ಮಂಗಳೂರಲ್ಲಿ ಬೈಕ್ ರ್ಯಾಲಿ ಮಾಡೇ ಮಾಡ್ತೀವಿ: ಸರಕಾರಕ್ಕೆ ಬಿಜೆಪಿ ಸವಾಲು

By Suvarna Web DeskFirst Published Sep 7, 2017, 8:18 AM IST
Highlights

ಬಿಜೆಪಿ ಯುವಮೋರ್ಚಾ ಆಯೋಜಿಸಿರುವ ಈ ಬೈಕ್ ರ್ಯಾಲಿಯನ್ನು ಬಹುತೇಕ ಆಯಾ ಜಿಲ್ಲೆಗಳಲ್ಲೇ ತಡೆಯುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ. ಬೈಕ್ ರ್ಯಾಲಿ ನಿಷೇಧಿಸಿ ಆಯಾ ಜಿಲ್ಲಾ ಪೊಲೀಸರು ವಿಧಿಸಿರುವ ನಿರ್ಬಂಧ ಮೀರಲು ಹೊರಟವರನ್ನು ಈಗಾಗಲೇ ಆಯಾ ಜಿಲ್ಲಾಡಳಿತ ವಶಕ್ಕೆ ತೆಗೆದುಕೊಂಡಿದೆ. ಇಷ್ಟಾದರೂ ದಕ್ಷಿಣ ಕನ್ನಡ ಪ್ರವೇಶಿಸಲೆತ್ನಿಸುವ ರ್ಯಾಲಿಯನ್ನು ಗಡಿಯಲ್ಲೇ ತಡೆಯಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ.

ಮಂಗಳೂರು(ಸೆ. 07): ಆರೆಸ್ಸೆಸ್ ಕಾರ್ಯಕರ್ತರ ಹತ್ಯೆ ಖಂಡಿಸಿ, ಪಿಎಫ್'ಐ ಮತ್ತು ಎಸ್‌'ಡಿಪಿಐ ಸಂಘಟನೆಗಳ ನಿಷೇಧಕ್ಕಾಗಿ ಆಗ್ರಹಿಸಿ ‘ಮಂಗಳೂರು ಚಲೋ ಬೈಕ್ ರ್ಯಾಲಿ’ ವಿಚಾರವಾಗಿ ಬಿಜೆಪಿ ಮತ್ತು ರಾಜ್ಯ ಸರ್ಕಾರದ ನಡುವೆ ನಡೆಯುತ್ತಿರುವ ಸಂಘರ್ಷ ಈಗ ಸಂಪೂರ್ಣ ಮಂಗಳೂರಿಗೆ ಸ್ಥಳಾಂತರಗೊಂಡಿದೆ. ಇಂದು ಗುರುವಾರ ಮಂಗಳೂರಿನಲ್ಲಿ ನಡೆಸಲುದ್ದೇಶಿಸಿರುವ ಬೈಕ್ ರ್ಯಾಲಿ, ಮೆರವಣಿಗೆಗೆ ಅವಕಾಶ ನಿಷೇಧಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಸೆ.8ರವರೆಗೆ ನಿರ್ಬಂಧಕಾಜ್ಞೆ ಹೊರಡಿಸಿದೆ. ಆದರೆ, ಸಮಾವೇಶ ನಡೆಸಲು ಅವಕಾಶ ನೀಡಿದೆ. ಸರ್ಕಾರದ ಈ ನಿಲುವಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಮುಖಂಡರು ಮಾತ್ರ ಬೈಕ್ ರ್ಯಾಲಿ ನಡೆಸಿಯೇ ಸಿದ್ಧ ಎಂದು ಘೋಷಿಸಿದ್ದಾರೆ. ಜತೆಗೆ, ಕಾರ್ಯಕರ್ತರಿಗೆ ಧೈರ್ಯ ತುಂಬಲು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೇರಿ ಪ್ರಮುಖ ಮುಖಂಡರು ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೀಡುಬಿಟ್ಟಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಆರೆಸ್ಸೆಸ್ ಮುಖಂಡನ ಹತ್ಯೆಯಿಂದಾಗಿ ಸಂಘರ್ಷದ ವಾತಾವರಣಕ್ಕೆ ಸಾಕ್ಷಿಯಾಗಿದ್ದ ಮಂಗಳೂರಿನಲ್ಲೀಗ ‘ರ್ಯಾಲಿ ತಿಕ್ಕಾಟ’ದಿಂದಾಗಿ ಮತ್ತೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.

