ಎಂಬ ಶೀರ್ಷಿಕೆಯಡಿ ರಾಜ್ಯದ ಪ್ರತಿ ಶಾಲೆಗಳ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಅಪ್ ಲೋಡ್ ಮಾಡಲಿದೆ.

ಪ್ರಸ್ತುತ ರಾಜ್ಯದಲ್ಲಿ 43,492 ಸರ್ಕಾರಿ ಪ್ರಾಥಮಿಕ, 4,496 ಪ್ರೌಢಶಾಲೆ, 3015 ಅನುದಾನಿತ ಪ್ರಾಥಮಿಕ, 3801 ಪ್ರೌಢಶಾಲೆ, 14,428 ಖಾಸಗಿ ಅನುದಾನಿತ ಪ್ರಾಥಮಿಕ ಮತ್ತು 6746 ಪ್ರೌಢಶಾಲೆಗಳಿವೆ. ಈ ಎಲ್ಲಾ ಶಾಲೆಗಳ ಶಿಕ್ಷಕರ ಮಾಹಿತಿ, ವಿದ್ಯಾರ್ಥಿಗಳ ಮಾಹಿತಿ, ಮೂಲ ಸೌಕರ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಫೋಟೋ ಸಹಿತ ಅಪ್‌ಲೋಡ್ ಮಾಡಲಾಗುತ್ತದೆ.

ಯಾಕೆ ಈ ಯೋಜನೆ: ಖಾಸಗಿ ಶಾಲೆಗಳ ಮಾದರಿಯಲ್ಲಿಯೇ ರಾಜ್ಯದ ಪ್ರತಿ ಶಾಲೆಗಳ ಮಾಹಿತಿ ಮತ್ತು ಇತಿಹಾಸ ತಿಳಿಸುವುದರಿಂದ ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಹೇಗಿದೆ ಎಂದು ತಿಳಿಯುತ್ತದೆ. ಇಲಾಖೆಗೆ ಅನುದಾನ ಒದಗಿಸಲು, ಶಿಕ್ಷಕರ ವರ್ಗಾವಣೆ, ಮೂಲ ಸೌಕರ್ಯ ಕಲ್ಪಿಸಲು ಸುಲಭವಾಗುತ್ತದೆ. ಮತ್ತೊಂದೆಡೆ, ಯಾವುದೇ ಕುಗ್ರಾಮದ ಶಾಲೆಗಳ ಮಾಹಿತಿ ವೆಬ್ ಸೈಟ್‌ನಲ್ಲಿ ದೊರೆಯುವುದರಿಂದ ಹಿರಿಯ ವಿದ್ಯಾರ್ಥಿಗಳು ತಮ್ಮ ಶಾಲೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಬಹುದು.

ಶಾಲೆಗಳು ದುಃಸ್ಥಿತಿಯಲ್ಲಿದ್ದರೆ, ತಮ್ಮ ಕೈಲಾದ ಸಹಾಯ ಮಾಡಿ ಪ್ರಗತಿ ಕಾಣುವಂತೆಯೂ ಮಾಡಬಹುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

- ಶಿವಮಾದು 

click me!