ಮಕ್ಕಳ ಕಳ್ಳರು ಎಂದು 5 ಜನರನ್ನು ಬಡಿದು ಕೊಂದರು

First Published Jul 2, 2018, 8:41 AM IST
Highlights

ಕರ್ನಾಟಕ ಸೇರಿದಂತೆ ಅನೇಕ ಕಡೆ ಇತ್ತೀಚೆಗೆ ಮಕ್ಕಳ ಕಳ್ಳರು ಎಂದು ನಂಬಿ ಥಳಿಸಿದ ಘಟನೆಗಳು ನಡೆದಿದ್ದವು. ಈಗ ಈ ಘಟನೆ ಮಹಾರಾಷ್ಟ್ರಕ್ಕೂ ವಿಸ್ತರಣೆಯಾಗಿದ್ದು, ಧುಳೆ ಜಿಲ್ಲೆಯ ಗ್ರಾಮವೊಂದರಲ್ಲಿ 5 ಮಂದಿಯನ್ನು ಬಡಿದು ಸಾಯಿಸಲಾಗಿದೆ.

ಮುಂಬೈ: ಕರ್ನಾಟಕ ಸೇರಿದಂತೆ ಅನೇಕ ಕಡೆ ಇತ್ತೀಚೆಗೆ ಮಕ್ಕಳ ಕಳ್ಳರು ಎಂದು ನಂಬಿ ಥಳಿಸಿದ ಘಟನೆಗಳು ನಡೆದಿದ್ದವು. ಈಗ ಈ ಘಟನೆ ಮಹಾರಾಷ್ಟ್ರಕ್ಕೂ ವಿಸ್ತರಣೆಯಾಗಿದ್ದು, ಧುಳೆ ಜಿಲ್ಲೆಯ ಗ್ರಾಮವೊಂದರಲ್ಲಿ 5 ಮಂದಿಯನ್ನು ಬಡಿದು ಸಾಯಿಸಲಾಗಿದೆ.

ಭಾನುವಾರ ಸಕ್ರಿ ತಾಲೂಕಿನ ರೈನ್‌ಪಾಡಾ ಎಂಬ ಆದಿವಾಸಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರು ಕರ್ನಾಟಕಕ್ಕೆ ಹೊಂದಿಕೊಂಡ ಸೊಲ್ಲಾಪುರ ಜಿಲ್ಲೆ ಮಂಗಳವೇಡೆಯವರಾಗಿದ್ದು, ಓರ್ವನ ಹೆಸರು ದಾದಾರಾವ್‌ ಭೋಸ್ಲೆ ಎಂದು ತಿಳಿದುಬಂದಿದೆ. ಇನ್ನುಳಿದವರ ಹೆಸರು ಇನ್ನಷ್ಟೇ ಗೊತ್ತಾಗಬೇಕಿದೆ. ಘಟನೆಗೆ ಸಂಬಂಧಿಸಿದಂತೆ 15 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನ ಮೂಲಕ ಈ ಐವರೂ ಜನರು ರೈನ್‌ಪಾಡಾಗೆ ಬಂದಿಳಿದರು. ಇವರಲ್ಲಿ ಒಬ್ಬರು, ಗ್ರಾಮದ ಪುಟ್ಟಬಾಲಕಿಯೊಬ್ಬಳನ್ನು ಮಾತನಾಡಿಸಲು ಯತ್ನಿಸಿದ. ಈ ವೇಳೆ ಭಾನುವಾರದ ಸಂತೆಗೆ ಸೇರಿದ್ದ ಜನರು, ಇವರನ್ನು ಗಮನಿಸಿ ಮುಗಿಬಿದ್ದರು. ಐವರನ್ನೂ ಗ್ರಾಮ ಪಂಚಾಯ್ತಿ ಕಚೇರಿಯತ್ತ ಎಳೆದೊಯ್ದು ಕಲ್ಲು, ಬಡಿಗೆಗಳಿಂದ ಬಡಿದು ಹತ್ಯೆ ಮಾಡಿದರು ಎಂದು ಪೊಲೀಸರು ಹೇಳಿದ್ದಾರೆ. ಬಳಿಕ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರ ಮೇಲೂ ಗುಂಪು ದಾಳಿ ಮಾಡಿದೆ.

ಕಳೆದ ಕೆಲವು ದಿವಸಗಳಿಂದ ಈ ಭಾಗದಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿಗಳು ಹರಡಿದ್ದವು. ವಾಟ್ಸಪ್‌, ಫೇಸ್‌ ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಇವು ವೈರಲ್‌ ಆಗಿದ್ದವು. ಇದರ ನಡುವೆಯೇ ಈ ಘಟನೆ ನಡೆದಿದೆ. ಮೃತದೇಹಗಳನ್ನು ಪಿಂಪಳ್ನೇರ್‌ ಆಸ್ಪತ್ರೆಯಲ್ಲಿಡಲಾಗಿದೆ ಎಂದು ಅವರು ಹೇಳಿದ್ದಾರೆ.

ಚೆನ್ನೈನಲ್ಲೂ ಥಳಿತ (ತಮಿಳ್ನಾಡು ವರದಿ):

ಈ ನಡುವೆ, ಚೆನ್ನೈನ ತೇಯ್ನಂಪೇಟೆ ಎಂಬಲ್ಲಿ ತೆರಳುತ್ತಿದ್ದ ಇಬ್ಬರು ವಲಸಿಗ ಕಾರ್ಮಿಕರನ್ನು ಮಕ್ಕಳ ಕಳ್ಳರು ಎಂಬ ಸಂದೇಹದಿಂದ ಉದ್ರಿಕ್ತ ಜನರು ಥಳಿಸಿದ ಘಟನೆ ಭಾನುವಾರ ನಡೆದಿದೆ. ಆದರೆ ಕೆಲವರು ಮಧ್ಯಪ್ರವೇಶಿಸಿ ಇವರನ್ನು ರಕ್ಷಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

click me!