
ಬೆಂಗಳೂರು: ನಿರೀಕ್ಷೆಯಂತೆಯೇ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಅಧ್ಯಕ್ಷತೆ ನೀಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಮಾಜಿ ಮುಖ್ಯಮಂತ್ರಿಗೆ ಮನ್ನಣೆ ನೀಡಿದೆ.
ಮೈತ್ರಿಕೂಟ ರಚನೆಯ ನಂತರ ಸಿದ್ದರಾಮಯ್ಯಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮಾಡಲಾಗಿತ್ತು ಮತ್ತು ಸಮನ್ವಯ ಸಮಿತಿಗೆ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಒಲವು ಹೊಂದಿತ್ತು. ಆದರೆ, ಈ ವಿಚಾರದ ಬಗ್ಗೆ ಜೆಡಿಎಸ್‌ನೊಂದಿಗೆ ಚರ್ಚೆ ನಡೆದಾಗ ಅದಕ್ಕೆ ವಿರೋಧ ವ್ಯಕ್ತವಾಗಿತ್ತು ಎನ್ನಲಾಗಿದೆ.
ಚುನಾವಣೆ ಪ್ರಚಾರದ ವೇಳೆ ಜೆಡಿಎಸ್ ವಿರುದ್ಧ ಹರಿಹಾಯ್ದಿದ್ದ ಸಿದ್ದರಾಮಯ್ಯ ಅವರನ್ನು ಸಮನ್ವಯ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡುವುದಕ್ಕೆ ಜೆಡಿಎಸ್ ವರಿಷ್ಠರಿಂದಲೇ ವಿರೋಧ ವ್ಯಕ್ತವಾಗಿತ್ತು ಎನ್ನಲಾಗಿದೆ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಸಮನ್ವಯ ಸಮಿತಿಯಲ್ಲದೆ ಇತರೆ ಯಾವುದೇ ಹುದ್ದೆ ನೀಡಿದರೂ ಅವರಿಗೆ ನ್ಯಾಯ ಕೊಟ್ಟಂತೆ ಆಗುತ್ತಿರಲಿಲ್ಲ. ಜೆಡಿಎಸ್‌ನ ವಿರೋಧವಿದೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಅವರಿಗೆ ಪ್ರಮುಖ ಸ್ಥಾನ ನೀಡದಿದ್ದರೆ ಅದು ಅವರನ್ನು ನೆಚ್ಚಿರುವ ಅಹಿಂದ ವರ್ಗಕ್ಕೆ ತಪ್ಪು ಸಂದೇಶ ರವಾನೆ ಮಾಡಿದಂತಾಗುತ್ತದೆ ಎಂಬ ಆತಂಕ ಹೈಕಮಾಂಡ್‌ಗೆ ಇತ್ತು.
ಹೀಗಾಗಿ, ಹಣಕಾಸು ಹಾಗೂ ಇಂಧನದಂತಹ ಪ್ರಮುಖ ಖಾತೆಗಳಿಗೆ ಪಟ್ಟು ಹಿಡಿದಿದ್ದ ಜೆಡಿಎಸ್‌ಗೆ ಆ ಖಾತೆಗಳನ್ನು ಬಿಟ್ಟುಕೊಡಲು ಒಪ್ಪಿಂದ ಹೈಕಮಾಂಡ್, ಅದೇ ರೀತಿ ತಾನು ಕೂಡ ಸಿದ್ದರಾಮಯ್ಯ ಅವರಿಗೆ ಸಮನ್ವಯ ಸಮಿತಿ ಅಧ್ಯಕ್ಷತೆ ನೀಡುವಂತೆ ಪಟ್ಟು ಹಿಡಿದು ಜೆಡಿಎಸ್ ವರಿಷ್ಠರನ್ನು ಮಣಿಸಿದೆ ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.