
ಧಾರವಾಡ: ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆಯಾಗಿ ವರ್ಷ ಕಳೆದರೂ ಹಂತಕರ ಪತ್ತೆ ಮಾಡುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಕಲಬುರ್ಗಿ ಕುಟುಂಬ ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆಗಳು ಹೆಚ್ಚಿವೆ.
ಹಂತಕರ ಸುಳಿವು ಲಭಿಸಿದೆ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಬಹಿರಂಗ ಹೇಳಿಕೆ ನೀಡಿದ್ದರೂ ಈವರೆಗೆ ಸಿಐಡಿ ತನಿಖೆಯಲ್ಲಿ ಹೇಳಿಕೊಳ್ಳುವಂತ ಪ್ರಗತಿ ಕಾಣದಿರುವುದು ಕಲಬುರ್ಗಿ ಕುಟುಂಬ ಹೈಕೋರ್ಟ್ ಮೆಟ್ಟಿಲೇರುವ ವಾತಾವರಣ ಸೃಷ್ಟಿಸಿದೆ.
ಇದೇ ರೀತಿ ಹತ್ಯೆಯಾದ ವಿಚಾರವಾದಿ ನರೇಂದ್ರ ದಾಭೋಲ್ಕರ್ ಮತ್ತು ಕಾಮ್ರೇಡ್ ಗೋವಿಂದ ಪಾನ್ಸರೆ ಪ್ರಕರಣಗಳ ತನಿಖೆ ವಿಳಂಬವಾದಾಗ ಆ ಎರಡೂ ಕುಟುಂಬಗಳು ಮುಂಬೈ ಹೈಕೋರ್ಟ್‌ಗೆ ಮೊರೆ ಹೋಗಿದ್ದವು. ಈ ಕುಟುಂಬಗಳ ಮನವಿಗೆ ಸ್ಪಂದಿಸಿದ ಅಲ್ಲಿನ ಹೈಕೋರ್ಟ್ ಖಡಕ್ ನಿರ್ದೇಶನ ನೀಡಿದ್ದರಿಂದ ಸಿಬಿಐ ಡಾ. ವೀರೇಂದ್ರ ತಾವಡೆ ಮತ್ತು ಎಸ್‌ಐಟಿ ಸಮೀರ್ ಗಾಯಕವಾಡ್ ಅವರನ್ನು ಬಂಧಿಸಿ ತನಿಖೆ ಚುರುಕುಗೊಳಿಸಿವೆ. ಈ ಹಿನ್ನೆಲೆಯಲ್ಲಿ ವರ್ಷಗಟ್ಟಲೆ ಕೈಕಟ್ಟಿ ಕುಳಿತಿರುವ ರಾಜ್ಯ ಸರ್ಕಾರದ ಮೇಲೆ ವಿಶ್ವಾಸವಿಟ್ಟು ಸಮಯ ವ್ಯರ್ಥ ಮಾಡುವ ಬದಲು ಹೈಕೋರ್ಟ್ ಮೂಲಕ ಸರ್ಕಾರಕ್ಕೆ ನಿರ್ದೇಶನ ನೀಡಿಸುವುದು ಮತ್ತು ಹೈಕೋರ್ಟಿನ ಸುಪರ್ದಿಯಲ್ಲೇ ತನಿಖೆ ನಡೆಯಬೇಕೆಂದು ಕೋರಲು ಕಲಬುರ್ಗಿ ಕುಟುಂಬ ಚಿಂತನೆ ನಡೆಸಿದೆ.
ಮಂಗಳವಾರ ಇಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಹುತಾತ್ಮ ಗೋವಿಂದ ಪಾನ್ಸರೆ ಅವರ ಸೊಸೆ ಮೇಘನಾ ಪಾನ್ಸರೆ ‘ಕನ್ನಡಪ್ರಭ’ಕ್ಕೆ ಈ ವಿಷಯ ತಿಳಿಸುತ್ತ ವಿಚಾರವಾದಿಗಳ ಹತ್ಯೆ ಪ್ರಕರಣದಲ್ಲಿ ಮಹಾರಾಷ್ಟ್ರದಲ್ಲಿನ ಬಿಜೆಪಿ ಸರ್ಕಾರ ಮತ್ತು ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರಗಳ ಧೋರಣೆ ಒಂದೇ ಆಗಿದೆ. ಸರ್ಕಾರಗಳನ್ನು ನೆಚ್ಚಿಕೊಂಡು ಕುಳಿತರೆ ನ್ಯಾಯ ಸಿಗುವುದು ದುರ್ಲಭ. ಹಾಗಾಗಿ ನಮಗೆ ಉಳಿದಿರುವ ಮಾರ್ಗ ನ್ಯಾಯಾಲಯ ಒಂದೇ ಎಂದರು.
ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಮೂವರೂ ವಿಚಾರವಾದಿಗಳ ಕುಟುಂಬಗಳ ಸದಸ್ಯರು ಮತ್ತು ಕರ್ನಾಟಕದ ಹೆಸರಾಂತ ಸಾಹಿತಿಗಳೊಂದಿಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಂಡು ತನಿಖೆ ತೀವ್ರಗೊಳಿಸುವಂತೆ ಮನವಿ ಮಾಡಿದೆವು. ಆದರೆ ಈವರೆಗೆ ಸರ್ಕಾರದಿಂದ ಕಲಬುರ್ಗಿ ಕುಟುಂಬಕ್ಕೆ ಯಾವುದೇ ಭರವಸೆಯ ಮಾತುಗಳು, ತನಿಖೆಯ ಪ್ರಗತಿಯ ಹೆಜ್ಜೆಗಳು ಲಭಿಸಿಲ್ಲ. ಇನ್ನೂ ಸರ್ಕಾರದ ಮೇಲೆ ಭರವಸೆ ಇಟ್ಟು ಕೂಡ್ರುವುದು ಕಾಲಹರಣವಾಗುತ್ತದೆ ಅಷ್ಟೇ ಎಂದು ಮೇಘನಾ ಅಭಿಪ್ರಾಯಪಟ್ಟರು.
ಈ ದಿಸೆಯಲ್ಲಿ ನಾವು ಈಗಾಗಲೇ ಮುಂಬೈ ಹೈಕೋರ್ಟಿನಿಂದ ಸಣ್ಣ ಜಯ ಸಾಧಿಸಿದ ಅನುಭವದ ಮೇಲೆ ಕಲಬುರ್ಗಿ ಪ್ರಕರಣ ಕುರಿತಂತೆ ಕರ್ನಾಟಕ ಹೈಕೋರ್ಟ್‌ಗೆ ಮನವಿ ಸಲ್ಲಿಸಲು ಕಲಬುರ್ಗಿ ಕುಟುಂಬದ ಸದಸ್ಯರಿಗೆ ಮನವರಿಕೆ ಮಾಡುತ್ತಿದ್ದೇವೆ. ಅವರೂ ಚಿಂತನೆ ನಡೆಸಿದ್ದು, ಇಷ್ಟರಲ್ಲೇ ನಾವೆಲ್ಲ ಸೇರಿ ಒಂದು ನಿರ್ಧಾರಕ್ಕೆ ಬರುತ್ತೇವೆ ಎಂದರು.
ಸಂಸ್ಥೆಯ ಹೆಸರು ಘೋಷಿಸಲಿ:
ಪಾನ್ಸರೆ ಮತ್ತು ದಾಭೋಲ್ಕರ್ ಹತ್ಯೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪದ ಮೇಲೆ ಸಮೀರ್ ಗಾಯಕವಾಡ್, ಡಾ. ತಾವಡೆ ಅವರನ್ನು ಬಂಧಿಸಲಾಗಿದೆ. ಅವರಿಬ್ಬರೂ ಸನಾತನ ಸಂಸ್ಥೆಯೊಂದಿಗೆ ಆಪ್ತ ಸಂಬಂಧ ಹೊಂದಿರುವುದು ಸಾಬೀತಾಗಿದೆ. ಸಮೀರ್ ಮಾಡಿರುವ ಮೊಬೈಲ್ ಕರೆಗಳ ದಾಖಲೆ ಇವೆ. ಇಷ್ಟಾಗಿಯೂ ಕೇಂದ್ರ ಮತ್ತು ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುವ ಬಿಜೆಪಿ ಆ ಸಂಸ್ಥೆಯ ವಿರುದ್ಧ ಚಕಾರ ಎತ್ತುತ್ತಿಲ್ಲ. ಹೇಗಾದರೂ ಮಾಡಿ ಈ ಎರಡೂ ಪ್ರಕರಣ ಮುಚ್ಚಿ ಹಾಕುವ ಉತ್ಸಾಹದಲ್ಲಿವೆ. ಹೈಕೋರ್ಟ್ ನಿರ್ದೇಶನವಿದೆ ಎನ್ನುವ ಕಾರಣಕ್ಕೆ ಸುಮ್ಮನಿವೆ. ಆದರೆ ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರಕ್ಕೆ ಕೋಮುವಾದಿ ಸಂಘಟನೆಗಳ ವಿರುದ್ಧ ಕ್ರಮ ಕೈಕೊಳ್ಳಲು ಏಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದ ಮೇಘನಾ, ಕಾಂಗ್ರೆಸ್ ಕೂಡ ವಿಚಾರವಾದ ವಿಷಯದಲ್ಲಿ ಬಿಜೆಪಿಯಂತೆಯೇ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
(ಕನ್ನಡಪ್ರಭ ವಾರ್ತೆ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.