
ಬೆಂಗಳೂರು(ಡಿ.07): ಬೆಂಗಳೂರಿನ ಕಪ್ಪುಕುಳಗಳಿಗೆ ಶಾಕ್ ನೀಡಿದ್ದ ಬೆನ್ನಲ್ಲೇ, ಪ್ರಕರಣದ ಸಂಬಂಧ ಸಿಬಿಐ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಪ್ರಮುಖವಾಗಿ ಬ್ಯಾಂಕ್ ಅಧಿಕಾರಿಗಳ ಕೈವಾಡದ ಕುರಿತಂತೆ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಯೋಜನಾಧಿಕಾರಿ ಜಯಚಂದ್ರ ಹೆಸರು ಎಫ್ಐಆರ್ನಲ್ಲಿ ನಮೂದಾಗಿದ್ದು ಈತ ಮೂರನೇ ಆರೋಪಿ. ಆದರೆ, ಸಿಎಂ ಸಿದ್ದರಾಮಯ್ಯ ಆಪ್ತ ಚಿಕ್ಕರಾಯಪ್ಪ ಬೀಸುವ ದೊಣ್ಣೆಯಿಂದ ಪಾರಾಗಿದ್ದಾರೆ..
ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಮಹದೇವಪ್ಪ ಆಪ್ತ ಅಧಿಕಾರಿಗಳು ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ ತನಿಖೆ ಮತ್ತಷ್ಟು ಚುರುಕಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳ, ಆರು ಮಂದಿಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ. ಕೇಂದ್ರಿಯ ತನಿಖಾ ತಂಡ ಸಲ್ಲಿಸಿರೋ ಎಫ್ಐಆರ್ನಲ್ಲಿ ಅಧಿಕಾರಿಗಳು, ಗುತ್ತಿಗೆದಾರರು, ಬ್ಯಾಂಕ್ ಮ್ಯಾನೇಜರ್, ಮಧ್ಯವರ್ತಿಗಳು ಸೇರಿದಂತೆ ಎಟಿಎಂಗಳಿಗೆ ಹಣ ತುಂಬುವ ಖಾಸಗಿ ಏಜೆನ್ಸಿ ವ್ಯವಸ್ಥಾಪಕ ಹೆಸರು ಉಲ್ಲೇಖವಾಗಿದೆ. ಇವರೆಲ್ಲರೂ ಬ್ಲ್ಯಾಕ್ & ವೈಟ್ ದಂಧೆಯಲ್ಲಿ ಭಾಗಿಯಾಗಿರುವುದು ಬಟಾಬಯಲಾಗಿದೆ.
ಬ್ಲಾಕ್ & ವೈಟ್ ದಂಧೆಯಲ್ಲಿ ಬ್ಯಾಂಕ್ ಅಧಿಕಾರಿಗಳು!
ಸಿಬಿಐ ಅಧಿಕಾರಿಗಳು ದಾಖಲಿಸಿರುವ ಎಫ್ಐಆರ್ ನಲ್ಲಿ ಎರಡು ಖಾಸಗಿ ಬ್ಯಾಂಕ್ ಮ್ಯಾನೇಜರ್ ಹಾಗೂ ಗುತ್ತಿಗೆದಾರರೇ ಪ್ರಮುಖ ಆರೋಪಿಗಳಾಗಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ನಿಯಮದಂತೆ ಎಕ್ಸ್ ಚೇಂಜ್ ನಡೆದಿದೆ ಅಂತ ದೋಷಾರೋಪ ಪಟ್ಟಿಯಲ್ಲಿ ಸ್ಪಷ್ಟವಾಗಿ ನಮೂದಾಗಿದೆ.
