
ಬೆಂಗಳೂರು [ಆ.17]: ನೆರೆಯ ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ ಕಡಿಮೆಯಾಗಿರುವುದರಿಂದ ಶುಕ್ರವಾರ ರಾಜ್ಯದ ಕೃಷ್ಣಾ ಮತ್ತು ಭೀಮಾ ನದಿಪಾತ್ರದ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪ್ರವಾಹ ಮತ್ತಷ್ಟುಇಳಿಮುಖವಾಗಿದೆ. ಆದರೂ ಐತಿಹಾಸಿಕ ಕೂಡಲಸಂಗಮ ಕ್ಷೇತ್ರವೂ ಸೇರಿದಂತೆ ಹಲವಾರು ನದಿ ತಟದ ಪ್ರದೇಶಗಳು, ಇನ್ನೂ ಜಲಾವೃತವಾಗಿಯೇ ಇವೆ. ಹಲವು ಕೆಳ ಸೇತುವೆಗಳು ಇನ್ನೂ ಮುಳುಗಡೆ ಸ್ಥಿತಿಯಲ್ಲೇ ಇದ್ದು, ಸಂಚಾರಕ್ಕೆ ಇನ್ನೂ ಮುಕ್ತವಾಗಿಲ್ಲ.
ಈ ನಡುವೆ ರಾಜ್ಯದೆಲ್ಲೆಡೆ ರಕ್ಷಣಾ ಕಾರ್ಯಗಳು ನಿಂತಿದ್ದರೂ ಕೊಡಗಿನಲ್ಲಿ ನಾಪತ್ತೆಯಾಗಿದ್ದ 6 ಮಂದಿಯ ಶೋಧ ಕಾರ್ಯ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯ ದುರಸ್ತಿ ಕಾರ್ಯಗಳು ಮುಂದುವರಿದಿದೆ. ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ನೆರೆ ಸಂತ್ರಸ್ತರೂ ತಮ್ಮ ಮನೆಗಳತ್ತ ಹೆಜ್ಜೆ ಹಾಕುತ್ತಿದ್ದು ಜನಜೀವನ ನಿಧಾನಕ್ಕೆ ಸಹಜಸ್ಥಿತಿಯತ್ತ ಮುಖಮಾಡುತ್ತಿದೆ.
ಆಲಮಟ್ಟಿಅಣೆಕಟ್ಟಿಗೆ ಒಳಹರಿವು ಕ್ರಮೇಣ ಕಡಿಮೆಯಾಗುತ್ತಿದ್ದು, 4.89 ಲಕ್ಷ ಕ್ಯುಸೆಕ್ ಒಳಹರಿವು, 5.20 ಲಕ್ಷ ಕ್ಯುಸೆಕ್ ಹೊರಹರಿವಿದೆ. ನಾರಾಯಣಪೂರದ ಬಸವಸಾಗರ ಜಲಾಶಯದಿಂದಲೂ ಕೃಷ್ಣಾ ನದಿಗೆ 4.72 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ. ಸುಮಾರು 1.5 ಲಕ್ಷ ಕ್ಯುಸೆಕ್‌ನಿಂದ 2 ಲಕ್ಷ ಕ್ಯುಸೆಕ್‌ವರೆಗೆ ನೀರು ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಬಿಟ್ಟಸಂದರ್ಭದಲ್ಲಿ ಮಾತ್ರ ಈ ಸೇತುವೆ ಮತ್ತೆ ಸಂಚಾರಕ್ಕೆ ಮುಕ್ತವಾಗಬಹುದಾದರೂ, ಕೊಚ್ಚಿ ಹೋದ ಹೆದ್ದಾರಿ ಅವ್ಯವಸ್ಥೆ ಸುಗಮ ಸಂಚಾರಕ್ಕೆ ಇನ್ನೂ ಕೆಲದಿನಗಳವರೆಗೆ ಕಾಯಬೇಕಾಗಬಹುದು.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕೆಲವೆಡೆ ಸಂಚಾರ ಸುಗಮ: ಮಹಾರಾಷ್ಟ್ರ, ಗೋವಾದಂತಹ ಪ್ರಮುಖ ಹೆದ್ದಾರಿಗಳು ಸಂಚಾರಕ್ಕೆ ತೆರೆದುಕೊಂಡಿವೆ. ಲೋಕಾಪುರ- ಮುಧೋಳ ಸಂಪರ್ಕಿಸುವ ಚಿಚಖಂಡಿ ಸೇತುವೆ ಶುಕ್ರವಾರ ಸಂಚಾರಕ್ಕೆ ಮುಕ್ತವಾಗಿರುವುದರಿಂದ ಧಾರವಾಡ, ವಿಜಯಪುರ ಮಾರ್ಗದ ಸಂಚಾರ ಪುನಾರಂಭಗೊಂಡಂತಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಕೊಳ್ಳೂರು-ದೇವದುರ್ಗ ಸೇತುವೆ ಬಳಿಯ ರಾಜ್ಯ ಹೆದ್ದಾರಿ ಸಂಪೂರ್ಣ ಕೊಚ್ಚಿ ಹೋಗಿದೆ.
