
ಬೆಂಗಳೂರು(ಸೆ.07): ಗೌರಿ ಲಂಕೇಶ ಹತ್ಯೆ ವಿಚಾರದಲ್ಲಿ ರಾಜಕೀಯ ಪಕ್ಷಗಳ ಕೆಸರೆರಚಾಟ ತೀವ್ರಗೊಂಡಿದೆ. ಚಡ್ಡಿಗಳ ಮಾರಣ ಹೋಮ ಅಂತಾ ಗೌರಿ ಬರೆಯದಿದ್ದರೆ ಅವರ ಹತ್ಯೆಯಾಗುತ್ತಿರಲಿಲ್ಲವೇನೋ ಅಂತಾ ಬಿಜೆಪಿ ಶಾಸಕ ಜೀವರಾಜ್ ಹೇಳಿಕೆ ನೀಡಿದ್ದರೆ, ಜೀವರಾಜ್ ಹೇಳಿಕೆ ನೋಡಿದರೆ ಗೌರಿ ಹತ್ಯೆ ಹಿಂದೆ ಇವರೆಲ್ಲಾ ಇದ್ದಾರೆ ಅಂತಾ ಅನ್ಸಲ್ವಾ ಅಂತಾ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣ ಈಗ ಭಾರೀ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ರಾಜಕೀಯ ಮುಖಂಡರ ನಡುವೆ ಆರೋಪ-ಪ್ರತ್ಯಾರೋಪ ಜೋರಾಗಿದೆ. ಇದಕ್ಕೆ ಕಾರಣವಾಗಿದ್ದು ನಿನ್ನೆ ಶೃಂಗೇರಿ ಶಾಸಕ ಜೀವರಾಜ್ ನೀಡಿದ್ದ ವಿವಾದಾತ್ಮಕ ಹೇಳಿಕೆ.
ಹಿಂದುತ್ವದ ಮನಸುಗಳು ಗೌರಿ ಲಂಕೇಶ ಅವರನ್ನ ಕೊಂದಿವೆ ಅನ್ನೋ ಮಾತುಗಳ ಜೋರಾದ ಬೆನ್ನಲ್ಲೆ ಜೀವರಾಜ್ ವಿವಾದಾತ್ಮಕ ಹೇಳಿಕೆ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಚಡ್ಡಿಗಳ ಮಾರಣಹೋಮ ಎಂದು ಬರೆಯದೆ ಇದ್ದಿದ್ದರೆ ಹತ್ಯೆ ಆಗ್ತಿತ್ತಾ ಅಂತಾ ಜೀವರಾಜ್ ಹೇಳಿದ್ದರು. ಈ ಹೇಳಿಕೆ ಉಲ್ಲೇಖಿಸಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಆದರೆ ಸಿಎಂ ಹೇಳಿಕೆ ನಂತರ ಮಾತನಾಡಿರುವ ಜೀವರಾಜ್ ಅದು ಅವಸರದಲ್ಲಿ ಹೇಳಿದ್ದು, ವಿವಾದವಾಗಿದ್ದರೆ ಆ ಪದವನ್ನು ವಾಪಸ್ ಪಡೆಯುತ್ತೇನೆ ಎಂದಿದ್ದಾರೆ.
ಮತ್ತೊಂದೆಡೆ, ಲಂಕೇಶ್ ಕುಟುಂಬ ಸದಸ್ಯರ ನಡುವೆಯೇ ಈ ಪ್ರಕರಣದಲ್ಲಿ ಗೊಂದಲ ಸೃಷ್ಟಿಯಾಗಿದೆ. ಗೌರಿಗೆ ನಕ್ಸಲರಿಂದ ಬೆದರಿಕೆ ಬಂದಿತ್ತು ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದರು. ಆದರೆ ಅಂತಾ ಬೆದರಿಕೆಗಳೇನು ಬಂದಿಲ್ಲ ಅಂತಾ ಕವಿತಾ ಲಂಕೇಶ್ ಸ್ಪಷ್ಟಪಡಿಸಿದ್ದಾರೆ.
ಒಟ್ಟಿನಲ್ಲಿ ಪತ್ರಕರ್ತೆ ಗೌರಿ ಹತ್ಯೆ ಪ್ರಕರಣ ಈಗ ರಾಜಕೀಯ ಬಣ್ಣ ಪಡೆದಿದೆ. ಇದು ಎಲ್ಲಿ ತನಿಖೆಯ ಹಾದಿಗೆ ತೊಂದರೆಯೊಡ್ಡುತ್ತೋ ಅನ್ನೋದೇ ಆತಂಕ.
-ಶ್ರೀನಿವಾಸ ಹಳಕಟ್ಟಿ, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.