- ಸೂರ್ಯನಾರಾಯಣ ಬ್ಯಾರಿ, ಚೀಫ್ ಜನರಲ್ ಮ್ಯಾನೇಜರ್, ಕರ್ಣಾಟಕ ಬ್ಯಾಂಕ್ , ಇಂದಿರಾನಗರ ಶಾಖೆ
ಉಮಾಶಂಕರ್ ರೇಣುಕಾ, ವ್ಯವಸ್ಥಾಪಕ- ಧನಲಕ್ಷ್ಮಿ ಬ್ಯಾಂಕ್ನ, ಬೆಂಗಳೂರಿನ ಜೆ.ಸಿ.ನಗರ ಶಾಖೆ
ಇಂಜಿನಿಯರ್ ಎಸ್.ಸಿ.ಜಯಚಂದ್ರ, ರಾಷ್ಟ್ರೀಯ ಹೆದ್ದಾರಿ ಮುಖ್ಯ ಯೋಜನಾಧಿಕಾರಿ
-ಗುತ್ತಿಗೆದಾರ ಇಬ್ರಾಹಿಂ ಷರೀಫ್, ನಜೀರ್ ಅಹ್ಮದ್
- ಚಂದ್ರಕಾಂತ ರಾಮಲಿಂಗಂ, ರವಿ ಗೋಯೆಲ್, ಸೆಕ್ಯುರ್ ವ್ಯಾಲ್ಯು ಇಂಡಿಯಾ ಲಿಮಿಟೆಡ್ ಎಂಡಿ
ಇನ್ನು ಸಿಬಿಐ ದಾಖಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಸಿಎಂ ಪರಮಾಪ್ತ ಅಂತ ಹೇಳುವ ಚಿಕ್ಕರಾಯಪ್ಪ ಹೆಸರೇ ಇಲ್ಲ. ಐಟಿ ಅಧಿಕಾರಿಗಳು ದಾಳಿ ನಡೆಸಿದ ಸಮಯದಲ್ಲಿ ಕಾವೇರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿ.ಎನ್. ಚಿಕ್ಕರಾಯಪ್ಪರ ಮನೆಯಲ್ಲೂ ಶೋಧ ನಡೆದಿತ್ತು. ಈ ವೇಳೆ ಯಾವುದೇ ಹೊಸ ನೋಟುಗಳು ಸಿಗದ ಕಾರಣ ಕೈಬಿಡಲಾಗಿದೆ ಅಂತ ಹೇಳಲಾಗ್ತಿದೆ.
ಗುತ್ತಿಗೆದಾರ ಇಬ್ರಾಹಿಂ ಷರೀಫ್ ನೇತೃತ್ವದಲ್ಲಿ ನೋಟ್ ಎಕ್ಸ್’ಚೇಂಜ್ ನಡೆದಿದೆ ಅಂತ ಉಲ್ಲೇಖಿಸಲಾಗಿದೆ. ಸಿಬಿಐ ದಾಖಲಿಸಿರುವ ಎಫ್ಐಆರ್ ನಲ್ಲಿ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 120-ಬಿ, 420, 406, 409, 468, 471, 477ಎ ಅಡಿಯಲ್ಲಿ ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 13(2), 13(1)ರ ಅಡಿಯಲ್ಲಿ ಕೇಸ್ ದಾಖಲಾಗಿದೆ.
ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ವಶಕ್ಕೆ ಪಡೆದ ಹಣ, ಧನಲಕ್ಷ್ಮಿ ಬ್ಯಾಂಕ್ ಗೆ ಸೇರಿದ ಎಟಿಎಂಗಳಿಗೆ ತುಂಬಬೇಕಿತ್ತು ಅನ್ನೋ ಮಾಹಿತಿ ದೊರೆತಿದೆ. ಆದರೆ, ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಲಿಮಿಟೆಡ್, ಎಟಿಎಂಗೆ ಹಣ ತುಂಬದೆ ಕಪ್ಪುಕುಳಗಳು ಹಾಗೂ ಬ್ಯಾಂಕ್ ಸಿಬ್ಬಂದಿ ಜೊತೆ ಡೀಲ್ ಕುದುರಿಸಿತ್ತು.
ಸೆಕ್ಯುರ್ ವ್ಯಾಲ್ಯು ಇಂಡಿಯಾ ಲಿಮಿಟೆಡ್ ಜೊತೆ ವಿವಿಧ ಮಧ್ಯವರ್ತಿಗಳು, ಏಜೆಂಟ್ಗಳು ಕ್ರಿಮಿನಲ್ ಸಂಚು ರೂಪಿಸಿದ್ದಾರೆ. ಇದಕ್ಕಾಗಿ ನಕಲಿ ದಾಖಲೆ, ಗುರುತಿನ ಚೀಟಿ ಸೃಷ್ಟಿಸಿ ಕೋಟ್ಯಂತರ ಹಣ ಬದಲಾಯಿಸಲು ನೆರವಾಗಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳು ಬಾಣಸವಾಡಿ, ಡಾಲರ್ಸ್ ಕಾಲೋನಿ, ಚಂದ್ರಲೇಔಟ್ ಸೇರಿದಂತೆ 10 ಕಡೆ ತಪಾಸಣೆ ನಡೆಸಿದ್ದರು. ಈ ವೇಳೆ ಅಪಾರ 5.7 ಕೋಟಿ ನಗದು, 9 ಕೆಜಿ ಚಿನ್ನಾಭರಣ ಪತ್ತೆಯಾಗಿದ್ದರು. ಅಲ್ದೆ, 152 ಕೋಟಿಗೂ ಹೆಚ್ಚು ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂಬುವುದು ಕೂಡ ಸ್ಪಷ್ಟವಾಗಿತ್ತು.. ಇದೀಗ ವಂಚಕರ ವಿರುದ್ಧ ಎಫ್ಐಆರ್ ದಾಖಲಿಸಿ ಕಠಿಣ ಕ್ರಮಕ್ಕೆ ಸಿಬಿಐ ಮುಂದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.