ಗೌರಿ ಹತ್ಯೆಯ 2ನೇ ಆರೋಪಿ ಬಂಧನಕ್ಕೆ ಬಲೆ ಬೀಸಿದ ಎಸ್ಐಟಿ

By Suvarna Web DeskFirst Published Mar 10, 2018, 7:18 AM IST
Highlights

ರಾಷ್ಟ್ರಮಟ್ಟದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದ ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಮೊದಲ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಎಸ್‌ಐಟಿ (ವಿಶೇಷ ತನಿಖಾ ತಂಡ) ಕೊನೆಗೂ ಯಶಸ್ವಿಯಾಗಿದೆ. ಇದರಿಂದಾಗಿ ಹತ್ಯೆ ನಡೆದ 6 ತಿಂಗಳ ಬಳಿಕ ಮೊದಲ ಬಾರಿಗೆ ಪ್ರಕರಣದಲ್ಲಿ ಆಪಾದಿತನೊಬ್ಬನ್ನು ಬಂಧಿಸಿದಂತಾಗಿದೆ.

ಬೆಂಗಳೂರು : ರಾಷ್ಟ್ರಮಟ್ಟದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದ ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಮೊದಲ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಎಸ್‌ಐಟಿ (ವಿಶೇಷ ತನಿಖಾ ತಂಡ) ಕೊನೆಗೂ ಯಶಸ್ವಿಯಾಗಿದೆ. ಇದರಿಂದಾಗಿ ಹತ್ಯೆ ನಡೆದ 6 ತಿಂಗಳ ಬಳಿಕ ಮೊದಲ ಬಾರಿಗೆ ಪ್ರಕರಣದಲ್ಲಿ ಆಪಾದಿತನೊಬ್ಬನ್ನು ಬಂಧಿಸಿದಂತಾಗಿದೆ.

ಹಿಂದೂ ಸಂಘಟನೆಯೊಂದರ ಶಂಕಿತ ಕಾರ‍್ಯಕರ್ತ, ಮದ್ದೂರಿನ ಕೆ.ಟಿ.ನವೀನ್‌ ಕುಮಾರ್‌ ಅಲಿಯಾಸ್‌ ಹೊಟ್ಟೆಮಂಜನನ್ನು ಪ್ರಕರಣದಲ್ಲಿನ ‘ಹತ್ಯೆಗೆ ಒಳಸಂಚು’ ಆರೋಪದಡಿ ಬಂಧಿಸಲಾಗಿದ್ದು, ಕೋರ್ಟಿಗೆ ಹಾಜರುಪಡಿಸಿ 5 ದಿನ ವಶಕ್ಕೆ ಪಡೆಯಲಾಗಿದೆ.

ಇದೇ ವೇಳೆ 2ನೇ ಆರೋಪಿಯ ಗುರುತನ್ನೂ ಪತ್ತೆ ಮಾಡಲಾಗಿದ್ದು, ಆತನ ಬಂಧನಕ್ಕೂ ಬಲೆ ಬೀಸಲಾಗಿದೆ. ಮಹಾರಾಷ್ಟ್ರ ಮೂಲದವನಾದ ಪ್ರವೀಣ್‌ ಎಂಬಾತನೇ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ 2ನೇ ಆರೋಪಿ. ಈತ ಬಂಧಿತ ಹೊಟ್ಟೆಮಂಜನ ಸ್ನೇಹಿತ.

