ತೆಪ್ಪದಲ್ಲಿ ಕುಳಿತು ಗಬ್ಬು ನಾರುತ್ತಿದ್ದ ಬ್ಯಾರೇಜ್ ಸ್ವಚ್ಛಗೊಳಿಸಿದ ಶ್ರೀ!

By Web DeskFirst Published Apr 26, 2019, 8:03 AM IST
Highlights

ಕೆರೆಗಿಳಿದ ಸ್ವಾಮೀಜಿ| ತೆಪ್ಪದಲ್ಲಿ ಕುಳಿತು ಗಬ್ಬು ನಾರುತ್ತಿದ್ದ ಕೆರೆ ಸ್ವಚ್ಛ| ಕೊಪ್ಪಳ ಗವಿಸಿದ್ಧೇಶ್ವರ ಶ್ರೀ ಮಾದರಿ ಕಾರ್ಯ

ಕೊಪ್ಪಳ[ಏ.26]: ಸ್ವಾಮೀಜಿಗಳ ಕೈಯಲ್ಲಿ ಸಾಮಾನ್ಯವಾಗಿ ಕಾಣುವ ಕಮಂಡಲ, ದಂಡದ ಬದಲು ಇವರ ಕೈಯಲ್ಲಿ ಹರಿಗೋಲಿನ ಹುಟ್ಟು ಇತ್ತು. ಸಿಂಹಾಸನ, ಅಡ್ಡಪಲ್ಲಕ್ಕಿಯ ಬದಲು ಜನಸಾಮಾನ್ಯರ, ಜನಾನುರಾಗಿ ಸ್ವಾಮಿ ಎಂದೇ ಖ್ಯಾತರಾಗಿರುವ ಇವರು ಕುಳಿತಿದ್ದು ತೆಪ್ಪದಲ್ಲಿ. ಸುಮಾರು ಮೂರ್ನಾಲ್ಕು ತಾಸು ಹುಟ್ಟು ಹಾಕುತ್ತಾ ಹಿರೇಹಳ್ಳದ ತುಂಬೆಲ್ಲ ಓಡಾಡಿ, ಸಹಿಸಲಸಾಧ್ಯವಾದ ವಾಸನೆಯ ನಡುವೆಯೂ ಅಂತರಗಂಗೆಯನ್ನು ಸ್ವತಃ ಕಿತ್ತೆಸೆಯುವ ಮೂಲಕ ನೂರಾರು ಗ್ರಾಮಸ್ಥರಿಗೆ ಪ್ರೇರಣೆಯಾದರು, ಮಾದರಿಯಾದರು.

-ಇದು ಕೊಪ್ಪಳ ಗವಿಸಿದ್ಧೇಶ್ವರ ಶ್ರೀಗಳ ಗುರುವಾರ ಮುಂಜಾನೆ ಕಾಣಿಸಿಕೊಂಡ ರೀತಿ.

ಒಂದು ಕಾವಿ ಪಂಜೆ ತೊಟ್ಟು, ಕಾವಿ ಅಂಗಿ ಧರಿಸಿ, ತಲೆಗೊಂದು ಕಾವಿಯ ಮುಂಡಾಸು ಸುತ್ತಿಕೊಂಡ ಗವಿಶ್ರೀಗಳು ತಾಲೂಕಿನ ಕೋಳೂರು ಗ್ರಾಮದ ಬಳಿ ಹಿರೇಹಳ್ಳದಲ್ಲಿ ನಿರ್ಮಾಣ ಮಾಡಲಾಗಿರುವ ಬ್ಯಾರೇಜ್‌ನಲ್ಲಿ ನಿಂತಿರುವ ನೀರಿನಲ್ಲಿ ಬೆಳೆದ ಅಂತರಗಂಗೆಯನ್ನು ಸ್ವತಃ ಮುಂದೆ ನಿಂತು ಕಿತ್ತೆಸೆದು ಸ್ವಚ್ಛಗೊಳಿಸಿದ್ದು, ಗ್ರಾಮಸ್ಥರೂ ಇವರ ಈ ವಿಧಾಯಕ ಕಾರ್ಯಕ್ಕೆ ಕೈಜೋಡಿಸಿದರು. ಧಾರ್ಮಿಕ, ಸಮಾಜ ಪರಿವರ್ತನೆ ಜೊತೆ ಸಾಮಾಜಿಕ ಕಾರ್ಯಗಳಿಂದಲೇ ಮನೆಮಾತಾಗಿರುವ ಗವಿಸಿದ್ದೇಶ್ವರ ಶ್ರೀಗಳ ಈ ಕಾರ್ಯ ಭಾರೀ ಜನಮೆಚ್ಚುಗೆ ಪಡೆದುಕೊಂಡಿದೆ.

ಹರಿಗೋಲಿನಲ್ಲಿ ತಾವೇ ಹುಟ್ಟು ಹಾಕಿಕೊಂಡು ಹಳ್ಳದ ನೀರಿನಲ್ಲಿ ಸಾಗಿದ ಶ್ರೀಗಳು ಅಂಜದೆ, ಆಳವನ್ನು ಲೆಕ್ಕಿಸದೇ ಅಂತರಗಂಗೆಯನ್ನು ಸ್ವಚ್ಛ ಮಾಡುತ್ತಿರುವುದನ್ನು ನೋಡಿದ ಗ್ರಾಮಸ್ಥರು ಬೆರಗಾದರು. ಬಳಿಕ ತಾವೂ ಹಳ್ಳಕ್ಕಿಳಿದು ಸ್ವಚ್ಛ ಮಾಡಲು ಶುರು ಮಾಡಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿ ಭಾರೀ ಸದ್ದು ಮಾಡುತ್ತಿದೆ.

click me!