ಕಾರ್ಯಾಚರಣೆಗಿಳಿದ ಐಎನ್‌ಎಸ್ ವಿಕ್ರಮಾದಿತ್ಯ| ಅಂಕೋಲಾ, ಕುಮಟಾ, ಕಾರವಾರದಲ್ಲಿ ಪರಿಹಾರ ಕಾರ್ಯ| ಹವಾಮಾನ ವೈಪರಿತ್ಯದಿಂದ ನಿನ್ನೆ ಹಾರದ ಹೆಲಿಕಾಪ್ಟರ್
ಕಾರವಾರ[ಆ.10]: ದೇಶದ ಅತಿದೊಡ್ಡ ವಿಮಾನ ವಾಹಕ ಯುದ್ಧ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ ಈಗ ಕರಾವಳಿ ಭಾಗದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಗೆ ಇಳಿದಿದೆ.
ಅಂಕೋಲಾ, ಕುಮಟಾ ಹಾಗೂ ಕಾರವಾರದ ನೆರೆ ಸಂತ್ರಸ್ತರಿಗೆ ಆಹಾರ, ಔಷಧಿ ಹಾಗೂ ಮತ್ತಿತರ ಸಾಮಗ್ರಿಗಳನ್ನು ಕಳುಹಿಸುವುದು ಸವಾಲಾಗಿ ಪರಿಣಮಿಸಿತ್ತು. ಏಕೆಂದರೆ ನೀರು ನುಗ್ಗಿ ರಸ್ತೆ ಮಾರ್ಗಗಳು ಬಂದ್ ಆಗಿದ್ದವು. ಭಾರಿ ಪ್ರವಾಹದಿಂದ ಬೋಟ್‌ಗಳಲ್ಲಿ ಸಂಚರಿಸುವುದೂ ಅಸಾಧ್ಯದ ಮಾತಾಗಿತ್ತು. ಇದೀಗ ಜಿಲ್ಲಾ ಆಡಳಿತದ ಮನವಿಯ ಮೇರೆಗೆ ಐಎನ್‌ಎಸ್ ಕದಂಬ ನೌಕಾನೆಲೆ ಪರಿಹಾರ ಕಾರ್ಯಾಚರಣೆಗೆ ಇಳಿದಿದೆ.
ಅಷ್ಟೇ ಅಲ್ಲ ವಿಮಾನವಾಹಕ ಯುದ್ಧ ನೌಕೆ ವಿಕ್ರಮಾದಿತ್ಯ ಮೂಲಕ ಕಾರ್ಯಾಚರಣೆ ನಡೆಸಲು ಮುಂದಾಗಿದೆ. ನೆರೆ ಸಂತ್ರಸ್ತರಿಗೆ ಕಳುಹಿಸಬೇಕಾದ ಸಾಮಗ್ರಿಗಳನ್ನು ವಿಕ್ರಮಾದಿತ್ಯಕ್ಕೆ ಜಿಲ್ಲಾ ಆಡಳಿತ ಸರಬರಾಜು ಮಾಡಿತು. ವಿಕ್ರಮಾದಿತ್ಯದ ಹೆಲಿಕಾಪ್ಟರ್ ಆ ಸಾಮಗ್ರಿಗಳನ್ನು ಹೊತ್ತು ನೆರೆ ಸಂತ್ರಸ್ತರಿಗೆ ತಲುಪಿಸುವುದು ಯೋಜನೆಯಾಗಿತ್ತು.
ಆದರೆ ಶುಕ್ರವಾರ ಬೆಳಗ್ಗೆಯಿಂದ ಹವಾಮಾನ ವೈಪರಿತ್ಯ, ಮಳೆ, ಮೋಡ ಮುಸುಕಿದ ವಾತಾವರಣದಿಂದ ಹೆಲಿಕಾಪ್ಟರ್ ಹಾರಾಟ ಅಸಾಧ್ಯವಾಯಿತು. ವಿಕ್ರಮಾದಿತ್ಯಕ್ಕೆ ಪೂರೈಕೆ ಮಾಡಿದ್ದ ಸಾಮಗ್ರಿಗಳನ್ನು ಕೆಳಕ್ಕಿಳಿಸಿ ರಸ್ತೆ ಮಾರ್ಗದಲ್ಲಿ ಸಂಚರಿಸಲು ಸಾಧ್ಯವಿರುವ ಕಾರವಾರದ ಪರಿಹಾರ ಕೇಂದ್ರಗಳಿಗೆ ಕಳುಹಿಸಲಾಯಿತು. ಹವಾಮಾನ ಪೂರಕವಾದಲ್ಲಿ ಕಾರ್ಯಾಚರಣೆ ಮುಂದುವರಿಯಲಿದೆ.