ಬಾನ್ಕುಳಿಯಲ್ಲಿ ಗೋಸ್ವರ್ಗ ಲೋಕಾರ್ಪಣೆ

First Published May 28, 2018, 12:25 PM IST
Highlights

ಗೋ ಪ್ರೇಮಿಗಳ ಪ್ರತೀಕವಾದ ಸಿದ್ದಾಪುರ ಸಮೀಪದ ರಾಮದೇವ ಬಾನ್ಕುಳಿ ಮಠದಲ್ಲಿ ನಿರ್ಮಾಣವಾಗಿರುವ ಜಗತ್ತಿನ ಮಾದರಿ ಗೋಶಾಲೆ 'ಗೋಸ್ವರ್ಗ' ಲೋಕಾರ್ಪಣೆ ಆಯಿತು. ಊರು ಊರುಗಳಲ್ಲಿ ಗೋಶಾಲೆಗಳನ್ನು ನಿರ್ಮಾಣ ಮಾಡುವುದಾಗಿ ರಾಘವೇಶ್ವರ ಶ್ರೀಗಳು ಈ ಸಂದರ್ಭದಲ್ಲಿ ಸಂಕಲ್ಪ ಮಾಡಿದರು.

ಸಿದ್ದಾಪುರ: ಒಳ್ಳೆಯ ಕೆಲಸಗಳನ್ನು ಅವರು ಮಾಡಲಿ, ಇವರು ಮಾಡಲಿ ಎಂದು ಕಾಯುತ್ತಾ ಕೂರುವುದು ಸರಿಯಲ್ಲ. ಉತ್ತಮ ಹಾಗೂ ಆಗಬೇಕಾದ ಕಾರ್ಯಗಳನ್ನು ನಾವೇ ಮಾಡಬೇಕು. ಹಾಗಾಗಿ ಈ ಕಾರ್ಯಕ್ಕೆ ನಾವು ತೊಡಗಿಸಿಕೊಂಡೆವು. ಇದನ್ನು ಮಾದರಿಯಾಗಿಸಿಕೊಂಡು ಊರು ಊರುಗಳಲ್ಲಿ ಗೋಶಾಲೆಗಳನ್ನು ನಿರ್ಮಾಣ ಮಾಡುವ ಕಾರ್ಯ ನಡೆಯಬೇಕಾಗಿದೆ. ಗೋಶಾಲೆಗಳು ಹಲವಿದೆ, ಆದರೆ ಜಗತ್ತಿನ ಏಕೈಕ ಗೋಸ್ವರ್ಗ ಇದಾಗಿದೆ.

ಗೋವಿನ ನೋವಿಗೆ ಅಂತ್ಯ ಹಾಡಲು, ಗೋಸೌಖ್ಯ ಕೇಂದ್ರಿತ ಗೋದಾಮ ನಿರ್ಮಿಸಲು ಸಂಕಲ್ಪಿಸಿದೆವು ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು. ಅವರು ಸಿದ್ದಾಪುರ ಸಮೀಪದ ರಾಮದೇವ ಬಾನ್ಕುಳಿ ಮಠದಲ್ಲಿ ನಿರ್ಮಾಣವಾಗಿರುವ ಜಗತ್ತಿನ ಮಾದರಿ ಗೋಶಾಲೆ 'ಗೋಸ್ವರ್ಗ'ದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಗೋವಿಗೆ ಗೋಗ್ರಾಸ ನೀಡಿ ಆಶೀರ್ವಚನ ನೀಡಿದರು.

ಎಂಬತ್ತು ದಿನಗಳಲ್ಲಿ ಗೋಸ್ವರ್ಗ ನಿರ್ಮಾಣವಾಗಿದ್ದು ಗೋಪ್ರೇಮಿಗಳ ಶಕ್ತಿಯ ಪ್ರತೀಕ. ಇಲ್ಲಿ ನಾವು ನಿಮಿತ್ತ ಮಾತ್ರ. ಯಾವುದೋ ದೈವಶಕ್ತಿಯ ಅನುಗ್ರಹದಿಂದ ಇದು ಸಾಧ್ಯವಾಗಿದೆ. ದೇವ ಸಂಕಲ್ಪ ಇದ್ದಾಗ ಆ ಕಾರ್ಯ ಸಾಧ್ಯವಾಗುತ್ತದೆ ಎನ್ನುವುದಕ್ಕೆ ಇದು ಉದಾಹರಣೆ. ಇಂದು ನಾಡಿನಲ್ಲಿ ಗೋಪ್ರೇಮಿಗಳ ಸಂಖ್ಯೆ ಹಾಗೂ ಗೋಪ್ರೇಮ ವೃದ್ಧಿಯಾಗುತ್ತಿರುವುದು ಸಂತಸದ ವಿಚಾರ. ಇಂದು ಇರುವ ಗೋಸ್ವರ್ಗ ಕೃಷ್ಣ ಶಿಶು ಮಾತ್ರ. ಮುಂದಿನ ದಿನಗಳಲ್ಲಿ ಗೋಸ್ವರ್ಗದ ವಿಶ್ವರೂಪ ದರ್ಶನವಾಗಲಿದೆ. ಯಾವುದು ಸರಿಯೋ ಅದನ್ನು ಮಾಡಬೇಕು. ಸಾಧ್ಯಾಸಾಧ್ಯತೆಯ ಕುರಿತು ಚಿಂತಿಸಬಾರದು.  ಕಾರ್ಯಗಳನ್ನು ಮಾಡುವಾಗ ಅಪವಾದ- ಆಪತ್ತು - ವಿಪತ್ತುಗಳು ಎದುರಾಗಬಹುದು, ಆದರೆ ನಾವು ಸರಿಯಾದ ಕಾರ್ಯಗಳನ್ನು ಎಡಬಿಡದೇ ಮಾಡಬೇಕು ಎಂದರು. ಶ್ರೀಶೈಲ ಜಗದ್ಗುರು ಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಗೋಸಂದೇಶನೀಡಿದರು. 

ಈ ವೇಳೆ ಲಕ್ಷ ಗೋಗಂಗಾರತಿಯನ್ನುಸಲ್ಲಿಸಲಾಯಿತು. 

click me!