ಸರ್ಪಗಾವಲು: ಬಿಜೆಪಿ ಯುವಮೋರ್ಚಾ ಆಯೋಜಿಸಿರುವ ಈ ಬೈಕ್ ರ್ಯಾಲಿಯನ್ನು ಬಹುತೇಕ ಆಯಾ ಜಿಲ್ಲೆಗಳಲ್ಲೇ ತಡೆಯುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ. ಬೈಕ್ ರ್ಯಾಲಿ ನಿಷೇಧಿಸಿ ಆಯಾ ಜಿಲ್ಲಾ ಪೊಲೀಸರು ವಿಧಿಸಿರುವ ನಿರ್ಬಂಧ ಮೀರಲು ಹೊರಟವರನ್ನು ಈಗಾಗಲೇ ಆಯಾ ಜಿಲ್ಲಾಡಳಿತ ವಶಕ್ಕೆ ತೆಗೆದುಕೊಂಡಿದೆ. ಇಷ್ಟಾದರೂ ದಕ್ಷಿಣ ಕನ್ನಡ ಪ್ರವೇಶಿಸಲೆತ್ನಿಸುವ ರ್ಯಾಲಿಯನ್ನು ಗಡಿಯಲ್ಲೇ ತಡೆಯಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಬಿಗಿ ಭದ್ರತೆ ಕೈಗೊಂಡಿದೆ. ಜಿಲ್ಲೆಯ ಯಾವುದೇ ಮೂಲೆಯಿಂದಲೂ ರ್ಯಾಲಿ ಆಗಮಿಸದಂತೆ ನೋಡಿಕೊಳ್ಳಲು ಅಲ್ಲಲ್ಲಿ ಸಿಸಿ ಕ್ಯಾಮೆರಾ ಹಾಗೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಬುಧವಾರದಿಂದ ಪ್ರತಿಯೊಂದು ವಾಹನವನ್ನೂ ತಪಾಸಣೆ ನಡೆಸಿಯೇ ಬಿಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸೂಚಿಸಿದ್ದಾರೆ.

ನಿರ್ಬಂಧಕಾಜ್ಞೆ ಜಾರಿ: ದ.ಕ ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳಲ್ಲಿ ಸೆ.6ರ ಬೆಳಗ್ಗೆ 6 ಗಂಟೆಯಿಂದ ಸೆ.8ರ ಬೆಳಗ್ಗೆ 6 ಗಂಟೆಯವರೆಗೆ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 35(3) ಜಾರಿಯಾಗಿದೆ. ಅದರಂತೆ ಯಾವುದೇ ಸಂಘಟನೆ/ಕಾರ್ಯಕರ್ತರು ಬೈಕ್‌ಗಳಲ್ಲಿ ಅಥವಾ ಬೈಕ್ ರ್ಯಾಲಿ ಮೂಲಕ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧಿಸಿ ಡಿಸಿ ಡಾ. ಜಗದೀಶ ಆದೇಶ ಹೊರಡಿಸಿದ್ದಾರೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲೂ ಈ ನಿರ್ಬಂಧಕಾಜ್ಞೆ ಜಾರಿಗೊಳಿಸಲಾಗಿದೆ. ಅದರಂತೆ ಪಾದಯಾತ್ರೆ, ಮೆರವಣಿಗೆಗೂ ಅವಕಾಶ ನಿರ್ಬಂಧಿಸಲಾಗಿದೆ. ಆದರೆ ನೆಹರೂ ಮೈದಾನದಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆವರೆಗೆ ಸಮಾವೇಶ ನಡೆಸಲು ಇಲಾಖೆ ಅನುಮತಿ ನೀಡಿದೆ.

ಲಾರಿಯೇ ವೇದಿಕೆ: ಬೈಕ್ ರ್ಯಾಲಿ ತಡೆಯಲು ಪೊಲೀಸರು ಎಲ್ಲೆಂದರಲ್ಲಿ ಬ್ಯಾರಿಕೇಡ್, ಅಡೆತಡೆಗಳನ್ನು ನಿರ್ಮಿಸಿರುವುದರಿಂದ ನೆಹರೂ ಮೈದಾನದಲ್ಲಿ ಬಿಜೆಪಿಯು ಸಮಾವೇಶಕ್ಕೆ ವೇದಿಕೆ ನಿರ್ಮಿಸಿಲ್ಲ. ತೆರೆದ ಲಾರಿಯನ್ನೇ ವೇದಿಕೆಯನ್ನಾಗಿ ಬಳಸಿಕೊಂಡು ಸಮಾವೇಶವನ್ನು ನಡೆಸುವ ಇರಾದೆ ಪಕ್ಷ ಹೊಂದಿದೆ ಎನ್ನಲಾಗಿದೆ.

