
ಬೆಂಗಳೂರು(ಸೆ.06): ಪಿ. ಲಂಕೇಶ್ ಅವರ ಸಾವಿನ ಬಳಿಕ ಪತ್ರಿಕೆಯನ್ನು ಯಾರು ನಡೆಸಬೇಕು ಎಂಬ ವಿಷಯವಾಗಿ ಕುಟುಂಬದೊಳಗೇ ವಾಗ್ವಾದ ನಡೆಯುತ್ತದೆ. ಕೊನೆಗೆ ಗೌರಿ ತನ್ನ ತಂದೆಯ ಹೆಸರಿನ ಹಿಂದೆ ತನ್ನ ಹೆಸರು ಸೇರಿಸಿ ಪತ್ರಿಕೆಯ ಸಂಪಾದಕರಾಗುತ್ತಾರೆ. ಲಂಕೇಶ್ ಸ್ಥಾಪಿತ ವ್ಯವಸ್ಥೆಯ ವಿರುದ್ಧ ದನಿ ಎತ್ತಿದವರು. ಅಂದಿನ ರಾಜಕಾರಣಿಗಳ ಎದೆಯಲ್ಲಿ ನಡುಕವನ್ನು ಹುಟ್ಟಿಸಿದವರು. ಲಂಕೇಶರ ಹಿರಿಯ ಮಗಳಾದ ಗೌರಿ ತಂದೆಯ ಹಲವು ಗುಣಗಳನ್ನು ರೂಢಿಸಿಕೊಂಡವರು. ಅಪ್ಪನ ಮುದ್ದಿನ ಮಗಳು ತಾನು ಎಂದೇ ಅವರು ಹೇಳಿಕೊಳ್ಳುತ್ತಿದ್ದರು. ಲಂಕೇಶ್ ನಿಧನದ ಬಳಿಕ ಬಸವನಗುಡಿಯ ಲಂಕೇಶ್ ಪತ್ರಿಕೆಯ ಕಿರು ಕೋಣೆಯಲ್ಲೇ ಅವರು ತಮ್ಮ ಕೆಲಸವನ್ನು ನಿರ್ವಹಿಸುತ್ತಿದ್ದರೂ ತಮ್ಮ ತಂದೆಯ ಕುರ್ಚಿಯಲ್ಲಿ ಅವರೆಂದೂ ಕುಳಿತುಕೊಳ್ಳುತ್ತಿರಲಿಲ್ಲ. ತಮ್ಮ ಪತ್ರಿಕೆಯಲ್ಲಿ ತಮ್ಮ ತಂದೆಯ ಪತ್ರಿಕೆಯ ಒಂದು ಲೇಖನವನ್ನು ಅವರು ತಪ್ಪದೇ ಪ್ರಕಟಿಸುತ್ತಿದ್ದರು.
ತಮ್ಮ ತಾಯಿ ಇಂದಿರಾ, ತಂಗಿ ಕವಿತಾ ಮತ್ತು ಕವಿತಾಳ ಮಗಳು ಇಶಾ ಜೊತೆ ಅವರಿಗೆ ಸಹಜವಾಗಿಯೇ ಭಾವನಾತ್ಮಕ ಒಡನಾಟವಿತ್ತು. ಗೌರಿ ಪತ್ರಕರ್ತ ಚಿದಾನಂದ ರಾಜಘಟ್ಟ (ಈಗ ಟೈಮ್ಸ್ ಆಫ್ ಇಂಡಿಯಾದ ವಾಷಿಂಗ್ಟನ್ ವರದಿಗಾರ) ಅವರನ್ನು ಮದುವೆಯಾಗಿದ್ದರು. ಇವರ ಮದುವೆಯ ಕುರಿತು ಇಂದಿರಾ ಲಂಕೇಶ್ ತಮ್ಮ ಆತ್ಮಕಥನದಲ್ಲಿ ವಿವರಿಸಿದ್ದಾರೆ.
