ಹಿಂದೂ ಮಹಾಸಾಗರದಲ್ಲಿ ಫ್ರಾನ್ಸ್ ಯುದ್ಧ ನೌಕೆ: ಚೀನಾ ನೀ ಜೋಕೆ!

By Web DeskFirst Published Oct 20, 2018, 5:19 PM IST
Highlights

ಹಿಂದೂ ಮಹಾಸಾಗರದಲ್ಲಿ ಚೀನಾದ ಅನವಶ್ಯಕ ಹಸ್ತಕ್ಷೇಪ! ಚೀನಾಗೆ ಟಕ್ಕರ್ ಕೊಡಲು ಹಿಂದೂ ಮಹಾಸಾಗರದಲ್ಲಿ ಫ್ರಾನ್ಸ್ ಯುದ್ಧ ನೌಕೆ! ದಕ್ಷಿಣ ಚೀನಾ ಸಮುದ್ರದ ನಿಯಂತ್ರಣಕ್ಕೆ ಹವಣಿಸುತ್ತಿರುವ ಚೀನಾ!ಸ್ವತಂತ್ರ ಸಂಚರಣೆಯ ಹಕ್ಕಿನ ರಕ್ಷಣೆ ಸಿದ್ಧ ಎಂದ ಫ್ರಾನ್ಸ್ 
 

ಪ್ಯಾರಿಸ್(ಅ.20): ಹಿಂದೂ ಮಹಾಸಾಗರದಲ್ಲಿ ಚೀನಾದ ಅನವಶ್ಯಕ ಹಸ್ತಕ್ಷೇಪಕ್ಕೆ ಉತ್ತರವಾಗಿ ಶೀಘ್ರದಲ್ಲೇ ಫ್ರಾನ್ಸ್ ತನ್ನ ಯುದ್ಧ ನೌಕೆಯನ್ನು ಹಿಂದೂ ಮಹಾಸಾಗರದಲ್ಲಿ ನಿಯೋಜಿಸಲಿದೆ. 

ಈ ಕುರಿತು ಖುದ್ದು ಮಾಹಿತಿ ನೀಡಿರುವ ಫ್ರಾನ್ಸ್, ತನ್ನ ನೌಕಾಸೇನೆಯ ಅತ್ಯಂತ ಪ್ರತಿಷ್ಠಿತ ಯುದ್ಧ ನೌಕೆಯಾದ ದಿ ಚಾರ್ಲ್ಸ ಡೆ ಗೌಲ್ಲೆಯನ್ನು ಹಿಂದೂ ಮಹಾಸಾಗರದಲ್ಲಿ ನಿಯೋಜಿಸುವುದಾಗಿ ಹೇಳಿದೆ. ಸದ್ಯ ಈ ಯುದ್ಧ ನೌಕೆಯನ್ನು ಫ್ರಾನ್ಸ್‌ನ ದಕ್ಷಿಣ ನೌಕಾನೆಲೆಯಲ್ಲಿ ರಿಪೇರಿ ಮಾಡಲಾಗುತ್ತಿದ್ದು, ಶೀಘ್ರವೇ ಇದನ್ನು ಹಿಂದೂ ಮಹಾಸಾಗರಕ್ಕೆ ಕಳುಹಿಸಲಾಗುವುದು ಎಂದು ಫ್ರಾನ್ಸ್ ರಕ್ಷಣಾ ಸಚಿವ ಫ್ಲೋರೆನ್ಸ್ ಪ್ಯಾರ್ಲಿ ಮಾಹಿತಿ ನೀಡಿದ್ದಾರೆ.

ಹಿಂದೂ ಮಹಾಸಾಗರದಲ್ಲಿ ಚೀನಾ ಇತರ ರಾಷ್ಟ್ರಗಳ ವಾಣಿಜ್ಯ ಹಡಗುಗಳ ಮೇಲೆ ನಿಯಂತ್ರಣ ಸಾಧಿಸಬಯಸಿದ್ದು, ಸ್ವತಂತ್ರ ಸಂಚರಣೆಗೆ ಅಡ್ಡಿಯುಂಟು ಮಾಡುತ್ತಿದೆ ಎಂದು ಫ್ರಾನ್ಸ್ ಗಂಭೀರ ಆರೋಪ ಮಾಡಿದೆ.

ದಕ್ಷಿಣ ಚೀನಾ ಸಮುದ್ರದ ಸಂಪೂರ್ಣ ನಿಯಂತ್ರಣಕ್ಕಾಗಿ ಚೀನಾ ಹವಣಿಸುತ್ತಿದ್ದು, ಇದು ಅಂತರಾಷ್ಟ್ರೀಯ ವ್ಯಾಪಾರ ಮತ್ತು ರಕ್ಷಣಾ ಒಪ್ಪಂದಗಳ ಸ್ಪಷ್ಟ ನಿರಾಕರಣೆ ಎಂದು ಫ್ರಾನ್ಸ್ ಹರಿಹಾಯ್ದಿದೆ. ಈ ಮಧ್ಯೆ ಆಸ್ಟ್ರೆಲೀಯಾ ಪ್ರವಾಸದ ವೇಳೆ ಫ್ರಾನ್ಸ್ ಅ್ಯಧ್ಯಕ್ಷ ಇಮ್ಯಾನ್ಯುಯಲ್ ಮಾರ್ಕನ್ ಕೂಡ ದಕ್ಷಿಣ ಚೀನಾ ಸಮುದ್ರದ ಮೇಲೆ ಒಂದು ರಾಷ್ಟ್ರದ ಹಿಡಿತವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

click me!