ರೈತರ ಪಾಲಿನ ನಿಜವಾದ ಮಿತ್ರ ಧರ್ಮರೆಡ್ಡಿ : ಅಸಾಮಾನ್ಯ ಕನ್ನಡಿಗ

By Suvarna Web DeskFirst Published Oct 27, 2016, 4:51 PM IST
Highlights

ಟ್ರ್ಯಾಕ್ಟರ್ರಿಪೇರಿಮಾಡುವುದನ್ನೇಕಾಯಕಮಾಡಿಕೊಂಡಧರ್ಮರೆಡ್ಡಿಗೆಕ್ರಮೇಣರೈತರಸಮಸ್ಯೆಗಳಅರಿವಾಯಿತು. ತಮ್ಮಜಮೀನಿನಲ್ಲೂಅನೇಕಸಮಸ್ಯೆಗಳನ್ನುಸ್ವತಃಅನುಭವಿಸಿದ್ದರು. ಇವೆಲ್ಲದಕ್ಕೂಪರಿಹಾರಎನ್ನುವಂತೆಯಂತ್ರಗಳತಯಾರಿಕೆಗೆಕೈಹಾಕಿದರು. ಹಗಲುರಾತ್ರಿಯೋಚಿಸಿಸ್ಥಳೀಯಸಂಪನ್ಮೂಲಬಳಸಿಬಿತ್ತನೆಕೆಲಸಹಗುರಮಾಡುವಯಂತ್ರತಯಾರಿಸಿದರು.

ಅಪ್ಪನಿಂದ ಬಂದಿದ್ದ ಆಸ್ತಿ ಸಾಕಷ್ಟಿತ್ತು. ಕೈ ತುಂಬಾ ಸಂಬಳವೂ ಇತ್ತು. ಆದರೆ, ಯಾಕೋ ಕೆಲಸ ಮಾಡೋದಕ್ಕೆ ಇಷ್ಟ ಇರಲಿಲ್ಲ. ತಾನು ದುಡಿಮೆಗೆ ಹಾಕಿದ ಶ್ರಮ ನಾಲ್ಕು ಜನರಿಗೆ ಉಪಯೋಗವಾಗುವಂತಿರಬೇಕು ಎಂದು ಉದ್ಯೋಗ ಬಿಟ್ಟು ಬಂದಿದ್ದು ಹಳ್ಳಿಗೆ.

ಈಗ ಆತ ರೈತರ ಆಪತ್ಬಾಂಧವ.  ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅರೇಕುರಹಟ್ಟಿ ಗ್ರಾಮದ ಧರ್ಮರೆಡ್ಡಿ ಐಟಿಐ ಪದವೀಧರ. ಬೇರೆ ಕಡೆ ಕೆಲಸ ಮಾಡಲು ಮನಸ್ಸಿರಲಿಲ್ಲ. ಸರಿ ಊರಿಗೆ ಬಂದು ತೋಟ ನೋಡಿಕೊಳ್ಳತೊಡಗಿದರು. ಒಂದು ದಿನ ಟ್ರ್ಯಾಕ್ಟರ್ ಕೆಟ್ಟು ನಿಂತಾನ ಅದನ್ನು ರಿಪೇರಿ ಮಾಡುವ ಪ್ರಯತ್ನ ವಿಫಲವಾಯಿತು. ಅಂದೇ ಸಂಕಲ್ಪ ಮಾಡಿದ ಧರ್ಮರೆಡ್ಡಿ ಹಂತ ಹಂತವಾಗಿ ಯಂತ್ರೋಪಕರಣಗಳನ್ನು ತಮ್ಮ ಕೈವಶ ಮಾಡಿಕೊಳ್ಳತೊಡಗಿದರು.

ಟ್ರ್ಯಾಕ್ಟರ್ ರಿಪೇರಿ ಮಾಡುವುದನ್ನೇ ಕಾಯಕ ಮಾಡಿಕೊಂಡ ಧರ್ಮರೆಡ್ಡಿಗೆ ಕ್ರಮೇಣ ರೈತರ ಸಮಸ್ಯೆಗಳ ಅರಿವಾಯಿತು. ತಮ್ಮ ಜಮೀನಿನಲ್ಲೂ ಅನೇಕ ಸಮಸ್ಯೆಗಳನ್ನು ಸ್ವತಃ ಅನುಭವಿಸಿದ್ದರು. ಇವೆಲ್ಲದಕ್ಕೂ ಪರಿಹಾರ ಎನ್ನುವಂತೆ ಯಂತ್ರಗಳ ತಯಾರಿಕೆಗೆ ಕೈಹಾಕಿದರು. ಹಗಲು ರಾತ್ರಿ ಯೋಚಿಸಿ ಸ್ಥಳೀಯ ಸಂಪನ್ಮೂಲ ಬಳಸಿ ಬಿತ್ತನೆ ಕೆಲಸ ಹಗುರ ಮಾಡುವ ಯಂತ್ರ ತಯಾರಿಸಿದರು. ಆನಂತರ ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಮಾನವ ಸಹಾಯವಿಲ್ಲದೇ ಬಿತ್ತನೆ ಮಾಡುವ ರೀತಿ ವಿನ್ಯಾಸಗೊಳಿಸಿದರು. ನಂತರ ಎಲ್ಲ ಬಗೆಯ ಬೀಜಗಳನ್ನೂ ಬಿತ್ತಬಹುದಾದ ಯಂತ್ರ ತಯಾರಿಸಿದರು.

