
ನವದೆಹಲಿ(ಮಾ. 31): ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್'ಗೆ ಮತ್ತೊಂದು ಹಗರಣ ಮೆತ್ತಿಕೊಳ್ಳುತ್ತಿದೆ. ಫೀಡ್'ಬ್ಯಾಕ್ ಯೂನಿಟ್ ಎಂಬ ಘಟಕ ಸ್ಥಾಪಿಸಿ ಆ ಮೂಲಕ ನಕಲಿ ಹೆಸರಿಗೆ ಹಣ ಜಮಾವಣೆ ಮಾಡಿರುವ ಆರೋಪ ದಿಲ್ಲಿ ಸರಕಾರದ ಮೇಲೆ ಬಂದಿದೆ. ಕೇಂದ್ರ ತನಿಖಾ ಸಂಸ್ಥೆ ಸಿಬಿಐ ಈಗಾಗಲೇ ಈ ವಿಚಾರದಲ್ಲಿ ಕಣ್ಣಿಟ್ಟು ವಿಚಾರಣೆ ನಡೆಸುತ್ತಿದೆ.
ಏನಿದು ಫೀಡ್'ಬ್ಯಾಕ್ ಯೂನಿಟ್?
ದಿಲ್ಲಿ ಸರಕಾರದ ವಿಜಿಲೆನ್ಸ್ ಇಲಾಖೆಯ ಅಡಿಯಲ್ಲಿ "ಫೀಡ್'ಬ್ಯಾಕ್ ಯೂನಿಟ್" ಅನ್ನು ರಚಿಸಲಾಗಿದೆ. ಐಬಿ, ರಾ ಮೊದಲಾದ ಗುಪ್ತಚರ ಸಂಸ್ಥೆಗಳ ನಿವೃತ್ತ ಅಧಿಕಾರಿಗಳನ್ನು ಈ ಘಟಕಕ್ಕೆ ಸೇರಿಸಿಕೊಳ್ಳಲಾಗಿದೆ. ಸರಕಾರಿ ಅಧಿಕಾರಿಗಳ ಮೇಲೆ ಕಣ್ಣಿಟ್ಟು ಭ್ರಷ್ಟಾಚಾರಗಳನ್ನು ಬಯಲಿಗೆಳೆಯುವುದು ಈ ಘಟಕದ ಉದ್ದೇಶವಾಗಿದೆ. ಕೇಜ್ರಿವಾಲ್ ಸರಕಾರ ಈ ಘಟಕದ ಕಾರ್ಯನಿರ್ವಹಣೆಗೆ 1 ಕೋಟಿ ರೂಪಾಯಿ ನೀಡಿದೆ.
ಯಾಕೆ ಈಗ ವಿವಾದ?
ಫೀಡ್'ಬ್ಯಾಕ್ ಯೂನಿಟ್'ಗೆ ನೀಡಲಾದ 1 ಕೋಟಿ ರೂಪಾಯಿ ಪೈಕಿ ಅಧಿಕೃತವಾಗಿ ಸ್ಟಿಂಗ್ ಆಪರೇಶನ್'ಗೆಂದು ವ್ಯಯವಾಗಿರುವುದು 50 ಸಾವಿರ ರೂಪಾಯಿ ಮಾತ್ರ. ಅಲಕಾನಂದ ಎಂಬ ಪ್ರದೇಶದಲ್ಲಿನ ಕಲ್ಕಾ ಪಬ್ಲಿಕ್ ಸ್ಕೂಲ್'ನಲ್ಲಿ ಲಂಚ ಪಡೆಯಲಾಗುತ್ತಿರುವುದರ ಬಗ್ಗೆ ಸ್ಟಿಂಗ್ ಆಪರೇಶನ್ ಕಾರ್ಯಕ್ಕಾಗಿ ಈ 50 ಸಾವಿರ ರೂಪಾಯಿ ಖರ್ಚಾಗಿದೆ. ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಪ್ಪರ್ ಡಿವಿಷನ್ ಕ್ಲರ್ಕ್ ಎನ್ನಲಾದ ಕೈಲಾಶ್ ಚಂದ್ ಎಂಬುವರ ಹೆಸರಿಗೆ ಈ ಹಣ ವರ್ಗಾವಣೆಯಾಗಿದೆ. ಆದರೆ, ವಾಸ್ತವವಾಗಿ ಎಸಿಬಿಯಲ್ಲಿ ಕೈಲಾಶ್ ಚಂದ್ ಎಂಬ ವ್ಯಕ್ತಿಯೇ ಇಲ್ಲವೆಂಬುದು ತಿಳಿದುಬಂದಿದೆ.