ಬೆಳಗ್ಗೆ 11ರಿಂದ ರ್ಯಾಲಿ, ಡಿಸಿ ಕಚೇರಿಗೆ ಮುತ್ತಿಗೆ: ನಿರ್ಬಂಧಕಾಜ್ಞೆ ನಡುವೆಯೇ ನಿಗದಿಯಂತೆ ಬೆಳಗ್ಗೆ 11ಕ್ಕೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಬೈಕ್ ರ್ಯಾಲಿ ಆರಂಭಗೊಂಡು ನೆಹರೂ ಮೈದಾನದಲ್ಲಿ ಸಮಾಪನಗೊಳ್ಳಲಿದೆ. ಇದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ .ಯಡಿಯೂರಪ್ಪ , ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಸೇರಿದಂತೆ ರಾಜ್ಯಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ. ಅಲ್ಲಿ ಲಾರಿಯ ವೇದಿಕೆಯಲ್ಲೇ ಭಾಷಣದ ನಂತರ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ವಜಾಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಬಿಜೆಪಿ ನಿ‘ರ್ರಿಸಿದೆ.

12ರ ಕಾಂಗ್ರೆಸ್ ಸಾಮರಸ್ಯ ನಡಿಗೆ ಮುಂದೂಡಿಕೆ: ಬಿಜೆಪಿಯ ಬೈಕ್ ರ್ಯಾಲಿಗೆ ನಿರ್ಬಂಧದ ಬಿಸಿ ಬಂಟ್ವಾಳದ ರಂಗಿಪೇಟೆಯಿಂದ ಮಾಣಿವರೆಗೆ ಸೆ.12ರಂದು ನಡೆಸಲು ಉದ್ದೇಶಿಸಿರುವ ಸಾಮರಸ್ಯ ನಡಿಗೆಗೂ ತಟ್ಟಿದೆ. ಜಿಲ್ಲಾ ಪೊಲೀಸ್ ಇಲಾಖೆಯ ಸಲಹೆ ಮೇರೆಗೆ ಈ ಸಾಮರಸ್ಯ ನಡಿಗೆಯನ್ನು ಕಾಂಗ್ರೆಸ್ ಮುಂದೂಡಿದೆ. ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರಿಗೂ ಇದೆ. ಪೊಲೀಸ್ ಇಲಾಖೆಯ ಸಲಹೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಸಾಮರಸ್ಯ ನಡಿಗೆಯ ಮುಂದಿನ ಕಾರ್ಯಕ್ರಮದ ದಿನಾಂಕವನ್ನು ಸಮಾನ ಮನಸ್ಕರ ಸಲಹೆಯನ್ನು ಪಡೆದು ಶೀಘ್ರ ಪ್ರಕಟಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಹೇಳಿದೆ.

ಬಿಜೆಪಿಯ ಬೈಕ್ ರ್ಯಾಲಿ ವಿರುದ್ಧ ಸರ್ಕಾರ ಸಂಘರ್ಷಕ್ಕೆ ಇಳಿದಿದೆ. ಮಂಗಳೂರು ಚಲೋ ಬೈಕ್ ರ್ಯಾಲಿಗೆ ಅಡ್ಡಿಪಡಿಸುವ ಮೂಲಕ ಬಿಜೆಪಿಯನ್ನು ಧಮನಿಸುವ ಷಡ್ಯಂತ್ರ ನಡೆಸುತ್ತಿದೆ. ಇದು ನಿಲ್ಲದಿದ್ದರೆ ಮಂಗಳೂರು ಚಲೋ ರಾಜ್ಯವ್ಯಾಪಿ ಮುಂದುವರಿಯಲಿದೆ.
- ಅರವಿಂದ ಲಿಂಬಾವಳಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ಕನ್ನಡಪ್ರಭ ವಾರ್ತೆ
epaper.kannadaprabha.in

click me!