ಇದಾದ ಮೇಲೆ ಧರ್ಮರೆಡ್ಡಿ ಬೀಜದ ಗಾತ್ರಕ್ಕನುಗುಣವಾಗಿ ಅವುಗಳನ್ನು ಮೆಲ್ಲಗೆ ಹಿಡಿದು ಭೂಮಿಯೊಳಗೆ ಬಿಡಬಲ್ಲ ಚಕ್ರ ಅಳವಡಿಸಿದರು. ಈಗ ಈ ಯಂತ್ರ ಒಮ್ಮೆ ಖರೀದಿಸಿದರೆ ಸಾಕು, ಅದಕ್ಕೆ ಅನೇಕ ಮಾದರಿಯ ಚಕ್ರಗಳನ್ನು ಕೊಡಲಾಗುತ್ತದೆ. ಇದರಿಂದಾಗಿ ಶೆಂಗಾ, ಹತ್ತಿ, ಹೆಸರು, ಜೋಳ ಹೀಗೆ ಎಲ್ಲ ಬಗೆಯ ಬೀಜ ಬಿತ್ತನೆ ಮಾಡಬಹುದು. ಈ ಯಂತ್ರ ಅದೆಷ್ಟು ಪ್ರಸಿದ್ಧಿಯಾಯಿತೆಂದರೆ ಹೊರ ರಾಜ್ಯಗಳ ಜನರೂ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಧರ್ಮರೆಡ್ಡಿ ಆವಿಷ್ಕಾರ ಮಾಡಿದ ಮತ್ತೊಂದು ಯಂತ್ರ ಆಟೊಮ್ಯಾಟಿಕ್ ಸ್ಪ್ರೆಯರ್.

ಇದು ರೈತರ ಪಾಲಿಗೆ ಸಂಜೀವಿನಿ. ಕೀಟನಾಶಕ ದ್ರಾವಣ ಸಿಂಪಡಿಸುವ ಜತೆಗೆ ಜಮೀನಿನಲ್ಲಿ ಬೆಳೆದಿರುವ ಕಳೆಯನ್ನೂ ಕೀಳುತ್ತದೆ ಈ ಯಂತ್ರ. ಈ ಯಂತ್ರ ಸಿದ್ದಪಡಿಸಲು ಊಟ ನಿದ್ದೆ ಇಲ್ಲದೇ ಸತತ 98 ಗಂಟೆಗಳ ಕಾಲ ಕೆಲಸ ಮಾಡಿದ್ದರು. ಈ ಸ್ಪ್ರೆಯರ್ ಯಂತ್ರ ಚಲಿಸಲು ಬಳಸಿರುವ ಗಾಲಿ ದೊಡ್ಡದಾಗಿತ್ತು. ಇದರಿಂದಾಗಿ ಬೆಳೆ ಹಾಳಾಗುತ್ತದೆ ಎನ್ನುವ ಆತಂಕ ಶುರುವಾಯಿತು. ಆಗ ಚಂಡೀಗಢದಿಂದ ವಿಶೇಷ ಬಗೆಯ ಚಕ್ರಗಳನ್ನು ತರಿಸಿಕೊಂಡು ಅಳವಡಿಸಿದರು. ಇದರಿಂದಾಗಿ ಈ ಯಂತ್ರ ಜಮೀನಿನಲ್ಲಿ ಎಷ್ಟೇ ಓಡಾಡಿದರೂ ಬೆಳೆ ಹಾಳಾಗುವುದಿಲ್ಲ. ಹುಬ್ಬಳ್ಳಿ ಧಾರವಾಡದ ಪ್ರಾಂತ್ಯದ ನೂರಾರು ರೈತರು ಧರ್ಮರೆಡ್ಡಿಯವರ ಯಂತ್ರಗಳನ್ನು ಖರೀದಿಸಿ ಬಳಸುತ್ತಿದ್ದಾರೆ.

ಸ್ವಯಂ ರೈತ ಕುಟುಂಬದವರಾದ ಹಿನ್ನೆಲೆಯಲ್ಲಿ ಧರ್ಮರೆಡ್ಡಿ ತಮ್ಮ ಆವಿಷ್ಕಾರಗಳನ್ನೆಲ್ಲ ಅತ್ಯಂತ ಕಡಿಮೆ ಬೆಲೆಗೆ ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ರೈತನ ಕೆಲಸ ಹಗುರವಾದರೆ ಸಾಕು ಬೇರೆಗೂ ನನಗೆ ಅಗತ್ಯವಿಲ್ಲ ಎಂದು ವಿನಮ್ರವಾಗಿ ಹೇಳುತ್ತಾರೆ. ಧರ್ಮರೆಡ್ಡಿ ರೈತರ ಪಾಲಿಗೆ ನಿಜವಾದ ರೈತ ಮಿತ್ರರಾಗಿಬಿಟ್ಟಿದ್ದಾರೆ.   

click me!