
ಮುಜಫರ್‌ನಗರ್(ಸೆ.17): ಅದೊಂದು ಕಿರಿದಾದ ಗಲ್ಲಿ. ಆ ಗಲ್ಲಿಯಲ್ಲೊಂದು ಪುಟ್ಟ ದೇವಾಲಯ. ಈ ದೇವಾಲಯ ಕಳೆದ 26 ವರ್ಷಗಳಿಂದ ಮುಸ್ಲಿಮರ ‘ವಶ’ದಲ್ಲಿದೆ. ಈ ದೇವಾಲಯದ ಹಣೆಬರಹ ನಿರ್ಧರಿಸೋದು ಇಲ್ಲಿರುವ ಮುಸ್ಲಿಮರೇ.
ಹಾಗಂತ ಇಲ್ಲಿನ ಮುಸ್ಲಿಮರು ಈ ದೇವಾಲಯವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದರೆ ಅದು ನಿಮ್ಮ ತಪ್ಪು ಕಲ್ಪನೆ. ಕಾರಣ ಕಳೆದ 26 ವರ್ಷಗಳಿಂದ ಈ ದೇವಾಲಯದ ನಿರ್ವಹಣೆ, ರಕ್ಷಣೆಯ ಜವಾಬ್ದಾರಿಯನ್ನು ಇಲ್ಲಿನ ಮುಸ್ಲಿಮರು ನಿಭಾಯಿಸುತ್ತಾ ಬಂದಿದ್ದಾರೆ.
ಈ ದೇವಾಲಯ ಇರೋದು ಉತ್ತರಪ್ರದೇಶದ ಮುಜಫರ್‌ನಗರ್ ದ ಲಡ್ಹೇವಾಲಾ ಎಂಬ ಪುಟ್ಟ ಗ್ರಾಮದಲ್ಲಿ. ಹೇಳಿ ಕೇಳಿ ಮುಜಫರ್‌ನಗರ್ ಕೋಮು ಸೂಕ್ಷ್ಮ ನಗರ. ಆದರೆ ಇದರಿಂದ ತುಸುವೇ ದೂರದಲ್ಲಿರುವ ಲಡ್ಹೇವಾಲಾ ಗ್ರಾಮದಲ್ಲಿ ಕೋಮು ದ್ವೇಷಕ್ಕೆ ಜಾಗವೇ ಇಲ್ಲ.
ಇಲ್ಲಿ ವಾಸವಿದ್ದ ಹಿಂದೂ ಕುಟುಂಬವೊಂದು 1990ರ ದಶಕದಲ್ಲಿ ಬಾಬರಿ ಮಸೀದಿ ಧ್ವಂಸ ಬಳಿಕ ಉದ್ಭವಿಸಿದ್ದ ಗಲಭೆಯ ಹಿನ್ನೆಲೆಯಲ್ಲಿ ಆ ಪ್ರದೇಶ ಬಿಟ್ಟು ತೆರಳಿತ್ತು. ಅಂದಿನಿಂದಲೂ ಅಲ್ಲಿರುವ ಮುಸ್ಲಿಮರು ಪ್ರತಿದಿನ ಆ ದೇಗುಲವನ್ನು ಸ್ವಚ್ಛಗೊಳಿಸುತ್ತಾರೆ. ಪ್ರತಿ ದೀಪಾವಳಿ ಸಮಯದಲ್ಲಿ ದೇವಾಲಯಕ್ಕೆ ಬಣ್ಣ ಹೊಡೆಸುತ್ತಾರೆ. ಪ್ರಾಣಿಗಳು ಪ್ರವೇಶಿಸದಂತೆ ರಕ್ಷಿಸುತ್ತ ಬಂದಿದ್ದಾರೆ.
ಜಿತೇಂದರ್ ಕುಮಾರ್ ಕುಟುಂಬ ಈ ಜಾಗ ತೊರೆಯುವುದನ್ನು ಆ ಒತ್ತಡದ ಸನ್ನಿವೇಶದಲ್ಲೂ ತಡೆಯಲು ಪ್ರಯತ್ನಿಸಿದೆ. ಅವರು ಕೆಲವು ಸಮಯದ ಬಳಿಕ ಮರಳುವ ವಾಗ್ದಾನ ನೀಡಿದರು. ಅಂದಿನಿಂದ ಮುಸ್ಲಿಮರೇ ಈ ದೇವಾಲಯವನ್ನು ನೋಡಿಕೊಳ್ಳುತ್ತ ಬಂದಿರುವುದಾಗಿ 60 ವರ್ಷದ ಅಲಿ ಹೇಳುತ್ತಾರೆ.
ಇಲ್ಲಿ 35 ಮುಸ್ಲಿಂ ಕುಟುಂಬಗಳಿವೆ. ಈ ಹಿಂದೆ ಇಲ್ಲಿ 20 ಹಿಂದೂ ಕುಟುಂಬಗಳಿದ್ದವು. 1970ರಲ್ಲಿ ದೇಗುಲ ನಿರ್ಮಿಸಲಾಗಿತ್ತು. ಆದರೆ ಗಲಭೆ ಬಳಿಕ ಅವರೆಲ್ಲಾ ಮನೆ ತೊರೆದಿದ್ದು, ಆ ಹಿಂದೂ ಕುಟುಂಬಗಳು ವಾಪಸಾಗಲಿ ಎಂದು ನಾವೆಲ್ಲಾ ಬಯಸುತ್ತೇವೆ ಎನ್ನುತ್ತಾರೆ ಅಲಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.