ಗೌರಿ ಹಂತಕರಾರು? 4 ಕೋನದಲ್ಲಿ ತನಿಖೆ; ಐಜಿಪಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಎಸ್'ಐಟಿ ರಚನೆ

Published : Sep 07, 2017, 08:34 AM ISTUpdated : Apr 11, 2018, 12:48 PM IST
ಗೌರಿ ಹಂತಕರಾರು? 4 ಕೋನದಲ್ಲಿ ತನಿಖೆ; ಐಜಿಪಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಎಸ್'ಐಟಿ ರಚನೆ

ಸಾರಾಂಶ

1) ಎಡಪಂಥ-ಕೋಮುವಾದ ವೈಚಾರಿಕ ಭಿನ್ನಾಭಿಪ್ರಾಯವು ಹತ್ಯೆಗೆ ಕಾರಣವಾಯಿತೇ? 2) ನಕ್ಸಲ್ ಶರಣಾಗತಿಗೆ ಗೌರಿ ಶ್ರಮ: ಇದರಿಂದ ಸಿಟ್ಟಾ ದ ನಕ್ಸಲರೇ ಹತ್ಯೆಗೈದರೇ? 3) ಭ್ರಷ್ಟರ ವಿರುದ್ಧ ನಿರ್ಭೀತ ವರದಿ: ಇದಕ್ಕೆ ಸಿಕ್ಕಿ ದವರು ಕೊಲೆ ಮಾಡಿಸಿದರೇ? 4) ಭೂವಿವಾದ, ಹಣಕಾಸು ವ್ಯವಹಾರ ಮತ್ತಿತರ ವೈಯಕ್ತಿಕ ಕಾರಣಕ್ಕೆ ಹತ್ಯೆ?

ಬೆಂಗಳೂರು(ಸೆ. 07): ರಾಷ್ಟ್ರಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಚಿಂತಕಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸಲು ಪೊಲೀಸ್ ಇಲಾಖೆಯು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದು, ಹಂತಕರ ಪತ್ತೆಗೆ ನಾಲ್ಕು ಆಯಾಮಗಳಲ್ಲಿ ತನಿಖೆ ಆರಂಭಗೊಂಡಿದೆ ಎಂದು ತಿಳಿದು ಬಂದಿದೆ. ವೈಚಾರಿಕ ಭಿನ್ನಾಭಿಪ್ರಾಯ, ನಕ್ಸಲ್ ಹೋರಾಟ, ಭ್ರಷ್ಟಾಚಾರದ ವಿರುದ್ಧದ ಹೋರಾಟ ಹಾಗೂ ವೈಯಕ್ತಿಕ ವಿಷಯಗಳ ಆಯಾಮಗಳಿಂದ ತನಿಖೆ ನಡೆಸಲಾಗುತ್ತದೆ. ಇದುವರೆಗೆ ಗೌರಿ ಲಂಕೇಶ್ ಅವರ ಹತ್ಯೆಗೆ ಯಾವುದೇ ನಿರ್ದಿಷ್ಟ ಕಾರಣ ಸ್ಪಷ್ಟವಾಗಿ ತಿಳಿದು ಬಂದಿಲ್ಲ ಎಂದು ಹಿರಿಯ ಅಧಿಕಾರಿಗಳು ಬುಧವಾರ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಐಡಿ ಬದಲು ಎಸ್‌'ಐಟಿ ಮೂಲಕ ತನಿಖೆ ನಡೆಸುವುದಾಗಿ ಬುಧವಾರ ಬೆಳಗ್ಗೆ ಘೋಷಿಸಿದ್ದರು. ಅದರಂತೆ ಸಂಜೆಯ ವೇಳೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ರೂಪಕ್ ಕುಮಾರ್ ದತ್ತಾ ಅವರು ಐಜಿಪಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಆದೇಶ ಹೊರಡಿಸಿದರು. ಬೆಂಗಳೂರು ನಗರದ ಪಶ್ಚಿಮ ವಲಯದ ಡಿಸಿಪಿ ಎಂ.ಎನ್.ಅನುಚೇತ್ ಅವರು ಈ ತಂಡದ ಮುಖ್ಯ ತನಿಖಾಧಿಕಾರಿಯಾಗಿ ಕೆಲಸ ಮಾಡಲಿದ್ದಾರೆ. ಇಬ್ಬರು ಎಸ್ಪಿಗಳು, ನಾಲ್ವರು ಡಿವೈಎಸ್ಪಿಗಳು ಹಾಗೂ ಹದಿನಾಲ್ಕು ಇನ್ಸ್'ಪೆಕ್ಟರ್‌'ಗಳು ಸೇರಿದಂತೆ 21 ಅಧಿಕಾರಿಗಳ ತಂಡ ಇದಾಗಿದೆ.

