
ಬೆಂಗಳೂರು(ಜುಲೈ 12): ದೊಡ್ಡ ದೊಡ್ಡ ಸಂಸ್ಥೆಗಳು ತಮ್ಮ ಹಾದಿ ಸುಗಮವಾಗಿಸಲು ಸಣ್ಣಪುಟ್ಟ ಕಂಪನಿಗಳನ್ನು ಸೆಳೆದುಕೊಳ್ಳುವ ಟ್ರೆಂಡ್ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದು ಎಲ್ಲಾ ಕ್ಷೇತ್ರಗಳಿಗೂ ಅನ್ವಯಾಗುತ್ತದೆ. ಇದೀಗ ಗೂಗಲ್ ಸಂಸ್ಥೆಯು ಬೆಂಗಳೂರಿನ ಹೊಸ ಸ್ಟಾರ್ಟ್'ಅಪ್'ವೊಂದನ್ನು ಖರೀದಿಸಿದೆ. ನಾಲ್ಕು ತಿಂಗಳ ಹಿಂದಷ್ಟೇ ಆರಂಭಗೊಂಡ ಬೆಂಗಳೂರು ಮೂಲದ ಹಳ್ಳಿ ಲ್ಯಾಬ್ಸ್ ಈಗ ಗೂಗಲ್ ತೆಕ್ಕೆಗೆ ಬಿದ್ದಿದೆ. ಕೃತಕ ಬುದ್ಧಿಮತ್ತೆ(Artificial Intelligence) ಮತ್ತು ಯಂತ್ರ ಕಲಿಕೆ (Machine Learning) ತಂತ್ರಜ್ಞಾನದಲ್ಲಿ ಪಕ್ವತೆ ಹೊಂದಿರುವ ಹಳ್ಳಿ ಲ್ಯಾಬ್ಸ್'ನ ಖರೀದಿ ಮೂಲಕ ಭಾರತದಲ್ಲಿ ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವುದು ಗೂಗಲ್'ನ ಉದ್ದೇಶವಾಗಿದೆ.
ಹಳ್ಳಿ ಲ್ಯಾಬ್ಸ್'ನಿಂದ ಉಪಯೋಗವೇನು?
ಇಂಟರ್ನೆಟ್'ನಲ್ಲಿ ಸ್ಥಳೀಯ ಭಾಷೆಗಳ ಬಳಕೆ ಹೆಚ್ಚಾಗುತ್ತಿದೆ. ತಂತ್ರಜ್ಞಾನವನ್ನು ಸ್ಥಳೀಯ ಭಾಷೆಗಳೊಂದಿಗೆ ಮೇಳೈಸುವ ಪ್ರಯತ್ನಗಳು ನಡೆಯುತ್ತಿವೆ. ನಾವು ಉಚ್ಛರಿಸುವ ಮಾತುಗಳನ್ನು ಪಠ್ಯವನ್ನಾಗಿ ಪರಿವರ್ತಿಸುವ ತಂತ್ರಜ್ಞಾನವು ಇನ್ನೂ ಆರಂಭಿಕ ಹಂತದಲ್ಲಿದೆ. ಮಾತುಗಳನ್ನು ಪಠ್ಯಕ್ಕೆ ಪರಿವರ್ತಿಸುವ, ಧ್ವನಿಯನ್ನು ಗುರುತಿಸು ತಂತ್ರಜ್ಞಾನದಲ್ಲಿ ಹಳ್ಳಿ ಲ್ಯಾಬ್ಸ್ ಕಂಪನಿ ಎಕ್ಸ್'ಪರ್ಟ್ ಆಗಿದೆ. ಗೂಗಲ್ ಕೂಡ ಇದೇ ದಿಸೆಯಲ್ಲಿ ವರ್ಕೌಟ್ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹಳ್ಳಿ ಲ್ಯಾಬ್ಸ್ ಕಂಪನಿಯನ್ನೇ ಗೂಗಲ್ ತನ್ನ ತೆಕ್ಕೆಗೆ ಎಳೆದುಕೊಂಡಿದೆ.
ಸ್ಟೇಝಿಲ್ಲಾ ಸಂಸ್ಥೆಯ ಮಾಜಿ ಉದ್ಯೋಗಿಗಳಾದ ಪಂಕಜ್ ಗುಪ್ತಾ ಮತ್ತು ಪ್ರಧ್ಯುಮನ್ ಝಾಲಾ ಎಂಬುವರು ನಾಲ್ಕು ತಿಂಗಳ ಹಿಂದೆ ಬೆಂಗಳೂರಿನಲ್ಲಿಲ ಹಳ್ಳಿ ಲ್ಯಾಬ್ಸ್ ಕಂಪನಿ ಸ್ಥಾಪಿಸಿದ್ದರು. ಏನು ಬೇಕಾದರೂ ಮಾಡುವ ಅತಿಮಾನುಷ ಶಕ್ತಿಯನ್ನು ಮನುಷ್ಯರಿಗೆ ಒದಗಿಸುವುದು ನಮ್ಮ ಗುರಿ ಎಂಬುದು ಈ ಹಳ್ಳಿ ಲ್ಯಾಬ್ಸ್ ಕಂಪನಿಯ ಧ್ಯೇಯೋದ್ದೇಶವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.