ಅಕ್ರಮ ಶಸ್ತ್ರ ಹೊಂದಿದ ಆರೋಪದ ಮೇರೆಗೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಫೆ.18 ರಂದು ಮೆಜೆಸ್ಟಿಕ್‌ ಬಳಿ ಸಿಸಿಬಿ ತಂಡ ಹೊಟ್ಟೆಮಂಜನನ್ನು ಬಂಧಿಸಿತ್ತು. ಈ ವೇಳೆ ಆರೋಪಿಯಿಂದ ‘.32’ ರಿವಾಲ್ವರ್‌ನ 15 ಜೀವಂತ ಗುಂಡು, ನಾಡ ಪಿಸ್ತೂಲ್‌ ಜಪ್ತಿ ಮಾಡಿತ್ತು. ಗೌರಿ ಹತ್ಯೆಯ ಪ್ರಕರಣದ ಬಗ್ಗೆ ಈತನ ಪಾತ್ರದ ಬಗ್ಗೆ ಶಂಕೆ ಹೊಂದಿದ್ದ ಎಸ್‌ಐಟಿ ತಂಡ ವಿಚಾರಣೆಗಾಗಿ ವಶಕ್ಕೆ ಪಡೆದಿತ್ತು. ವಿಚಾರಣೆ ವೇಳೆ ಗೌರಿ ಹತ್ಯೆ ಪ್ರಕರಣದಲ್ಲಿ ತನ್ನ ಪಾತ್ರದ ಬಗ್ಗೆ ಆರೋಪಿ ಒಪ್ಪಿಕೊಂಡಿದ್ದಾನೆ. ಹೀಗಾಗಿ ಅಧಿಕೃತವಾಗಿ ಗೌರಿ ಹತ್ಯೆ ಕೇಸಿನಲ್ಲಿ ಈತನನ್ನು ಬಂಧಿಸಿ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.

ಬಾಯಿಬಿಟ್ಟಮಂಜ:

ಮದ್ದೂರಿನಲ್ಲಿ ಸಂಘಟಿಸಿದ್ದ ‘ಧರ್ಮಸಭೆ’ಯಲ್ಲಿ ಸಭೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್‌ ಹಾಗೂ ಸಾಹಿತಿ ಭಗವಾನ್‌ ಸೇರಿ ತಮ್ಮ ಸೈದ್ಧಾಂತಿಕ ವಿರೋಧಿಗಳ ಬಗ್ಗೆ ಚರ್ಚೆ ನಡೆಸಿದ್ದ ಬಗ್ಗೆ ಎಸ್‌ಐಟಿ ಅಧಿಕಾರಿಗಳ ಬಳಿ ಬಾಯ್ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಇನ್ನು ವಿಚಾರಣೆ ವೇಳೆ ಆರೋಪಿ ಎಸ್‌ಐಟಿ ಅಧಿಕಾರಿಗಳ ಬಳಿ ಹತ್ಯೆಯ ಒಳಸಂಚಿನಲ್ಲಿ ಭಾಗಿಯಾಗಿದ್ದ ಪ್ರವೀಣ್‌ ಬಗ್ಗೆ ಕೂಡ ಬಾಯ್ಬಿಟ್ಟಿದ್ದಾನೆ. ಈತನ ಹೆಸರು ಮತ್ತು ವಿಳಾಸವನ್ನು ಸಂಗ್ರಹಿಸಿರುವ ವಿಶೇಷ ತನಿಖಾ ತಂಡ ನ್ಯಾಯಾಲಯಕ್ಕೆ ತಿಳಿಸಿದ್ದು, ಆರೋಪಿಯ ಬಂಧನಕ್ಕೆ ಬಲೆ ಬೀಸಿದೆ.

ಗೌರಿ ಹತ್ಯೆಗೂ ಮುನ್ನ ರಾಜರಾಜೇಶ್ವರಿ ನಗರದಲ್ಲಿರುವ ಗೌರಿ ಅವರ ನಿವಾಸಕ್ಕೆ ನವೀನ್‌ ಜತೆ ಆತ ಬಂದಿದ್ದ ಸಂಗತಿ ತನಿಖೆಯಲ್ಲಿ ಗೊತ್ತಾಗಿದೆ. ಆದರೆ ಪ್ರವೀಣ್‌ ಪೂರ್ವಾಪರ ಕುರಿತು ನವೀನ್‌ನನ್ನು ವಿಚಾರಣೆ ನಡೆಸುವ ಅಗತ್ಯವಿದೆ. ಹಾಗೆಯೇ ಗೌರಿ ಅವರ ಮೇಲೆ ಗುಂಡು ಹಾರಿಸಿದವರ ಪೈಕಿ ಪ್ರವೀಣ್‌ ಕೂಡಾ ಒಬ್ಬಾತನೇ ಎಂಬುದು ಖಚಿತವಾಗಿಲ್ಲ. ಆದರೆ ಹತ್ಯೆಗೂ ಮುನ್ನ ನವೀನ್‌ ಜತೆ ಆತ ಬೈಕ್‌ನಲ್ಲಿ ಓಡಾಡಿರುವುದಕ್ಕೆ ಸ್ಪಷ್ಟಮಾಹಿತಿ ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಾಕ್ಷ್ಯ ಲಭ್ಯ:

