ಸಚಿವರಿಗೆ ವಹಿಸುವ ಖಾತೆ ಪಟ್ಟಿ ರಾಜ್ಯಪಾಲರಿಗೆ

By Web DeskFirst Published Aug 26, 2019, 7:31 AM IST
Highlights

ರಾಜ್ಯ ಸಚಿವ ಸಂಫುಟ ವಿಸ್ತರಣೆ ವೇಳೆ 17 ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದ್ದು, ಎಲ್ಲರಿಗೂ ವಹಿಸುವ ಖಾತೆಗಳ ಪಟ್ಟಿಯನ್ನು ಇಂದು ಸಿಎಂ ರಾಜ್ಯಪಾಲರಿಗೆ ರವಾನೆ ಮಾಡಲಿದ್ದಾರೆ. 

ಬೆಂಗಳೂರು [ಆ.26] : ಸೋಮವಾರ ಬೆಳಗ್ಗೆ 9 ಗಂಟೆಯೊಳಗೆ ಸಚಿವರ ಖಾತೆಗಳ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಿಕೊಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ನನ್ನ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿ ಇರುತ್ತಾರೆ. ಆದರೆ ಯಾರು, ಏನು, ಎಷ್ಟು ಅನ್ನೋದು ನಾಳೆ (ಸೋಮವಾರ)ತೀರ್ಮಾನವಾಗಲಿದೆ. 

ಡಿಸಿಎಂ ಹುದ್ದೆ ಒಂದೋ, ಎರಡೋ ಅನ್ನೋದರ ಚರ್ಚೆ ನಡೆಯುತ್ತಲಿದ್ದು, ಸೋಮವಾರ ತೀರ್ಮಾನಕ್ಕೆ ಬರುತ್ತೇನೆ ಎಂದೂ ಅವರು ಹೇಳಿದ್ದಾರೆ. ಭಾನುವಾರ ಪಕ್ಷದ ಹಿರಿಯ ನಾಯಕ ಅರುಣ್ ಜೇಟ್ಲಿಯವರ ಅಂತಿಮ ದರ್ಶನ ಪಡೆದ ಬಳಿಕ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಬೆಳಗ್ಗೆ 9 ಗಂಟೆಯೊಳಗೆ ಸಚಿವರ ಖಾತೆಗಳ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಿಕೊಡುತ್ತೇನೆ. ಖಾತೆ ಹಂಚಿಕೆಯ ಪಟ್ಟಿ ಸಿದ್ಧ ಮಾಡಿಟ್ಟುಕೊಂಡಿದ್ದು, ಪಕ್ಷದ ಹಿರಿಯ ನಾಯಕರಾಗಿದ್ದ ಜೇಟ್ಲಿ ಅವರ ಮರಣದ ಕಾರಣದಿಂದ ಇನ್ನೂ ಹಂಚಿಕೆ ಮಾಡದೆ ಮುಂದೂಡಿದ್ದೆ ಎಂದು ತಿಳಿಸಿದರು.

ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಸಾಧ್ಯತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ. ಪ್ರಧಾನಿ ಮತ್ತು ಅಧ್ಯಕ್ಷರು ಕುಳಿತು ಯೋಚನೆ ಮಾಡಬೇಕು ಎಂದರೆ ಅದಕ್ಕೆ ಬಹಳಷ್ಟು ಕಾರಣಗಳಿರುತ್ತವೆ. ಹಾಗಾಗಿ ನಮ್ಮ ಪಕ್ಷದ ನಾಯಕರು, ಅಧ್ಯಕ್ಷರು, ಪ್ರಧಾನಿಗಳು ಕೊಡುವ ಸಲಹೆಯನ್ನು ಪಾಲಿಸುವುದು ನನ್ನ ಕರ್ತವ್ಯ ಎಂದು ಹೇಳಿದರು. 

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಿಜೆಪಿಯ ಹಿರಿಯ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದಾಗ, ನಾವು ನಮ್ಮ ಇತಿಮಿತಿಯಲ್ಲಿ ಎಲ್ಲವನ್ನೂ ಮಾಡಬೇಕಾಗುತ್ತದೆ. ಈಗಾಗಲೇ ಯಡಿಯೂರಪ್ಪ ಪ್ಲಸ್ 17 ಮಂದಿ ಸಚಿವ ಸಂಪುಟದಲ್ಲಿದ್ದೇವೆ. ಈ 17  ಜನರ ಬಗ್ಗೆ ಯಾರಿಗೂ ಆಕ್ಷೇಪ, ಅಸಮಧಾನವಿಲ್ಲ ಎಂದು ಯಡಿಯೂರಪ್ಪ ಸಮರ್ಥಿಸಿಕೊಂಡರು.  ಲಕ್ಷ್ಮಣ ಸವದಿ ಅವರು ಎಂಎಲ್‌ಎ ಅಥವಾ ಎಂಎಲ್‌ಸಿ ಅಲ್ಲ. ಆದರೂ ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ. ಬೆಳಗಾವಿ ಭಾಗದಲ್ಲಿ ಬಿಜೆಪಿಯ 8 - 9 ಶಾಸಕರಿರುವುದರಿಂದ ಅಸಮಾಧಾನ ಸ್ವಾಭಾವಿಕ. ಆದರೆ ನಮ್ಮ ರಾಷ್ಟ್ರೀಯ ನಾಯಕರು ಒಂದು ತೀರ್ಮಾನ ಕೈಗೊಂಡಿದ್ದಾರೆ. ಆ ಭಾಗಕ್ಕೆ ಇನ್ನೊಂದು ಅವಕಾಶ ಕೊಡಬೇಕು. ಕೊಡಲು ಪ್ರಯತ್ನಿಸುತ್ತೇನೆ ಎಂದು ಇದೇ ವೇಳೆ ಹೇಳಿದರು.

ಸಂಪುಟ ಸೇರಲು ಸಾಧ್ಯವಾಗದವರಿಗೆ ನಿಗಮ ಮಂಡಳಿ, ರಾಜಕೀಯ ಕಾರ್ಯದರ್ಶಿ ಹೀಗೆ ಬೇಕಾದಷ್ಟು ಅವಕಾಶಗಳಿವೆ. ಇವೆಲ್ಲವನ್ನೂ ಹಂತ ಹಂತವಾಗಿ ಮಾಡುತ್ತೇವೆ. ಅನರ್ಹ ಶಾಸಕರ ಬಗ್ಗೆ ಇಲ್ಲಿ ಚರ್ಚೆ ಮಾಡಲು ಇಷ್ಟಪಡುವುದಿಲ್ಲ. ಈಗ ನಮ್ಮಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್‌ನಲ್ಲಿ ಸಮಸ್ಯೆಯಿದೆ ಎಂದರು.

click me!