
ನವದೆಹಲಿ (ಏ.14): ಒಂದು ಕೋಟಿ ಭಾರತೀಯರ ಬ್ಯಾಂಕ್ ಖಾತೆ ವಿವರಗಳು ಮಾರಾಟಕ್ಕಿವೆಯೆಂಬ ಆಘಾತಕಾರಿ ಅಂಶವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಪ್ರತಿ ವ್ಯಕ್ತಿಯ ಬ್ಯಾಂಕ್ ಖಾತೆ ವಿವವರಗಳು ಬರೋಬ್ಬರೀ 20 ಪೈಸೆಗೆ ಮಾರಾಟವಾಗುತ್ತಿದೆಯೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
80 ವರ್ಷ ಪ್ರಾಯದ ಮಹಿಳೆಯೊಬ್ಬಳ ಕ್ರೆಡಿಟ್ ಕಾರ್ಡ್’ನಿಂದ 1.46 ಲಕ್ಷ ವಂಚನೆಯಾಗಿರುವ ಪ್ರಕರಣವನ್ನು ತನಿಖೆ ನಡೆಸಿದಾಗ ಈ ಬೆಚ್ಚಿಬೀಳಿಸುವ ಅಂಶ ಹೊರಬಿದ್ದಿದೆ. ಬ್ಯಾಂಕ್, ಕಾಲ್ ಸೆಂಟರ್ ಹಾಗೂ ಅವುಗಳ ಅಧಿಕೃತ ಸಂಸ್ಥೆಗಳಲ್ಲಿ ಕೆಲಸ ಮಾಡುವವರ ಜೊತೆ ಸೇರಿ, ಬ್ಯಾಂಕ್ ಖಾತೆದಾರರ ಮಾಹಿತಿಯನ್ನು ವಂಚಕರಿಗೆ ಮಾರಾಟ ಮಾಡುವ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.
ಆ ಜಾಲದ ಪ್ರಮುಖ ಕಿಲಾಡಿಯೊಬ್ಬನ ವಿಚಾರಣೆ ನಡೆಸಿದಾಗ ಆತನ ಬಳಿ ಕಳವು ಮಾಡಲಾದ ಒಂದು ಕೋಟಿ ಖಾತೆದಾರರ ವಿವರಗಳು ಪತ್ತೆಯಾದುವು ಎಂದು ಪೊಲೀಸ್ ಅಧಿಕಾರಿ ರೋಮಿಲ್ ಬಾನಿಯಾ ಹೇಳಿದ್ದಾರೆ.
ಖಾತೆದಾರರ ಖಾತೆ ಸಂಖ್ಯೆ, ಕಾರ್ಡ್ ಸಂ. ಕಾರ್ಡ್ ಮೇಲಿರುವ ಹೆಸರು, ಜನ್ಮ ದಿನಾಂಕ ಹಾಗೂ ಮೊಬೈಲ್ ಸಂ. ಗಳು ವಂಚಕರು ಕಳವು ಮಾಡಿದ ಮಾಹಿತಿಯಲ್ಲಿ ಅಡಕವಾಗಿದ್ದುವು ಎಂದು ತಿಳಿದುಬಂದಿದೆ. ಒಟ್ಟು ಮಾಹಿತಿಯ ಗಾತ್ರ 20 ಗಿಗಾ ಬೈಟ್’ಗಳಿಂತಲೂ ಹೆಚ್ಚಿತ್ತು ದು ಪೊಲೀಸರು ತಿಳಿಸಿದ್ದಾರೆ.
50 ಸಾವಿರ ಮಂದಿಯ ಮಾಹಿತಿಯನ್ನು 10-20ಸಾವಿರ ರೂ.ಗಳಿಗೆ ಮಾರಾಟ ಮಾಡಿರುವುದಾಗಿ ಓರ್ವ ಆರೋಪಿ ಬಾಯ್ಬಿಟ್ಟಿದ್ದಾನೆ.
ಈ ವಿವರಗಳನ್ನು ಬಳಸಿ, ಹೆಚ್ಚಿನ ಮಾಹಿತಿಗಳನ್ನು ಮೋಸದ ಮೂಲಕ ಖಾತೆದಾರರಿಂದಲೇ ಪಡೆದು ಅವರ ಖಾತೆಯಿಂದ ಹಣ ಲಪಟಾಯಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ವಂಚಕರು ಹೆಚ್ಚಾಗಿ ಹಿರಿಯ ನಾಗರಿಕರನ್ನು ಗುರಿಯಾಗಿಸಿ ಈ ಕೃತ್ಯ ನಡೆಸುತ್ತಿದ್ದರು.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.