ನವೀನ್‌ ಅಲಿಯಾಸ್‌ ಹೊಟ್ಟೆಮಂಜ ಗೌರಿ ಹತ್ಯೆಗೆ ನೆರವು ನೀಡಿರುವುದಕ್ಕೆ ಸಾಕ್ಷ್ಯ ದೊರೆತಿದೆ. ಆರೋಪಿ ಹತ್ಯೆಗೂ ಮುನ್ನ ಬೆಳಗಾವಿ ಮತ್ತು ಗೋವಾದಲ್ಲಿನ ಕೆಲವರನ್ನು ಸಂಪರ್ಕ ಮಾಡಿದ್ದಾನೆ. ಶೀಘ್ರದಲ್ಲಿಯೇ ಆತನನ್ನು ಹೆಚ್ಚಿನ ವಿಚಾರಣೆಗಾಗಿ ಗೋವಾ, ಬೆಳಗಾವಿಗೆ ಕರೆದೊಯ್ಯಲಾಗುವುದು ಎಂದು ತಿಳಿದು ಬಂದಿದೆ.

ಗೌರಿ ಹತ್ಯೆ ನಡೆಯುತ್ತಿದ್ದಂತೆ ಕೆಲವರ ಮೇಲೆ ಶಂಕೆ ವ್ಯಕ್ತಪಡಿಸಿ ಎಸ್‌ಐಟಿ ತಂಡ ಹದ್ದಿನ ಕಣ್ಣಿಟ್ಟಿತ್ತು. ಹೀಗೆ ಆರೋಪಿ ಹೊಟ್ಟೆಮಂಜನ ಮೊಬೈಲ್‌ ಹಾಗೂ ಆತನ ಚಲನವಲನದ ಮೇಲೆ ನಿಗಾ ಇಡಲಾಗಿತ್ತು. ಪ್ರಕರಣದಲ್ಲಿ ಈತನ ಪಾತ್ರದ ಬಗ್ಗೆ ಮಹತ್ವದ ದಾಖಲೆಯನ್ನು ಕಲೆ ಹಾಕಿ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ತನಿಖೆಯ ದೃಷ್ಟಿಹಾಗೂ ಸಾಕ್ಷ್ಯಗಳನ್ನು ಕಾಪಾಡುವ ಉದ್ದೇಶದಿಂದ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ನವೀನ್‌ ಕುಮಾರ್‌ ಪಾತ್ರವನ್ನು ಹೇಳಲು ಸಾಧ್ಯವಿಲ್ಲ. ಪ್ರಕರಣದಲ್ಲಿ ಈತನ ಪಾತ್ರದ ಮಹತ್ವದ ದಾಖಲೆ ಸಿಕ್ಕ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ, ಐದು ದಿನ ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ನವೀನ್‌ ಮೊದಲ ಆರೋಪಿ ಅಲ್ಲ. ದೋಷಾರೋಪ ಪಟ್ಟಿಸಲ್ಲಿಸುವ ವೇಳೆ ಯಾರು ಮೊದಲು, ಯಾರು ನಂತರ ಎಂಬುದನ್ನು ಉಲ್ಲೇಖಿಸಲಿದ್ದೇವೆ.

- ಎಂ.ಎನ್‌.ಅನುಚೇತ್‌, ಡಿಸಿಪಿ (ಎಸ್‌ಐಟಿ ತನಿಖಾಧಿಕಾರಿ)

click me!