ವೈಚಾರಿಕ ಭಿನ್ನಾಭಿಪ್ರಾಯ: ಪ್ರಬಲ ಎಡಪಂಥೀಯ ಧೋರಣೆ ಹೊಂದಿದ್ದ ಗೌರಿ ಲಂಕೇಶ್ ಅವರು, ತಮ್ಮ ಬರಹದ ಮೂಲಕ ಪ್ರಗತಿಪರ ಚಿಂತನೆಗಳನ್ನು ಪ್ರತಿಪಾದಿಸುತ್ತಿದ್ದರು. ಕೋಮುವಾದದ ವಿರುದ್ಧ ಹಲವು ಬಾರಿ ಬೀದಿಗಿಳಿದು ಹೋರಾಟ ನಡೆಸಿದ್ದರು. ಈ ವೈಚಾರಿಕ ನಿಲುವಿನ ವಿಷಯವಾಗಿ ಅವರು ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಸಾಮಾಜಿಕ ತಾಣಗಳಲ್ಲಿ ಅವರಷ್ಟು ಟ್ರೋಲಿಂಗ್‌'ಗೆ ಗುರಿಯಾದ ಮತ್ತೊಬ್ಬ ಪತ್ರಕರ್ತೆ ಇಲ್ಲ. ಇತ್ತೀಚೆಗೆ ದೆಹಲಿ ವಿವಿಯಲ್ಲಿ ರಾಷ್ಟ್ರ ವಿರೋಧಿ ಘೋಷಣೆ ಕೂಗಿದ ವಿವಾದಕ್ಕೆ ಸಿಲುಕಿದ್ದ ಕನ್ಹಯ್ಯಗೆ ಬಹಿರಂಗ ಬೆಂಬಲ ಸೂಚಿಸಿದ್ದು ಮಾತ್ರವಲ್ಲದೆ ಕನ್ಹಯ್ಯರನ್ನು ಮನೆಗೆ ಕರೆಸಿ ಆತಿಥ್ಯ ನೀಡಿದ್ದರು. ಹೀಗಾಗಿ ಸೈದ್ಧಾಂತಿಕವಾಗಿ ಅವರನ್ನು ವಿರೋಧಿಸುವ ಪ್ರಬಲ ಗುಂಪು ಸಹ ಹುಟ್ಟಿಕೊಂಡಿತು. ಈ ಹಿನ್ನೆಲೆಯಲ್ಲಿ ಗೌರಿ ಲಂಕೇಶ್ ಅವರ ಹತ್ಯೆ ನಡೆದಿರಬಹುದು ಎಂಬುದು ಪೊಲೀಸರ ಶಂಕೆಯಾಗಿದೆ. ಈ ನಿಟ್ಟಿನಲ್ಲೂ ಅವರು ತನಿಖೆ ನಡೆಸಿದ್ದಾರೆ.

ನಕ್ಸಲ್ ಪ್ರೀತಿ ತಂದಿತೇ ಆಪತ್ತು?: ಸರ್ಕಾರದ ವಿರುದ್ಧ ರಕ್ತ ಕ್ರಾಂತಿಯಲ್ಲಿ ತೊಡಗಿದ್ದ ಕೆಲ ನಕ್ಸಲೀಯರನ್ನು ಮನವೊಲಿಸಿ ಮತ್ತೆ ಸಾಮಾಜಿಕ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಗೌರಿ ಲಂಕೇಶ್ ಪ್ರಮುಖ ಪಾತ್ರ ವಹಿಸಿದ್ದರು. ಈ ಬೆಳವಣಿಗೆಯು ಕೆಲವು ನಕ್ಸಲ್ ಪ್ರಮುಖರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನುತ್ತಿವೆ ಪೊಲೀಸ್ ಮೂಲಗಳು. ಆಂಧ್ರದ ಬಳಿಕ ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ನಕ್ಸಲ್ ಚಳವಳಿ ಪ್ರಬಲವಾಗುವ ಸೂಚನೆ ದೊರೆತಿತ್ತು. ಆದರೆ ಗೌರಿ ಲಂಕೇಶ್ ಅವರು ಶರಣಾಗತಿಗೆ ಮನವೊಲಿಸುವ ಮೂಲಕ ನಕ್ಸಲ್ ಚಳವಳಿಗೆ ಅಡ್ಡಿಯಾಗಿದ್ದಾರೆ ಎಂದು ಕೆಲವರು ಕೋಪಗೊಂಡಿದ್ದರು. ಹೀಗಾಗಿ ಗೌರಿ ಅವರ ಹತ್ಯೆಗೂ ಯತ್ನಿಸಿರಬಹುದು.

ಭ್ರಷ್ಟರ ವಿರುದ್ಧ ವರದಿಗಾರಿಕೆ: ಗೌರಿ ಲಂಕೇಶ್ ಅವರು ತಮ್ಮ ಸಂಪಾದಕತ್ವದ ಲಂಕೇಶ್ ವಾರಪತ್ರಿಕೆಯಲ್ಲಿ ನಿರ್ಭೀತಿಯಿಂದ ಕೆಲವು ವರದಿ ಪ್ರಕಟಿಸಿದ್ದರು. ಇದರಿಂದ ಕೆಲವು ರಾಜಕಾರಣಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳ ಕೋಪಕ್ಕೂ ಅವರು ಗುರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಯಾರಾದರೂ ಸುಪಾರಿ ನೀಡಿ ಗೌರಿ ಅವರ ಕೊಲೆ ಮಾಡಿಸಿರಲೂಬಹುದು. ಈ ದಿಕ್ಕಿನಲ್ಲೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವೈಯಕ್ತಿಕ ವಿಚಾರಗಳು: ಇದಲ್ಲದೆ ಗೌರಿ ಲಂಕೇಶ್ ಅವರಿಗೆ ಸಂಬಂಧಪಟ್ಟ ವೈಯಕ್ತಿಕ ಮನಸ್ತಾಪಗಳು ಅವರ ಜೀವಕ್ಕೆ ಎರವಾಗಿರಬಹುದೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಭೂವಿವಾದ ಹಾಗೂ ಹಣ ವ್ಯವಹಾರದ ಬಗ್ಗೆ ಕೂಡ ಪರಿಶೀಲಿಸಲಾಗುತ್ತಿದೆ. ಆದರೆ ಈವರೆಗೆ ಈ ಸಂಬಂಧ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ
epaper.kannadaprabha.in

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ವಿಮಾನದಲ್ಲಿ ಹೃದಯಾಘಾತ- ಅಮೆರಿಕ ಪ್ರಜೆಯ ಜೀವ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್