ಇದೆ ವೇಳೆ ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಹಿಪ್ಪರಗಿ ಬ್ಯಾರೇಜ್ ಮೂಲಕ ಕೃಷ್ಣಾ ನದಿಗೆ 1.91 ಲಕ್ಷ ಕ್ಯುಸೆಕ್ ನೀರು ಹರಿದುಬರುತ್ತಿದೆ. ಕೃಷ್ಣಾ ನದಿ ಪ್ರವಾಹ ಇಳಿಮುಖವಾಗುತ್ತ ಸಾಗುತ್ತಿದ್ದು, ಬೆಳಗಾವಿ ಜಿಲ್ಲೆಯ ರಾಯಬಾಗ, ಅಥಣಿ, ಚಿಕ್ಕೋಡಿ, ಕಾಗವಾಡ ಹಾಗೂ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಲವಾರು ಗ್ರಾಮಗಳು ಇನ್ನೂ ಜಲಾವೃತವಾಗಿವೆ. ಘಟಪ್ರಭಾ ಮತ್ತು ಮಲಪ್ರಭಾ ನದಿ ತೀರ ಪ್ರದೇಶಗಳಲ್ಲಿ ಉಂಟಾಗಿದ್ದ ಪ್ರವಾಹ ಭಾರಿ ಪ್ರಮಾಣದಲ್ಲಿ ಇಳಿಮುಖವಾಗಿದೆ. ಬಾದಾಮಿ, ಹುನಗುಂದ ಮಲಪ್ರಭಾ ನದಿ ತೀರದ ಗ್ರಾಮಗಳ ಸಂತ್ರಸ್ತರ ಮನೆಗಳಿಗೆ ನುಗ್ಗಿದ ನೀರು ಕೂಡ ಕಡಿಮೆಯಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ನೀಲಕಂಠರಾಯನ ಗಡ್ಡೆ ಹಾಗೂ ಕೊಳ್ಳೂರು ದೇವದುರ್ಗ ಸೇತುವೆ ಜಲಾವೃತಗೊಂಡಿದ್ದು, ಪರಿಸ್ಥಿತಿ ಇನ್ನೂ ತಹಬದಿಗೆ ಬಂದಿಲ್ಲ.
ಭೀಮಾ ಪ್ರವಾಹ ತಹಬದಿಗೆ: ಇದೇವೇಳೆ ಮಹಾರಾಷ್ಟ್ರದ ಉಜನಿ ಹಾಗೂ ಕೋಯ್ನಾ ಜಲಾಶಯಗಳಿಂದ ಸೊನ್ನ ಬ್ಯಾರೇಜಿನ ಮೂಲಕ ಭೀಮಾ ನದಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ 1.5 ಲಕ್ಷ ಕ್ಯುಸೆಕ್ ಕಡಿಮೆಯಾಗಿರುವುದರಿಂದ ವಿಜಯಪುರ, ರಾಯಚೂರು, ಯಾದಗಿರಿ, ಕಲಬುರಗಿ ಜಿಲ್ಲೆಗಳಲ್ಲಿನ ನದಿಪಾತ್ರಗಳಲ್ಲಿ ಪ್ರವಾಹ ಪರಿಸ್ಥಿತಿ ತಹಬದಿಗೆ ಬರುತ್ತಿದೆ.
ಶುಕ್ರವಾರದಂದು ದಕ್ಷಿಣ ಕನ್ನಡ, ಉಡುಪಿ, ಕೊಡಗು ಬಳ್ಳಾರಿಯ ಹೊಸಪೇಟೆಯಲ್ಲಿ ಆಗಾಗ ತುಂತುರು ಮಳೆಯಾಗಿದ್ದು ಬಿಟ್ಟರೆ ಹೆಚ್ಚೇನೂ ಮಳೆಯಾಗಿಲ್ಲ. ಕರಾವಳಿ ಭಾಗದಲ್ಲಿ ಆ.17ರಿಂದ 21ರ ವರೆಗೆ ಕರಾವಳಿಯಲ್ಲಿ ಭಾರಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.