
ಬೆಂಗಳೂರು : ಕೆಪಿಸಿಸಿ ಆಂತರಿಕ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲ. ಹೀಗಾಗಿ ಈ ಬಾರಿ ಹಾಲಿ ಶಾಸಕರು ಸೋತರೆ ಅಭ್ಯರ್ಥಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೇ ಹೊಣೆಯಾಗುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ನಡೆದ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಬಗ್ಗೆ ಹೈಕಮಾಂಡ್ ತೀವ್ರ ಭರವಸೆ ಇಟ್ಟುಕೊಂಡಿದೆ. ರಾಜ್ಯಾದ್ಯಂತ ಪಕ್ಷಕ್ಕೂ ಉತ್ತಮ ಸ್ಥಿತಿ ಇದ್ದು, ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಆದರೆ ಕೆಲವು ಕ್ಷೇತ್ರಗಳಲ್ಲಿ ಸ್ಥಳೀಯ ಶಾಸಕರು ಜನರಿಗೆ ದೊರೆಯುತ್ತಿಲ್ಲ, ಸೂಕ್ತವಾಗಿ ಕೆಲಸ ಮಾಡಿಲ್ಲ ಎಂಬ ಕಾರಣಕ್ಕೆ ಅವರ ವಿರುದ್ಧ ವಿರೋಧಿ ಅಲೆ ಇದೆ. ಇಂತಹವರನ್ನು ತಿದ್ದಿ ಕೆಲಸ ಮಾಡುವಂತೆ ಮಾಡಬೇಕು. ಚುನಾವಣಾ ಸಮಯದಲ್ಲಿ ಕ್ಷೇತ್ರಾದ್ಯಂತ ಸಂಚರಿಸುವಂತೆ ಮಾಡಬೇಕು. ಇದರ ಜವಾಬ್ದಾರಿ ಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹೊತ್ತಿಕೊಳ್ಳಬೇಕು. ಇಂತಿಷ್ಟು ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿಯ್ನೂ ಹೊತ್ತಿಕೊಳ್ಳಬೇಕು ಎಂದು ಗುರಿ ನೀಡಿದರು.
ಜತೆಗೆ ಚುನಾವಣೆ ಬಗ್ಗೆ ಹಿತೋಪದೇಶ ಮಾಡಿದ ಸಿಎಂ, ಯಾರೊಬ್ಬರೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡುವಂತಿಲ್ಲ. ಖಾಸಗಿ ಕಾರಿನಲ್ಲೇ ಸಂಚಾರ ಮಾಡಬೇಕು. ಜಿಲ್ಲೆಗಳಲ್ಲಿ ಚುನಾವಣಾಧಿಕಾರಿಗಳ ಮೇಲೆ ಒತ್ತಡ ಹೇರಬಾರದು. ಪ್ರತಿ ಶಾಸಕರ ಕ್ಷೇತ್ರಗಳಲ್ಲೂ ಹೆಚ್ಚು ಪ್ರವಾಸ ಮಾಡಬೇಕು ಎಂದು ಸಲಹೆ ನೀಡಿದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಮಾತನಾಡಿ, ಏ.9 ಹಾಗೂ 10ರಂದು ಸ್ಕ್ರೀನಿಂಗ್ ಸಮಿತಿ ಸಭೆ ನಡೆಯಲಿದೆ. ಬಳಿಕ 15ರೊಳಗಾಗಿ ಅಂತಿಮ ಪಟ್ಟಿ ಬಿಡುಗಡೆ ಮಾಡಲಿದ್ದು, ಚುನಾವಣೆಗೆ ಸಿದ್ಧತೆ ಪೂರ್ಣಗೊಳಿಸಿ ಕೊಳ್ಳಬೇಕು ಎಂದು ಸಚಿವರಿಗೆ ಸೂಚನೆ ನೀಡಿದರು.
40 ಸ್ಟಾರ್ ಪ್ರಚಾರಕರ ಪಟ್ಟಿ: ಇದೇ ವೇಳೆ ಚುನಾವಣೆ ಪ್ರಚಾರಕ್ಕೆ ಅಗತ್ಯವಿದ್ದರೆ ಮಾತ್ರ ಸ್ಟಾರ್ ಪ್ರಚಾರಕರನ್ನು ಬಳಸಿಕೊಳ್ಳಬೇಕು. ಅನಗತ್ಯವಾಗಿ ಹಾಗೂ ಶೋಕಿಗಾಗಿ ಗೆಲ್ಲುವ ಸಾಮರ್ಥ್ಯ ಇರುವ ಅಭ್ಯರ್ಥಿಗಳು ಸ್ಟಾರ್ ಪ್ರಚಾರಕರನ್ನು ಹೆಚ್ಚಾಗಿ ಬಳಸಿಕೊಳ್ಳಬೇಡಿ. ರಾಜ್ಯಾದ್ಯಂತ ಚುನಾವಣಾ ಪ್ರಚಾರಕ್ಕಾಗಿ 40 ಮಂದಿ ಪ್ರಚಾರಕರ ಪಟ್ಟಿ ಸಿದ್ಧಪಡಿಸಿದ್ದು, ಸದ್ಯದಲ್ಲೇ ಪಟ್ಟಿ ಅಂತಿಮಗೊಳಿಸಲಾಗುವುದು ಎಂದು ಸಚಿವರಿಗೆ ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.