
ನವದೆಹಲಿ(ಡಿ.28): ಶಾಲೆಗೆ ಹೋಗುವ ಮಕ್ಕಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕಾಂಶಗಳು ತುಂಬಲಿ ಎಂಬ ಕಾರಣಕ್ಕೆ ಮಧ್ಯಾಹ್ನದ ಬಿಸಿಯೂಟ ಆರಂಭಿಸಲಾಗಿದೆ. ಇದೀಗ ಅವುಗಳಿಗೆ ಬದಲಾಗಿ ಪ್ಯಾಕೇಜ್ಡ್ ಆಹಾರ ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲೂ ಪ್ಯಾಕೇಜ್ಡ್ ಆಹಾರ ನೀಡುವುದರ ಬಗ್ಗೆಯೂ ಇರಾದೆ ಇದೆ. ಅದಕ್ಕಾಗಿ ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಹೊಸ ನಿಯಮಗಳನ್ನು ಹೊರಡಿಸಿದೆ. ಅದರ ಪ್ರಕಾರ ವಿಟಮಿನ್, ಅಯೋಡಿನ್, ಫಾಲಿಕ್ ಆ್ಯಸಿಡ್ ಮತ್ತು ಇತರ ಪೌಷ್ಟಿಕಾಂಶಗಳು ಯಾವ ಪ್ರಮಾಣದಲ್ಲಿರಬೇಕೆಂದು ಮುದ್ರಿಸಬೇಕೆಂದು ಆಹಾರ ಉತ್ಪಾದನಾ ಕಂಪನಿಗಳು, ಪ್ಯಾಕರ್‌ಗಳಿಗೆ ಸೂಚಿಸಲಾಗಿದೆ.
ಜತೆಗೆ ನಿಗದಿತ ಸರ್ಕಾರಿ ಪ್ರಯೋಗಶಾಲೆಯಲ್ಲಿ ಅವರ ಕಂಪನಿಯ ಉತ್ಪನ್ನಗಳನ್ನು ಪ್ರಯೋಗಕ್ಕೆ ಒಳಪಡಿಸಿ, ಆಹಾರದಲ್ಲಿ ಪೌಷ್ಟಿಕಾಂಶಯುಕ್ತ ಸೇರ್ಪಡೆಗೊಳಿಸುವ ಬಗ್ಗೆ ಕೈಗೊಳ್ಳಲಾಗಿರುವ ಅಂಶಗಳ ಬಗ್ಗೆ ಕಂಪನಿಗಳು ಮುಚ್ಚಳಿಕೆ ನೀಡಬೇಕೆಂದು ಹೊಸ ನಿಯಮದಲ್ಲಿ ಸೂಚಿಸಲಾಗಿದೆ. ಎಲ್ಲ ರೀತಿಯ ಪ್ಯಾಕೇಜ್ಡ್ ಆಹಾರಗಳಿಗೆ ಈ ನಿಯಮ ಅನ್ವಯವಾಗುತ್ತದೆ. ಈ ಬಗ್ಗೆ ‘ದ ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ.
ಆದರೆ, ಪ್ರಾಧಿಕಾರದ ಹೊಸ ನಿಯಮಗಳ ಬಗ್ಗೆ ಹಲವು ನಾಗರಿಕ ಸಂಘಟನೆಗಳು ಪ್ರಬಲ ಆಕ್ಷೇಪ ವ್ಯಕ್ತಪಡಿಸಿವೆ. ರೈಟ್ ಟು ಫುಡ್ ಎಂಬ ಸಂಘಟನೆ ಮತ್ತು ಸುಪ್ರೀಂಕೋರ್ಟಿಂದ ನೇಮಕಗೊಂಡ ಆಹಾರ ಆಯುಕ್ತರು ನಿಯಮ ಸರಿಯಲ್ಲ ಎಂದು ವಾದಿಸಿವೆ. ಸ್ಥಳದಲ್ಲೇ ಅಡುಗೆ ಮಾಡಿ ಪೌಷ್ಟಿಕಾಂಶಯುಕ್ತ ನೀಡಬೇಕೆಂಬ ಮೂಲ ಉದ್ದೇಶಕ್ಕೇ ಪ್ರಸ್ತಾವಿತ ನಿಯಮ ಕೊಡಲಿಯೇಟು ನೀಡುತ್ತದೆಂದು ಅವರು ಪ್ರತಿಪಾದಿಸಿದ್ದಾರೆ. ಇದರಿಂದಾಗಿ ದೊಡ್ಡ ಆಹಾರ ಉತ್ಪಾದನಾ ಕಂಪನಿಗಳಿಗೆ ಲಾಭತಂದುಕೊಡುತ್ತದೆಯೇ ಹೊರತು ಪೌಷ್ಟಿಕಾಂಶ ನೀಡುವ ಮೂಲ ಉದ್ದೇಶಕ್ಕೆ ಧಕ್ಕೆಯಾಗಲಿದೆ ಎನ್ನುವುದು ಅವರ ವಾದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.