ಗುಂಡಿ ಮುಚ್ರೋ..! ಗೂಡ್'ಶೆಡ್ ರಸ್ತೆಯೋ, ಗುಂಡಿ ರಸ್ತೆಯೋ ಆ ದೇವರೇ ಬಲ್ಲ..!

By Suvarna Web DeskFirst Published Sep 4, 2017, 4:20 PM IST
Highlights

ಸುವರ್ಣನ್ಯೂಸ್​ ಗುಂಡಿ ಮುಚ್ರೋ ಅನ್ನೋ ವಿಶೇಷ ಅಭಿಯಾನವನ್ನು ಶುರು ಮಾಡಿದೆ. ಜನರ ಪ್ರಾಣವನ್ನೇ ನುಂಗಿ ಹಾಕ್ತಿರೋ ರಸ್ತೆಗಳ ಸಾಕ್ಷಾತ್ ವರದಿ ಮಾಡಿ ಜನರ ಪ್ರಾಣ ಉಳಿಸಬೇಕು ಅನ್ನೋದು ನಮ್ಮ ಕಾಳಜಿ.. ಹೀಗಾಗಿ ನಾವು ಕೆಲವೊಂದಿಷ್ಟು ನರಕದಂಥ ರಸ್ತೆಗಳನ್ನು ತೋರಿಸ್ತೀವಿ.. ಆ ರಸ್ತೆಗಳನ್ನು ಸರಿ ಮಾಡೋ ಪ್ರಯತ್ನ ಮಾಡ್ತೀವಿ.. ಬನ್ನಿ ಹಾಗಿದ್ರೆ ಈಗ ನಾವು ಹೇಳ್ತಿರೋ ಗುಂಡಿಗಳ ರಸ್ತೆ ಯಾವುದು ಅಂತಾ ನೋಡೋಣ..

ಬೆಂಗಳೂರು(ಸೆ. 04): ಸಾಲು ಸಾಲಾಗಿ ಗುಂಡಿ ಬಿದ್ದಿರುವ ರಸ್ತೆ.. ಜೀವ ಭಯದಿಂದಲೇ ವಾಹನ ಚಾಲನೆ ಮಾಡುವ ಚಾಲಕರು. ರಸ್ತೆ ಹಾಳಾಗಿದ್ದರೂ ಕ್ಯಾರೇ ಎನ್ನದೇ ಇದೇ ರಸ್ತೆಯಲ್ಲಿ ತಮ್ಮ ಪಾಡಿಗೆ ತಾವೂ ಹೋಗುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು.... ಈ ರಸ್ತೆ ಯಾವುದೋ ಹಳ್ಳಿ ರಸ್ತೆಯಲ್ಲ. ಬೆಂಗಳೂರಿನ ಮಧ್ಯಭಾಗದ ಮೆಜೆಸ್ಟಿಕ್​ ಬಳಿ ಇರೋ ಗೂಡ್'​​ಶೆಡ್​​ ರಸ್ತೆ.

ಈ ಗೂಡ್ ಶೆಡ್ ರಸ್ತೆಯ ತುಂಬ ಸಾಲು-ಸಾಲು ಗುಂಡಿಗಳು ಬಿದ್ದಿವೆ. ಮಳೆ ಬಂದರೆ ಸಾಕು ಈ ರಸ್ತೆಯಲ್ಲಿರೋ ಗುಂಡಿಗಳು ಕೆರೆಗಳಂತೆ ಆಗಿಬಿಡುತ್ತವೆ. ಈ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡಬೇಕು. ಸ್ವಲ್ಪ ಯಾಮಾರಿದರೂ ಯಮನ ಪಾದ ಸೇರೋದು ಗ್ಯಾರಂಟಿ. ರಸ್ತೆ ಇಷ್ಟು ಹಾಳಾಗಿ ಹೋಗಿದ್ದರೂ ಈ ವಾರ್ಡ್'​​ನ ಕಾರ್ಪೊರೇಟರ್ ಪ್ರಮೋದ್ ಆಗಲಿ, ಈ ವಿಧಾನಸಭಾ ಕ್ಷೇತ್ರದ ಶಾಸಕ ಗುಂಡೂರಾವ್ ಆಗಲಿ, ರಸ್ತೆಗೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಇದ್ದಾರೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು, ಮೈಸೂರು ರಸ್ತೆಯಿಂದ ಮೆಜೆಸ್ಟಿಕ್'ಗೆ ಸಂಪರ್ಕ ಕಲ್ಪಿಸುವ ಈ ಗೂಡ್ ಶೆಡ್ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ರಸ್ತೆಗಳ ಗುಂಡಿ ಮುಚ್ಚಿ ಅಂತ ಹಲವು ಸಲ ವಾಹನ ಸವಾರರು ದೂರು ಅಧಿಕಾರಿಗಳಿಗೆ ನೀಡಿದ್ರು, ಅಧಿಕಾರಿಗಳು ಮಾತ್ರ ತಲೆಯನ್ನೇ ಕೆಡಿಸಿಕೊಂಡಿಲ್ಲವಂತೆ.

ಜನನಿಬಿಡ ಪ್ರದೇಶವಾದ ಮೆಜೆಸ್ಟಿಕ್ ಸಮೀಪವೇ ಇಂಥ ಕಿತ್ತೋಗಿರೋ ರಸ್ತೆ ಇದ್ರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಣ್ಮುಚ್ಚಿ ಕೂತಿರೋದೇ ಒಂದು ಅಚ್ಚರಿ. ಏನಾದ್ರೂ ಅನಾಹುತ ಆಗೋಕೂ ಮುಂಚೆ ಈ ರಸ್ತೆಯ ಅವಸ್ತೆಯನ್ನು ಸರಿಪಡಿಸಬೇಕು. ಈ ಆಶಯದಲ್ಲಿ ಸುವರ್ಣನ್ಯೂಸ್ 'ಗುಂಡಿ ಮುಚ್ರೋ' ಎಂಬ ಅಭಿಯಾನ ಆರಂಭಿಸಿದೆ. ಇಂಥ ಗುಂಡಿಗಳನ್ನ ಮುಚ್ಚಿಸೋವರೆಗೂ ನಮ್ಮ ಪ್ರಯತ್ನ ನಿಲ್ಲೋದಿಲ್ಲ.

- ಮಮತಾ ಮರ್ಧಾಳ, ಸುವರ್ಣ ನ್ಯೂಸ್, ಬೆಂಗಳೂರು

click me!