ಬಾಹ್ಯಾಕಾಶದಲ್ಲಿ ಮೊದಲ ಅಪರಾಧ!

By Web DeskFirst Published Aug 26, 2019, 7:51 AM IST
Highlights

ಬಾಹ್ಯಾಕಾಶದಲ್ಲಿ ಮೊದಲ ಅಪರಾಧ!| ಸಲಿಂಗ ಸಂಗಾತಿಯ ಇ-ಮೇಲ್‌, ಬ್ಯಾಂಕ್‌ ಖಾತೆ ಕದ್ದು ನೋಡಿದ ಗಗನಯಾತ್ರಿ| ಬಾಹ್ಯಾಕಾಶ ಕೇಂದ್ರದಿಂದಲೇ ಕುಕೃತ್ಯ: ದೂರು| ಆರೋಪ ನಿರಾಕರಿಸಿದ ವಿಜ್ಞಾನಿ

ವಾಷಿಂಗ್ಟನ್‌[ಆ.26]: ವೈಜ್ಞಾನಿಕ ಸಂಶೋಧನೆಗಳು ನಡೆಯಬೇಕಿರುವ ಬಾಹ್ಯಾಕಾಶದಲ್ಲಿ ಇದೇ ಮೊದಲ ಬಾರಿಗೆ ಅಪರಾಧವೊಂದು ನಡೆದಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ)ಯ ಗಗನಯಾತ್ರಿಯೊಬ್ಬರು ಭೂಮಿಯ ಮೇಲಿದ್ದ ತಮ್ಮ ಮಾಜಿ ಸಲಿಂಗ ಸಂಗಾತಿಯ ಇ-ಮೇಲ್‌ ಹಾಗೂ ಬ್ಯಾಂಕ್‌ ಖಾತೆಗಳನ್ನು ಕದ್ದು ನೋಡಿದ ಆರೋಪಕ್ಕೆ ಗುರಿಯಾಗಿದ್ದಾರೆ.

ಮಹಿಳೆಯರಾದ ಗಗನಯಾತ್ರಿ ಆ್ಯನ್ನೆ ಮೆಕ್‌ಕ್ಲೇನ್‌ ಹಾಗೂ ಸಮ್ಮರ್‌ ವರ್ಡನ್‌ ವಿವಾಹವಾಗಿದ್ದರು. ಮನಸ್ತಾಪದ ಹಿನ್ನೆಲೆಯಲ್ಲಿ ಈಗ ಬೇರೆ ಬೇರೆ ವಾಸ ಮಾಡುತ್ತಿದ್ದಾರೆ. 2018ರ ಡಿಸೆಂಬರ್‌ನಲ್ಲಿ ಗಗನಯಾತ್ರೆ ಕೈಗೊಂಡಿದ್ದ ಮೆಕ್‌ಕ್ಲೇನ್‌, ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ತಂಗಿದ್ದಾಗ ನಾಸಾದ ಕಂಪ್ಯೂಟರ್‌ ಬಳಸಿ ತಮ್ಮ ಇ-ಮೇಲ್‌ ಹಾಗೂ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಿದ್ದಾರೆ ಎಂದು ಸಮ್ಮರ್‌ ವರ್ಡನ್‌ ಅವರು ಅಮೆರಿಕದ ಕೇಂದ್ರೀಯ ವ್ಯಾಪಾರ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಅವರ ಕುಟುಂಬ ನಾಸಾದ ಕಚೇರಿಗೂ ದೂರು ಸಲ್ಲಿಕೆ ಮಾಡಿದೆ. ಇದು ವಿಶ್ವದ ಮೊದಲ ಬಾಹ್ಯಾಕಾಶ ಅಪರಾಧವಾಗಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ.

ಆರೋಪಗಳಲ್ಲಿ ಸತ್ಯಾಂಶ ಇಲ್ಲ ಎಂದು ಕಳೆದ ಜೂನ್‌ನಲ್ಲಿ ಭೂಮಿಗೆ ಮರಳಿರುವ ಮೆಕ್‌ಕ್ಲೇನ್‌ ಟ್ವೀಟ್‌ ಮಾಡಿದ್ದಾರೆ. ಮತ್ತೊಂದೆಡೆ, ಇಬ್ಬರಿಗೂ ಸೇರಿದ ಹಣಕಾಸು ವ್ಯವಹಾರಗಳ ಮೇಲೆ ನಿಗಾ ಇಡಲು ಬಾಹ್ಯಾಕಾಶದಿಂದ ಬ್ಯಾಂಕ್‌ ದಾಖಲೆಯನ್ನು ತಮ್ಮ ಕಕ್ಷಿದಾರರು ಪರಿಶೀಲಿಸಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ ಎಂದು ಮೆಕ್‌ಕ್ಲೇನ್‌ ಅವರ ವಕೀಲರು ಸಮರ್ಥಿಸಿಕೊಂಡಿದ್ದಾರೆ.

click me!