ಗೌರಿ ಮತ್ತು ಚಿದಾನಂದ ಸ್ನೇಹಿತರು. ತನ್ನ ಗೆಳೆಯನೆಂದು ಅವರು ಆತನನ್ನು ಮನೆಗೂ ಕರೆದುಕೊಂಡು ಬರುತ್ತಿದ್ದರು. ಒಂದೆರಡು ವರ್ಷದ ಒಡನಾಟದ ಬಳಿಕ ಇಂದಿರಾ ಮಗಳಿಗೆ ಆತನನ್ನು ಮದುವೆಯಾಗುವಂತೆ ಹೇಳುತ್ತಾರೆ. ಅವರ ಮದುವೆಯೂ ನಡೆಯುತ್ತದೆ. ತಮ್ಮ ಮಕ್ಕಳು ಇತರರಿಗಿಂತ ಭಿನ್ನವಾಗಿ ಇರಬೇಕು ಎಂದು ಲಂಕೇಶ್ ಬಯಸುತ್ತಿದ್ದರಂತೆ. ಅದಕ್ಕೆ ತಕ್ಕಾಗಿಯೇ ತಮ್ಮ ಮಕ್ಕಳು ಬೆಳೆದರು ಎಂದು ಇಂದಿರಾ ದಾಖಲಿಸಿದ್ದಾರೆ. ಬೆಂಗಳೂರಿನ ಹುಡುಗಿಯರು ಬೈಕ್ ಸವಾರಿಯನ್ನು ಮಾಡಿರದೇ ಇದ್ದ ಆ ದಿನಗಳಲ್ಲಿ ತಮ್ಮ ಮಗಳು ಮೊದಲ ಬಾರಿ ಬೈಕ್ ಸವಾರಿ ಮಾಡಿದ್ದನ್ನು ಹಾಗೂ ತಾವು ಅದರಿಂದ ಯಾವ ಪರಿ ಆತಂಕಕ್ಕೆ ಒಳಗಾಗಿದ್ದೆ ಎಂಬುದನ್ನು ಅವರು ವಿವರಿಸಿದ್ದಾರೆ.
ಗೌರಿ ಮತ್ತು ಕವಿತಾ ಅಕ್ಕ ತಂಗಿಯರಷ್ಟೇ ಅಲ್ಲ, ಮುಚ್ಚುಮರೆ ಇಲ್ಲದೆ ಒಬ್ಬರನ್ನೊಬ್ಬರು ವಿಮರ್ಶೆಗೆ ಗುರಿಮಾಡಿಕೊಳ್ಳುತ್ತಿದ್ದರು. ಗೌರಿ ತಮ್ಮನ್ನು ತಾವೇ ಆ್ಯಕ್ಟಿವಿಸ್ಟ್ ಹಾಗೂ ವಿಚಾರವಾದಿ ಎಂದು ಹೇಳಿಕೊಳ್ಳುತ್ತಿದ್ದರು. ಸಂಪೂರ್ಣ ಎಡಪಂಥೀಯ ವಿಚಾರಧಾರೆಯವರಾಗಿದ್ದ ಅವರು ನಕ್ಸಲ್ ಹೋರಾಟದ ಬಗ್ಗೆ ಸಹಾನುಭೂತಿ ಹೊಂದಿದ್ದರು. ತನಗಿರುವ ಧೈರ್ಯಕ್ಕೆ ತನ್ನ ತಂದೆಯೇ ಕಾರಣ ಎಂದು ಹೇಳಿಕೊಳ್ಳುತ್ತಿದ್ದರು. ತಮ್ಮ ತಂಗಿಯ ಮಗಳು ಇಶಾಳನ್ನು ಅವರು ಗಾಢವಾಗಿ ಪ್ರೀತಿಸುತ್ತಿದ್ದರು. ಕವಿತಾ ತಾನು ಶಾಕಾಹಾರಿಯಾದರೂ ತನ್ನ ಅಕ್ಕನಿಗಾಗಿ ಒಳ್ಳೊಳ್ಳೆಯ ಮಾಂಸಾಹಾರವನ್ನು ಸಿದ್ಧಪಡಿಸಿಕೊಡುತ್ತಿದ್ದರು.
ಗೌರಿ ಸಾವಿಗೆ ಅಂಜಿದವರಲ್ಲ. ಅದು ಅವರ ಪತ್ರಿಕೆಯ ಬರಹಗಳಲ್ಲಿಯೇ ಗೋಚರಿಸುತ್ತಿತ್ತು. ಸಮಾಜದ ಕೋರೆಗಳಿಗೆ ಭೂತಗನ್ನಡಿ ಹಿಡಿದು ಶತ್ರುಗಳನ್ನು ಸಂಪಾದಿಸಿಕೊಂಡಿದ್ದರು. ಅದರ ಪರಿಣಾಮವೇ ಈ ಹತ್ಯೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.