
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಜನಸಂಖ್ಯೆ ಹೆಚ್ಚಳದ ಬಗ್ಗೆ ಅರಿವು ಮೂಡುತ್ತಿದೆಯಾದರೂ ಹಲವು ಕಡೆ ಬಹುಪತ್ನಿತ್ವ ಮತ್ತು ಬಹುಸಂತಾನಗಳು ತೀರಾ ಸಾಮಾನ್ಯ ವಿಚಾರವಾಗಿವೆ. ಪಾಕಿಸ್ತಾನದಲ್ಲಿ ಒಬ್ಬ ಮಹಿಳೆ ಸರಾಸರಿಯಾಗಿ 3 ಮಕ್ಕಳನ್ನು ಹಡೆಯುತ್ತಾಳಂತೆ. ಇಷ್ಟೊಂದು ಮಕ್ಕಳನ್ನು ಹುಟ್ಟಿಸಿದರೆ ಓದಿಸುವುದು, ಪಾಲಿಸುವುದು ಕಷ್ಟವಾಗುತ್ತದೆ ಎಂಬ ಅರಿವು ಈ ಜನರಿಗಿಲ್ಲವಾ? ಅತೀ ಹೆಚ್ಚು ಮಕ್ಕಳನ್ನು ಹುಟ್ಟಿಸಿದ ಮೂವರು ಪಾಕಿಸ್ತಾನೀಯರಿಗೆ ಈ ಪ್ರಶ್ನೆಯನ್ನು ಮುಂದಿಟ್ಟಾಗ, ಅವರು ಕೊಟ್ಟ ಉತ್ತರ ಏನಿರಬಹುದು?
ಹುಟ್ಟಿಸಿದ ದೇವರು ಹುಲ್ಲು ಮೇಯಿಸದೇ ಇರುತ್ತಾನೆಯೇ! ಎಂಬ ಗಾದೆ ಮಾತು ನಮ್ಮಲ್ಲಿದೆ. ಅದೇ ಗಾದೆ ಮಾತು ಪಾಕಿಸ್ತಾನದಲ್ಲಿ ಚಾಲನೆಯಲ್ಲಿದೆ. ಆ ಮೂವರು ಮಹಾ ಅಪ್ಪಂದಿರು ಕೊಟ್ಟ ಉತ್ತರವೂ ಇದೆಯೇ.
"ದೇವರು ಮಾನವರನ್ನೂ ಒಳಗೊಂಡಂತೆ ಇಡೀ ವಿಶ್ವವನ್ನೇ ಸೃಷ್ಟಿಸಿದ್ದಾನೆ. ಹೀಗಿರುವಾಗ ಮಗು ಹುಟ್ಟಿಸುವ ಪ್ರಕೃತಿ ಸಹಜ ಕ್ರಿಯೆಯನ್ನ ನಾನೇಕೆ ನಿಲ್ಲಿಸಬೇಕು?" ಎಂದು ಗುಲ್ಜಾರ್ ಖಾನ್ ಹೇಳುತ್ತಾರೆ. ಅಲ್ಲಾಹು ಬಗ್ಗೆ ಅದಮ್ಯ ನಂಬಿಕೆ ಹೊಂದಿರುವ 57 ವರ್ಷದ ಗುಲ್ಜಾರ್ ಖಾನ್'ಗೆ 36 ಮಕ್ಕಳಿದ್ದಾರೆ. "ನನ್ನ ಮಕ್ಕಳಿಗೆ ಕ್ರಿಕೆಟ್ ಆಡಲು ಸ್ನೇಹಿತರು ಬೇಕಿಲ್ಲ. ಅವರಲ್ಲೇ ಟೀಮ್ ಮಾಡಿಕೊಂಡು ಕ್ರಿಕೆಟ್ ಆಡಬಹುದು" ಎಂದು ಹಾಸ್ಯ ಮಾಡುತ್ತಾರೆ ಗುಲ್ಜಾರ್.
ಇನ್ನು, ಗುಲ್ಜಾರ್ ಖಾನ್ ಅವರ ಅಣ್ಣ ಮಸ್ತಾನ್ ಖಾನ್ ವಜೀರ್ ಕೂಡ 22 ಮಕ್ಕಳ ಅಪ್ಪನಾದ ಸರದಾರ. "ದೇವರೇ ಎಲ್ಲಾ ಆಹಾರವನ್ನು ಕೊಡುತ್ತೇನೆಂದು ಭರವಸೆ ಕೊಟ್ಟಿದ್ದಾನೆ. ಆದರೆ, ಜನರಿಗೆ ನಂಬಿಕೆ ಇಲ್ಲ," ಎಂದು ಮಸ್ತಾನ್ ಖಾನ್ ವಿಷಾದಿಸುತ್ತಾರೆ. ಎಷ್ಟು ಮಕ್ಕಳನ್ನು ಹುಟ್ಟಿಸಿದರೂ ದೇವರು ಹೊಟ್ಟೆಪಾಡಿನ ದಾರಿ ತೋರಿಸುತ್ತಾನೆನ್ನುವುದು ಇವರ ಅಚಲ ನಂಬಿಕೆ.
ಇನ್ನು, ಬಲೂಚಿಸ್ತಾನದ ಕ್ವೆಟ್ಟಾ ನಗರದಲ್ಲಿರುವ ಜಾನ್ ಮೊಹಮ್ಮದ್ ಎಂಬಾತ ಬರೋಬ್ಬರಿ 38 ಮಕ್ಕಳ ತಂದೆ. ಈತನಿಗೆ 100 ಮಕ್ಕಳ ಅಪ್ಪನಾಗುವ ಮಹದಾಸೆ. ಇನ್ನಷ್ಟು ಮಕ್ಕಳಿಗಾಗಿ ನಾಲ್ಕನೇ ಮದುವೆಯಾಗಲು ಪ್ರಯತ್ನಿಸುತ್ತಿರುವ ಈತನಿಗೆ ಹೆಣ್ಣೇ ಸಿಗುತ್ತಿಲ್ಲವಂತೆ. ಇಷ್ಟೊಂದು ಮಕ್ಕಳನ್ನು ಯಾಕೆ ಹುಟ್ಟಿಸುತ್ತೀಯಾ ಎಂಬ ಪ್ರಶ್ನೆಗೆ ಈತ ಮೇಲಿನ ಸೋದರರಿಗಿಂತ ಭಿನ್ನ ಉತ್ತರ ನೀಡುತ್ತಾನೆ.
"ಮುಸ್ಲಿಮರು ಹೆಚ್ಚಾದಷ್ಟೂ ಅವರ ಶತ್ರುಗಳು ಭಯಪಡುತ್ತಾರೆ. ಮುಸ್ಲಿಮರು ಹೆಚ್ಚೆಚ್ಚು ಮಕ್ಕಳನ್ನು ಹುಟ್ಟಿಸಬೇಕು," ಎಂದು ಈತ ಸಲಹೆ ನೀಡುತ್ತಾನೆ.
(ಮಾಹಿತಿ: ಫ್ರಾನ್ಸ್ ಪ್ರೆಸ್ ಸುದ್ದಿ ಸಂಸ್ಥೆ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.