ಫೀಡ್'ಬ್ಯಾಕ್ ಯೂನಿಟನ್ನು ರಚಿಸಿರುವುದು ವಿಜಿಲೆನ್ಸ್ ಇಲಾಖೆಯ ಅಡಿಯಲ್ಲೇ. ವಿಚಿತ್ರವೆಂದರೆ, ಈ ವಿಚಾರ ಸ್ವತಃ ವಿಜಿಲೆನ್ಸ್ ಇಲಾಖೆಗೇ ತಿಳಿದಿಲ್ಲ. ಸಿಬಿಐನವರು ಫೀಡ್'ಬ್ಯಾಕ್ ಯೂನಿಟ್'ನ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ನೀಡಬೇಕೆಂದು ವಿಜಿಲೆನ್ಸ್ ಇಲಾಖೆಯನ್ನು ಕೇಳಿಕೊಂಡಾಗ ಈ ಮೇಲಿನ ವಿಚಾರ ತಿಳಿದುಬಂದಿದೆ. ತನ್ನ ಅಡಿಯಲ್ಲಿ ತನಗೇ ಗೊತ್ತಿಲ್ಲದೇ ಫೀಡ್'ಬ್ಯಾಕ್ ಘಟಕ ಕಾರ್ಯನಿರ್ವಹಿಸುತ್ತಿರುವುದನ್ನು ಕಂಡು ವಿಜಿಲೆನ್ಸ್ ಇಲಾಖೆಗೆ ಶಾಕ್ ಆಗಿದೆ.
2016ರ ಫೆಬ್ರವರಿಯಲ್ಲಿ ಗುಪ್ತಚಾರಿಕೆ ಕಾರ್ಯಕ್ಕೆಂದು ಪ್ರಾರಂಭಗೊಂಡ ಫೀಡ್'ಬ್ಯಾಕ್ ಘಟಕದ ಸಿಬ್ಬಂದಿ ಕಾರ್ಯನಿರ್ವಹಣೆಗೆ ಈವರೆಗೆ 40,82,982 ರೂಪಾಯಿ ಹಣ ವ್ಯಯವಾಗಿದೆ. ಹಾಜರಾತಿ ಆಧಾರದ ಮೇಲೆ ಸಂಭಾವನೆ ಇದ್ದು, ಘಟಕದ ಸಿಬ್ಬಂದಿಯ ಹಾಜರಾತಿ ಶೇ.100 ಇದೆ. ನಿವೃತ್ತ ಗುಪ್ತಚರ ಅಧಿಕಾರಿಗಳು ಇರುವ ಘಟಕದ ಸಿಬ್ಬಂದಿಯವರಿಗೆ 1 ಕಾರು, 2 ಎಸ್'ಯುವಿ ಕಾರುಗಳು ಮತ್ತು 3 ಬೈಕುಗಳನ್ನು ಕೊಡಲಾಗಿದೆ. ಜೊತೆಗೆ, ಇವರಿಗೆ ಬೆಂಬಲವಾಗಿ 4 ಡೇಟಾ ಎಂಟ್ರಿ ಆಪರೇಟರ್'ಗಳನ್ನು ನೀಡಲಾಗಿದೆ. ಇವ್ಯಾವುದರ ಬಗ್ಗೆ ವಿಜಿಲೆನ್ಸ್ ಡಿಪಾರ್ಟ್'ಮೆಂಟ್'ಗೆ ಮಾಹಿತಿಯೇ ಇರಲಿಲ್ಲವೆನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.