'ಮೈತ್ರಿ ಸರಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ'

By Web DeskFirst Published Jul 6, 2019, 4:55 PM IST
Highlights

ರಾಜ್ಯದ ಜನತೆ ಭಾರೀ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗಿದ್ದಾರೆ. ಇಂಥ ಬೆಳವಣಿಗೆಗೆ ಸಹಜವಾಗಿಯೇ ಒಬ್ಬರಿಗೊಬ್ಬರು ಕೆಸರೆರಚಾಟ ಆರಂಭಿಸಿದ್ದಾರೆ. ಮೈತ್ರಿ ಸರಕಾರದ ವೈಫಲ್ಯಕ್ಕೆ ಸಿದ್ಧರಾಮಯ್ಯ ಅವರೇ ಕಾರಣವೆನ್ನುತ್ತಿದ್ದಾರೆ ಬಿಜೆಪಿ ಶಾಸಕ. ಯಾರವರು?

ಬೆಳಗಾವಿ (ಜೂ.06): ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಸಮನ್ವಯದ ಕೊರತೆಯೋ, ಬಂಡಾಯದ ಬಿಸಿಯೋ? ಒಟ್ಟಿನಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಶಾಸಕರು ಸರಕಾರ ನಡೆಸಲು ತೋರದ ಮೈತ್ರಿ ಧರ್ಮವನ್ನು ರಾಜೀನಾಮೆ ನೀಡುವಲ್ಲಿ ತೋರಿದ್ದಾರೆ. ಆಗಲೇ  13 ಶಾಸಕರು ರಾಜೀನಾಮೆ ಪತ್ರವನ್ನು ಸ್ಪೀಕರ್‌ಗೆ ಸಲ್ಲಿಸಿದ್ದಾರೆ. ಆ ಮೂಲಕ ಸರಕಾರ ಪತನಗೊಳ್ಳುವುದು ಬಹುತೇಕ ಖಚಿತ. ಇದರಲ್ಲಿ ಬಿಜೆಪಿ ಕೈವಾಡ ಇಲ್ಲವೆಂಬುದನ್ನು ಖುದ್ದು ಮೈತ್ರಿ ಶಾಸಕರೇ ಒಪ್ಪಿಕೊಂಡಿದ್ದಾರೆ. ಅಂದ ಮೇಲೆ ಶಾಸಕರ ಈ ನಿರ್ಧಾರಕ್ಕೆ ಒಳ ಜಗಳ ಕಾರಣವಿರಬಹುದಾ, ಯಾರಿಗ್ಗೊತ್ತು?

ಆದರೆ, ಮೈತ್ರಿ ಸರಕಾರದ ಈ ಪರಿಸ್ಥಿತಿಗೆ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ. ಸರಕಾರ  ಬೀಳಿಸುವಂತ ಕಾರ್ಯಕ್ರಮವನ್ನು ಅವರು ಹಮ್ಮಿಕೊಂಡಿದ್ದಾರೆಂದು ಆರೋಪಿಸುವ ಮೂಲಕ ಹುಕ್ಕೇರಿ ಬಿಜೆಪಿ ಶಾಸಕ ಉಮೇಶ್ ಕತ್ತಿ ಹೊಸ ಬಾಂಬ್ ಸಿಡಿಸಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಬೆಳಗ್ಗೆಯಿಂದ ಆಗಿದ್ದೇನು?

ಇಲ್ಲಿನ ಸಾಂಬ್ರಾ ಎರ್‌ಪೋರ್ಟಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕತ್ತಿ, 'ಅನೈತಿಕ ಸಂಬಂಧದಿಂದ ಸಮ್ಮಿಶ್ರ ಸರಕಾರ ನಡೆಯುತ್ತಿತ್ತು.  ಈ ಸಂಬಂಧ ಹಳಿಸಿದ್ದು, ಬೇಸತ್ತ ಶಾಸಕರು ರಾಜೀನಾಮೆ ನೀಡಿದ್ದಾರೆ. ಸರಕಾರ ತಾನಾಗಿಯೇ ಬಿದ್ದು ಹೋಗಲಿದೆ. ಆಪರೇಶನ್ ಕಮಲಕ್ಕೆ ನಾವು ಕೈ ಹಾಕಿಲ್ಲ,' ಎಂದು ಸ್ಪಷ್ಟ ಪಡಿಸಿದರು.

'ಮುಂಬರುವ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಈ ಸರಕಾರದ ನೇತೃತ್ವವನ್ನು ಬಿ.ಎಸ್. ಯಡಿಯೂರಪ್ಪ ಅವರು ಮುನ್ನಡೆಸುತ್ತಾರೆ. ಮುಂದಿನ ನಾಲ್ಕು ವರ್ಷ ಬಿಜೆಪಿ ಆಡಳಿತ ನಡೆಸಲಿದೆ. 
ಇದುವರೆಗೆ 12 ಶಾಸಕರು ರಾಜೀನಾಮೆ ನೀಡಿದ್ದು, ಇನ್ನೂ ಆರು ಮಂದಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರೀಕ್ಷೆ ಇದೆ.  ಅಮೆರಿಕದಿಂದ ಮರಳುತ್ತಿರುವ ಮುಖ್ಯಮಂತ್ರಿಯೂ ರಾಜೀನಾಮೆ ನೀಡಬೇಕು,' ಎಂದು ಕತ್ತಿ ಆಗ್ರಹಿಸಿದರು.

'ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಿದ ರಾಜರಾಜೇಶ್ವರ ನಗರದ ಕಾಂಗ್ರೆಸ್ ಶಾಸಕ ಮುನಿರತ್ನ ಅವರ ಸ್ವೀಕೃತಿ ಪತ್ರವನ್ನು ಸಚಿವ ಡಿ.ಕೆ.ಶಿವಕುಮಾರ್ ಹರಿದು, ಉದ್ಧಟತನ ಮೆರೆದಿದ್ದಾರೆ. ಡಿಕೆಶಿ ಗೌಡರ ರಾಜ್ಯ ಕಟ್ಟಲು ಮುಂದಾಗಿದ್ದರು. ಎಲ್ಲವೂ ಉಲ್ಟಾ ಹೊಡೆದಿದೆ,' ಎಂದ ಕತ್ತಿ ಸಿದ್ದರಾಮಯ್ಯ ಬಿಜೆಪಿಗೆ ಬಂದರೆ ಸ್ವಾಗತ ಎಂದೂ ಹೇಳಿದರು.

ರಿವರ್ಸ್ ಆಪರೇಷನ್‌ಗೆ ಯಾರಾದರೂ ಒಳಗಾಗಿದ್ದರೆ ಹೆಸರು ಹೇಳುವಂತೆ ಮಾಧ್ಯಮದವರಿಗೇ ಸವಾಲು ಹಾಕಿದ ಅವರು, ಬಿಜೆಪಿ ಶಾಸಕರು ಯಾರೂ ಆಪರೇಷನ್‌ಗೆ ಒಳಗಾಗಿಲ್ಲವೆಂಬುದನ್ನು ಸ್ಪಷ್ಟಪಡಿಸಿದ್ದಾರೆ. 

click me!