
ಬೆಂಗಳೂರು : ಉಪನ್ಯಾಸಕರು ಹಾಗೂ ಶಿಕ್ಷಕರ ವರ್ಗಾವಣೆ ವಿಷಯದಲ್ಲಿ ರಾಜ್ಯ ಸರ್ಕಾರವು ಶೀಘ್ರದಲ್ಲೇ ಕೆಲವು ನಿಯಮಗಳನ್ನು ಸಡಿಲಿಸುವ ಸಾಧ್ಯತೆ ಇದ್ದು, ಬೋಧಕ ವರ್ಗಕ್ಕೆ ಕೊಂಚ ನಿರಾಳತೆ ತರುವ ನಿರೀಕ್ಷೆಯಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನ್ಯಾಸಕರ ಪತಿ-ಪತ್ನಿ ಪ್ರಕರಣದಲ್ಲಿ ಐದು ವರ್ಷವಿರುವ ವರ್ಗಾವಣೆ ನಿಯಮವನ್ನು ಮೂರು ವರ್ಷಕ್ಕೆ ಕಡಿತ ಮಾಡುವ ಹಾಗೂ 58 ವರ್ಷ ಮೀರಿದ ಎಲ್ಲ ವರ್ಗದ (ಶಾಲೆಯಿಂದ ಪ.ಪೂ. ಕಾಲೇಜಿನವರೆಗೆ) ಶಿಕ್ಷಕರಿಗೆ ವರ್ಗಾವಣೆ ವಿನಾಯ್ತಿ ದೊರೆಯುವ ಸಾಧ್ಯತೆಯಿದೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್. ಮಹೇಶ್ ನೇತೃತ್ವದಲ್ಲಿ ಶನಿವಾರ ನಡೆದ ಶಿಕ್ಷಣ ಕ್ಷೇತ್ರ ಪ್ರತಿನಿಧಿಸುವ ವಿಧಾನ ಪರಿಷತ್ತು ಸದಸ್ಯರು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಸರ್ಕಾರ ಶೀಘ್ರವೇ ಈ ಬಗ್ಗೆ ತನ್ನ ತೀರ್ಮಾನ ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ.
ಪತಿ-ಪತ್ನಿ ಪ್ರಕರಣದಲ್ಲಿ ಮೂರು ವರ್ಷಕ್ಕೇ ವರ್ಗಾವಣೆಗೆ ಅವಕಾಶ ನೀಡುವ ನಿಯಮ ಪ್ರಸ್ತುತ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ವೇಳೆ ಪಾಲನೆಯಾಗುತ್ತಿದೆ. ಇದೇ ನಿಯಮವನ್ನು ಪಿಯು ಉಪನ್ಯಾಸಕರಿಗೂ ಅನ್ವಯ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಅಲ್ಲದೆ, ವಯೋಮಿತಿ 58 ಮೀರಿದ ಶಿಕ್ಷಕರನ್ನು ವರ್ಗಾವಣೆ ನೀತಿಯಿಂದ ಮುಕ್ತಿ ನೀಡಲು ಸಭೆ ಸಹಮತ ವ್ಯಕ್ತಪಡಿಸಿತು ಎಂದು ತಿಳಿದುಬಂದಿದೆ.
ಜತೆಗೆ, ಒಂದೇ ಸ್ಥಳದಲ್ಲಿ ಮೂರು ವರ್ಷ ಪೂರ್ಣಗೊಳಿಸಿದ ಮುಖ್ಯ ಶಿಕ್ಷಕರು ಮತ್ತು ಪ್ರಾಂಶುಪಾಲರನ್ನು ವರ್ಗಾವಣೆ ಮಾಡುಲಾಗುತ್ತಿದೆ. ಇದನ್ನು ಎರಡು ವರ್ಷಕ್ಕೆ ಇಳಿಸಲು ಸಭೆಯಲ್ಲಿ ಚರ್ಚೆ ನಡೆಯಿತು ಎಂದು ಮೂಲಗಳು ಹೇಳಿವೆ.
ಖುದ್ದು ಪರಿಶೀಲನೆ:
ನೂತನವಾಗಿ ಕೆಲವು ಅನರ್ಹ ಖಾಸಗಿ ಪಿಯು ನೂತನ ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ ಎನ್ನಲಾದ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವರು, ಖುದ್ದು ಪರಿಶೀಲನೆ ನಡೆಸುತ್ತೇನೆ. ಯಾವುದೇ ಕಾರಣಕ್ಕೂ ಅಕ್ರಮಕ್ಕೆ ಎಡೆಮಾಡಿಕೊಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಹೊಸ ಕಾಲೇಜುಗಳಿಗೆ ಅನುಮತಿ ನೀಡಿರುವ ಸಂಬಂಧ ತನಿಖೆಗೆ ಒಳಪಡಿಸುವುದಾಗಿ ಸಚಿವರು ಹೇಳಿಕೆ ನೀಡಿ ಒಂದು ವಾರ ಕಳೆದಿದೆ. ಆದರೂ ಯಾವುದೇ ಸಮಿತಿ ನೇಮಕ ಮಾಡುವ ಪ್ರಕ್ರಿಯೆ ಕೈಗೊಂಡಿಲ್ಲ. ಅಲ್ಲದೆ, ಚುನಾವಣಾ ನೀತಿ ಸಂಹಿತೆ ಜಾರಿಯಿದ್ದ ವೇಳೆಯಲ್ಲಿ ಹೊಸ ಕಾಲೇಜುಗಳಿಗೆ ಅನುಮತಿ ನೀಡುವ ಅವಶ್ಯಕತೆ ಏನಿತ್ತು ಎಂದು ವಿಧಾನ ಪರಿಷತ್ತು ಸದಸ್ಯರು, ಅಧಿಕಾರಿಗಳು ಮತ್ತು ಸಚಿವರನ್ನು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಎನ್. ಮಹೇಶ್, ಅನುಮತಿ ನೀಡಿರುವ ಕಾಲೇಜುಗಳ ಫೈಲ್‌ಗಳನ್ನು ಖುದ್ದಾಗಿ ನಾನೇ ಪರಿಶೀಲನೆ ನಡೆಸುತ್ತೇನೆ. ನಿಯಮಗಳನ್ನು ಉಲ್ಲಂಘಿಸಿ ಯಾವುದೇ ಕಾಲೇಜುಗಳಿಗೆ ಅನುಮತಿ ನೀಡುವ ಅವಶ್ಯವಿಲ್ಲ ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ವಿಧಾನ ಪರಿಷತ್ತು ಸದಸ್ಯರಾದ ಅರುಣ್ ಶಹಾಪುರ, ಮರಿತಿಬ್ಬೇಗೌಡ, ಪುಟ್ಟಣ್ಣ, ಶ್ರೀಕಂಟೇಗೌಡ, ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, ಪಿಯು ಇಲಾಖೆ ನಿರ್ದೇಶಕಿ ಸಿ. ಶಿಖಾ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ರೇಜು, ನಿರ್ದೇಶಕ ಬಸವರಾಜು ಪಾಲ್ಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.