
ಬೆಂಗಳೂರು(ಸೆ.06): ಕನ್ನಡಿಗರ ಸಾಕ್ಷಿಪ್ರಜ್ಞೆ ಎಂದ ಕೂಡಲೇ ನೆನಪಾಗುವ ಹೆಸರು ಪಿ.ಲಂಕೇಶ್. ಪ್ರಖರ ಎಡಪಂಥೀಯ ವಿಚಾರಧಾರೆಗಳಿಂದ ಸರ್ವಕಾಲಕ್ಕೂ ವರ್ತಮಾನದ ಸಮಸ್ಯೆಗಳಿಗೆ ಮುಖಾಮುಖಿಯಾಗಬಲ್ಲ ಪ್ರಜ್ಞಾವಂತಿಕೆಗೆ ಹೆಸರಾಗಿದ್ದಲಂಕೇಶರ ಮುದ್ದಿನ ಮಗಳು ಗೌರಿ ಲಂಕೇಶ್ ಇನ್ನು ನೆನಪು ಮಾತ್ರ.
ಶಿವಮೊಗ್ಗದಲ್ಲಿ ಜನಿಸಿದ, 55 ವರ್ಷದ ಗೌರಿ ಲಂಕೇಶ್ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ.ಪದವಿ ಪಡೆದರು. ಗೌರಿ ಕೂಡ ತಂದೆ ಲಂಕೇಶರ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದರು. ದಿ ಸಂಡೆ ಆಂಗ್ಲ ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿಟ್ಟು ಟೈಮ್ಸ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡಿದ್ದರು. ನಂತರ ತಂದೆಯ ಒಡೆತನದ ಲಂಕೇಶ ಪತ್ರಿಕೆಯಲ್ಲಿ ಬರವಣಿಗೆ ಆರಂಭಿಸಿದರು. ಆದರೆ ಗೌರಿ ಲಂಕೇಶ್ ಕೇವಲ ಪತ್ರಕರ್ತೆಯಾಗಿ ಉಳಿಯಲಿಲ್ಲ. ಬಡವರು, ದಲಿತರು, ರೈತರು, ಅಲ್ಪಸಂಖ್ಯಾತರು ಅಷ್ಟೇ ಏಕೆ ದಮನಿತರ ದನಿಯಾಗಿ ಭೂಗತರಾಗಿ ರಕ್ತಕ್ರಾಂತಿಗೆ ಹಾತೊರೆಯುವ ನಕ್ಸಲೀಯರನ್ನು ಕೂಡ ಮುಖ್ಯವಾಹಿನಿಗೆ ತರುವ ಚಳವಳಿಯಲ್ಲಿ ಸರಿಸುಮಾರು ಎರಡು ದಶಕಗಳ ಕಾಲ ತೊಡಗಿಸಿಕೊಂಡಿದ್ದರು.
ತಂದೆ ಲಂಕೇಶರು 2000ರಲ್ಲಿ ತೀರಿಕೊಂಡಾಗ ಲಂಕೇಶ ಪತ್ರಿಕೆಯನ್ನು ಸಹೋದರ ಇಂದ್ರಜಿತ್ ಜತೆ ಸೇರಿ ಮುನ್ನಡೆಸಿಕೊಂಡು ಬಂದಿದ್ದರು. ನಂತರ ಭಿನ್ನಾಭಿಪ್ರಾಯ ಉಂಟಾಗಿ 2005ರಿಂದ ಈತನಕ ‘ಗೌರಿ ಲಂಕೇಶ್’ ಪತ್ರಿಕೆಯ ಸಂಪಾದಕಿಯಾಗಿದ್ದರು. ತಂದೆ ನಿದನದ ನಂತರ ಪತ್ರಿಕೆಯ ಜತೆಜತೆಗೆ ಸಾಮಾಜಿಕ ಚಳವಳಿಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದರು. ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‌ಗಿರಿಯ ದತ್ತಪೀಠ ವಿವಾದ ಭುಗಿಲೆದ್ದ ವೇಳೆ 2001ರಲ್ಲಿ ಪ್ರಗತಿಪರ ವಿಚಾರಧಾರೆಯ ಸಂಗಾತಿಗಳೊಂದಿಗೆ ಬಾಬಾಬುಡನ್‌ಗಿರಿ ಸೌಹಾರ್ದ ವೇದಿಕೆಯನ್ನು ಸಂಘಟಿಸಿ ಹೋರಾಟ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.