'ಕೇಂದ್ರದ ನೆರೆ ಪರಿಹಾರ ಯಾವುದಕ್ಕೂ ಸಾಲದು'

By Web DeskFirst Published Oct 6, 2019, 11:25 AM IST
Highlights

ಕೇಂದ್ರದ ಅನುದಾನ ಏತಕ್ಕೂ ಸಾಲದು| ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಹ ನೆರೆ ಪರಿಹಾರ: ಸತೀಶ ಲೇವಡಿ

ಬೆಳಗಾವಿ[ಅ.06]: ರಾಜ್ಯದ ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಿರುವ ಹಣ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ ಎಂದು ಮಾಜಿ ಸಚಿವ, ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೇವಲ ಶೇ.10 ರಷ್ಟುಮಾತ್ರ ಅನುದಾನ ಬಿಡುಗಡೆ ಮಾಡಿದೆ. ಆದರೆ, ಇದು ಪ್ರವಾಹ ಬಾಧಿತ ಸಂತ್ರಸ್ತರಿಗೆ ಏತಕ್ಕೂ ಸಾಲುವುದಿಲ್ಲ. ನಾವು ಹೋರಾಟ ಮಾಡಿದ ಫಲವಾಗಿಯೇ ಕೇಂದ್ರ ಇಷ್ಟಾದರೂ ಅನುದಾನ ಬಿಡುಗಡೆ ಮಾಡಿದೆ. ಇನ್ನೂ ಹೆಚ್ಚಿನ ಅನುದಾನ ಬರುವ ನಿರೀಕ್ಷೆಯಿದೆ ಎಂದು ಹೇಳಿದರು.

Latest Videos

ನಾವು ಮತ್ತೆ ಹೋರಾಟ ಮಾಡುತ್ತೇವೆ. ಕೇಂದ್ರ ಸದ್ಯ ಅಲ್ಪ ಪ್ರಮಾಣದ ಅನುದಾನ ಬಿಡುಗಡೆ ಮಾಡಿದೆ. ನೆರೆ ಸಂತ್ರಸ್ತರಿಗೆ ಕೂಡಲೇ ಪರಿಹಾರಧನ ವಿತರಿಸಬೇಕು. ನೆರೆಯಿಂದ ಹಾನಿಗೀಡಾದ ಅಂಗಡಿಕಾರರಿಗೂ .10 ಸಾವಿರ ರುಪಾಯಿ ಪರಿಹಾರ ಧನ ನೀಡುವಂತೆ ಸಿಎಂ ಯಡಿಯೂರಪ್ಪ ಆದೇಶ ನೀಡಿದ್ದರೂ ಅದು ಕಾರ್ಯಗತವಾಗಿಲ್ಲ ಎಂದು ಆರೋಪಿಸಿದರು.

ಸ್ವಪಕ್ಷದ ಮುಖಂಡರೇ ಈಗ ಕೇಂದ್ರದ ಮೇಲೆ ರಾಜ್ಯಕ್ಕೆ ಪರಿಹಾರ ಬಿಡುಗಡೆ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಆದರೆ, ನೆರೆ ಸಂತ್ರಸ್ತರಿಗೆ ಪರಿಹಾರ ಕೇಳಿದವರಿಗೆ ನೋಟಿಸ್‌ ನೀಡಿ ಅವರನ್ನು ದೇಶದ್ರೋಹಿ ಎನ್ನಲಾಗುತ್ತಿದೆ ಎಂದರು.

ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಿರುವ ನಾವು ಹೆಚ್ಚಿನ ಪರಿಹಾರ ನೀಡುವಂತೆ ಪ್ರತಿಭಟನೆ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರಿದ್ದೇವೆ. ಈ ಕುರಿತು ಅಧಿವೇಶನದಲ್ಲಿಯೂ ದನಿ ಎತ್ತಲಾಗುವುದು. ಮುಂಬರುವ ಡಿಸೆಂಬರ್‌ ತಿಂಗಳಿಲ್ಲಾದರೂ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲ ಅಧಿವೇಶನ ನಡೆಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಗೋಕಾಕ ಕ್ಷೇತ್ರದಲ್ಲಿ ನಿರಂತರವಾಗಿ ಪ್ರವಾಸ ಕೈಗೊಳ್ಳಲಾಗಿದೆ. ಕಾಂಗ್ರೆಸ್‌ನಿಂದ ಅಶೋಕ ಪೂಜಾರಿ ಸ್ಪರ್ಧಿಸುವ ಸಂಬಂಧ ಚರ್ಚಿಯಾಗಿದೆ ನಿಜ. ಆದರೆ, ಇನ್ನೂ ಅಭ್ಯರ್ಥಿ ಅಂತಿಮವಾಗಿಲ್ಲ. ಯಾರು ಕೂಡ ಬಂದು ಟಿಕೆಟ್‌ ಕೇಳಿಲ್ಲ. ಸದ್ಯ ಲಖನ್‌ ಜಾರಕಿಹೊಳಿ ಮಾತ್ರ ರೇಸಿನಲ್ಲಿದ್ದಾರೆ. ರಮೇಶ ಜಾರಕಿಹೊಳಿ ತಮ್ಮ ಚುನಾವಣಾ ಸಿದ್ಧತೆ ಮಾಡುತ್ತಿದ್ದಾರೆ. ನಾವು ಕೂಡ ಚುನಾವಣಾ ತಯಾರಿ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

click me!