
ಬೆಂಗಳೂರು: ಖ್ಯಾತ ಸಾಹಿತಿ ಎಂಎಂ ಕಲಬುರ್ಗಿ ಹತ್ಯೆಯ ನೆನಪು ಇನ್ನೂ ಹಸಿಯಾಗಿರುವಾಗಲೇ ಇಡೀ ದೇಶ ಬೆಚ್ಚಿಬೀಳುವ ಇನ್ನೊಂದು ಹತ್ಯೆಗೆ ಬೆಂಗಳೂರು ನಗರ ಸಾಕ್ಷಿಯಾಗಿದೆ. ನಾಡಿನ ಹಿರಿಯ ಪತ್ರಕರ್ತೆ ಹಾಗೂ ಬುದ್ದಿಜೀವಿ ಗೌರಿ ಲಂಕೇಶ್ ಅವರು ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ. ರಾಜರಾಜೆಶ್ವರಿ ನಗರದಲ್ಲಿರುವ ಅವರ ನಿವಾಸದ ಮೇಲೆ ಇಂದು ಸಂಜೆ ಸುಮಾರು 6.30ರ ಹೊತ್ತಿಗೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ.
ಅಪರಿಚಿತ ದುಷ್ಕರ್ಮಿಗಳು ಸಂಜೆ ಮನೆ ಬಾಗಿಲನ್ನು ತಟ್ಟಿದ್ದಾರೆನ್ನಲಾಗಿದ್ದು, ಗೌರಿ ಬಾಗಿಲು ತೆರೆದಾಗ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಗೌರಿ ತಕ್ಷಣ ಕುಸಿದು ಬಿದ್ದಿದ್ದಾರೆ. ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಗೌರಿ ಲಂಕೇಶ್ ಗಾಂಧಿ ಬಝಾರ್’ನಲ್ಲಿರುವ ತಮ್ಮ ಕಚೇರಿಯಲ್ಲಿ ಕೆಲಸ ಮಾಡಿ, ದೀಪಾವಳಿ ಸಂಚಿಕೆ ಮುಗಿಸಿ ಮನೆಗೆ ಬಂದಿದ್ದರು. ಮನೆಯಿಂದ ಕಾರು ನಿಲ್ಲಿಸಿ ಹೊರಬೇಕಾದರೆ ದುಷ್ಕರ್ಮಿಗಳು ಕೃತ್ಯವೆಸಗಿದ್ದಾರೆ.
ಆರ್. ಆರ್. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಗೃಹ ಸಚಿವ ರಾಮಲಿಂಗ ರೆಡ್ಡಿ, ಪೊಲೀಸ್ ಕಮಿಷನರ್ ಟಿ. ಸುನೀಲ್ ಕುಮಾರ್, ಕೆಂಗೇರಿ ಡಿಸಿಪಿ ಅನುಚೇತ್ ಭೇಟಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಗೌರಿ ಪಾರ್ಥೀವ ಶರೀರವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ನಾಳೆ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಪದಗಳೇ ಬರ್ತಿಲ್ಲ, ಹೇಗೆ ಹೇಳ್ಬೇಕು ಎಂದು ಗೊತ್ತಾಗ್ತಿಲ್ಲ: ಇಂದ್ರಜಿತ್ ಲಂಕೇಶ್
ವಿಕ್ಟೋರಿಯಾ ಆಸ್ಪತ್ರೆಗೆ ಗೌರಿ ಲಂಕೇಶ್ ಸಹೋದರ ಇಂದ್ರಜಿತ್ ಲಂಕೇಶ್ ಭೇಟಿ ನೀಡಿದ್ದು, ದುಷ್ಕರ್ಮಿಗಳನ್ನು ಆದಷ್ಟು ಬೇಗ ಹಿಡಿಯಲಿ ಎಂದು ಆಗ್ರಹಿಸಿದ್ದಾರೆ.
ನಮ್ಮ ಅಕ್ಕ ಒರ್ವ ಮಹಿಳೆಯಾಗಿ ಸಾಕಷ್ಟು ಹೋರಾಟಗಳನ್ನು ಮಾಡ್ಕೊಂಡು ಬಂದಿದ್ದಾರೆ. ನನಗೆ ಪದಗಳೇ ಬರ್ತಿಲ್ಲ, ಹೇಗೆ ಹೇಳ್ಬೇಕು ಎಂದು ಗೊತ್ತಾಗ್ತಿಲ್ಲ. ದುಷ್ಕರ್ಮಿಗಳನ್ನು ಆದಷ್ಟು ಬೇಗ ಹಿಡಿಯಲಿ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.