ರೈತರಿಗೆ ಸಿಎಂ ಗುಡ್ ನ್ಯೂಸ್

By Web DeskFirst Published Jul 25, 2018, 3:19 PM IST
Highlights

ಈಗಾಗಲೇ ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡಿದ್ದು, ಈ ಸಂಬಂಧ ಬ್ಯಾಂಕುಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಅಲ್ಲದೇ ಬ್ಯಾಂಕುಗಳ ಅಧಿಕಾರಿಗಳು ಒಪ್ಪಿಗೆ ನೀಡಿದ್ದು, ಕಂತುಗಳಲ್ಲಿ ಮರುಪಾವತಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರು : ರಾಜ್ಯದ ರೈತರು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಮಾಡಿರುವ ಸಾಲವನ್ನು ಮನ್ನಾ ಮಾಡಲು ಬ್ಯಾಂಕುಗಳು ತಾತ್ವಿಕವಾಗಿ ಒಪ್ಪಿಗೆ ನೀಡಿದ್ದು, ಸರ್ಕಾರದಿಂದ ಮರುಪಾವತಿ ಹಾಗೂ ಕಂತುಗಳ ಕುರಿತಂತೆ ರೂಪರೇಷೆ ನಿರ್ಧರಿಸಲು ಉಪಸಮಿತಿ ರಚಿಸಲು ನಿರ್ಧರಿ ಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ. ಮಂಗಳವಾರ ವಿಧಾನಸೌಧದಲ್ಲಿ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಅವರು ಸುದ್ದಿ ಗಾರರೊಂದಿಗೆ ಮಾತನಾಡಿದರು.

ಬಜೆಟ್‌ನಲ್ಲಿ ಘೋಷಿಸಿರುವಂತೆ ರೈತರ ಸಾಲ ಮನ್ನಾ ಮಾಡಲು ಬದ್ಧವಾಗಿದೆ. ಸರ್ಕಾರಿ ಬ್ಯಾಂಕುಗಳ ಸಾಲ ಮನ್ನಾ ಕುರಿತಂತೆ ಮಂಗಳವಾರ ಬ್ಯಾಂಕುಗಳ ಅಧಿಕಾರಿಗಳ ಜೊತೆ ಸುದೀರ್ಘವಾಗಿ ಚರ್ಚಿಸಲಾಗಿದೆ. ನಾಲ್ಕು ಕಂತಿನಲ್ಲಿ ಸಾಲ ಮರುಪಾವತಿಸಲು ಸಹ ಬ್ಯಾಂಕುಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿವೆ. ಸಾಲ ಮನ್ನಾ ಜೊತೆಗೆ ರೈತರಿಗೆ ಹೊಸದಾಗಿ ಸಾಲ ನೀಡುವ ಬಗ್ಗೆ ಚರ್ಚಿಸಲಾಗಿದೆ. ಇಂದು ನಡೆದ ಸಭೆಯ ವಿವರಗಳ ಬಗ್ಗೆ ಬ್ಯಾಂಕಿನ ಆಡಳಿತ ಮಂಡಳಿ ಜೊತೆ ಚರ್ಚಿಸಲಾಗುವುದು ಎಂದು ಬ್ಯಾಂಕು ಅಧಿಕಾರಿಗಳು ತಿಳಿಸಿದ್ದಾರೆ ಎಂದರು. 

ಪ್ರತಿಯೊಬ್ಬರ ರೈತರ ಆಧಾರ್ ಕಾರ್ಡ್ ಮತ್ತಿತರ ದಾಖಲೆಗಳನ್ನು ಪರಿಶೀಲಿಸಿ ಅನರ್ಹ ರೈತರನ್ನು ಗುರುತಿಸಲಾಗುವುದು. ಈ ಎಲ್ಲ ಅಂಕಿ-ಅಂಶಗಳನ್ನು ಆಧರಿಸಿ ಸಾಲ ಮನ್ನಾ ಮಾಡಲಾಗುವುದು ಎಂದು ತಿಳಿಸಿದರು. ಸರ್ಕಾರಿ ಬ್ಯಾಂಕುಗಳಲ್ಲಿ ಇರುವ 37 ,159 ಕೋಟಿ ರು. ಚಾಲ್ತಿ ಖಾತೆಯಲ್ಲಿರುವ 9448 ಕೋಟಿ ರು. ಹಾಗೂ ಸಿದ್ದರಾಮಯ್ಯ ಸರ್ಕಾರದಲ್ಲಿ ಮನ್ನಾ ಮಾಡಿದ ಸಾಲದ ಮೊತ್ತ, ಸಾಲ ಮರು ಪಾವತಿ ಮಾಡಿರುವ ರೈತರಿಗೆ ನೀಡಲಿರುವ ಪ್ರೋತ್ಸಾಹ ಧನ ಸೇರಿ ಸುಮಾರು 50 ಸಾವಿರ ಕೋಟಿ ರು. ಸಾಲ ಮನ್ನಾ ಮಾಡುವ ಹೊಣೆಯನ್ನು ಸರ್ಕಾರ ಹೊತ್ತಿದೆ. 

ಮೂರ್ನಾಲ್ಕು ದಿನಗಳ ಹಿಂದೆ ಸಿದ್ದರಾಮಯ್ಯ ಸರ್ಕಾರದ ಸಾಲ ಮನ್ನಾ ಬಾಕಿ 1500 ಕೋಟಿ ರು.ಗಳನ್ನು ಸಹಕಾರಿ ಬ್ಯಾಂಕುಗಳಿಗೆ ಬಿಡುಗಡೆ ಮಾಡಲಾಗಿದೆ ಎಂದರು. ಸರ್ಕಾರ ಸಾಲ ಮನ್ನಾ ಬಗ್ಗೆ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದರೂ ರೈತರ ಸಾಲ ಮನ್ನಾ ಮಾಡುವ ವಿಷಯದಲ್ಲಿ ಸರ್ಕಾರ ಏನೂ ಮಾಡುತ್ತಿಲ್ಲ. ನಿಷ್ಕ್ರಿಯವಾಗಿದೆ ಎಂಬ ಅಪಪ್ರಚಾರಕ್ಕೆ ರೈತರು ಕಿವಿಗೊಡಬಾರದ ಎಂದು ಅವರು ಕೋರಿದರು.

click me!