
ಬೆಂಗಳೂರು(ಅ. 29): ಲೋಕಾಯುಕ್ತ ಹೋಯ್ತು, ಎಸಿಬಿ ಬಂತು, ಶುರುವಾಗಿದೆ ಹೊಸ ನಡುಕ. ಲೋಕಾಯುಕ್ತರ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದ ಪ್ರಕರಣಗಳಿಂದ ಲೋಕಾಯುಕ್ತಕ್ಕೆ ಮೆತ್ತಿಕೊಂಡಿರುವ ಕಳಂಕಗಳು ಇನ್ನೂ ಹೋಗಿಲ್ಲ. ಆಗ ಲೋಕಾಯುಕ್ತಕ್ಕೆ ನಡುಗುತ್ತಿದ್ದ ಅಧಿಕಾರಿಗಳು ಈಗ ಎಸಿಬಿಗೆ ನಡುಗುವಂತಾಗಿದೆ. ಹಾಗೆ ಎಸಿಬಿ ಹೆಸರಲ್ಲಿ ಬಂದಂಥ ಫೋನ್ ಕರೆಗಳಿಗೆ ಬೆಚ್ಚಿಬಿದ್ದ ಅಧಿಕಾರಿಗಳ ಎಕ್ಸ್'ಕ್ಲೂಸಿವ್ ಡೀಟೈಲ್ಸ್ ಸುವರ್ಣ ನ್ಯೂಸ್'ಗೆ ಸಿಕ್ಕಿದೆ. ಹೌದು.. ಎಸಿಬಿಯಿಂದ ಮಾತಾಡ್ತಿರೋದು ಅಂದರೆ, ಅಧಿಕಾರಿಗಳು ಗಢಗಢ ನಡುತ್ತಿದ್ದಾರೆ. ಶುರುವಾದ ಕೆಲವೇ ತಿಂಗಳಲ್ಲಿ ಎಸಿಬಿಗೂ ಕಳಂಕ ಅಂಟಿಕೊಂಡಿದೆ. ಇದು ಎಸಿಬಿ ಹೆಸರಲ್ಲಿ ನಡೆತ್ತಿರುವ ವಂಚನೆಯ ಕಥೆ. ಲೋಕಾಯುಕ್ತ ಸಂಸ್ಥೆಯ ‘ಜಂಟಿ ಆಯುಕ್ತ’ರ ಹೆಸರಿನಲ್ಲಿ ಹಣ ಸುಲಿಗೆ ಮಾಡುತ್ತಿದ್ದ ಪ್ರಕರಣಗಳು ಈಗ ಹಳತಾಗಿ ಹೋಗಿವೆ. ಲೋಕಾಯುಕ್ತ ಭಾಸ್ಕರರಾವ್ ರಾಜೀನಾಮೆ ನೀಡಿದದ್ದೂ ಆಗಿದೆ. ಜೈಲಿನಲ್ಲಿದ್ದ ಆರೋಪಿಗಳೆಲ್ಲ ಜಾಮೀನು ಪಡೆದು ಹೊರ ಬಂದಿದ್ದೂ ಆಗಿದೆ. ಈಗ ಅಂಥಧ್ದೇ ಸುಲಿಗೆ ದಂಧೆ ಎಸಿಬಿ ಹೆಸರಲ್ಲಿ ಶುರುವಾಗಿದೆ.
ಎಸಿಬಿ ಹೆಸರಲ್ಲಿ ಏನಾಗುತ್ತಿದೆ?
ಭ್ರಷ್ಟಾಚಾರ ನಿಗ್ರಹ ದಳದ ಎಸ್'ಪಿ, ಡಿವೈಎಸ್ಪಿಗಳ ಹೆಸರಲ್ಲಿ ಅಧಿಕಾರಿಗಳಿಗೆ ಕರೆ ಹೋಗುತ್ತೆ; ನಿಮ್ಮ ಮೇಲೆ ಭ್ರಷ್ಟಾಚಾರದ ದೂರು ಬಂದಿದೆ. ಸರಿ ಮಾಡಿಕೊಳ್ಳಿ ಅನ್ನೋ ಸಲಹೆ ಕೇಳಿ ಬರುತ್ತೆ; ಅಡ್ಜಸ್ಟ್ ಮಾಡಿಕೊಳ್ಳದಿದ್ದರೆ, ಎಸಿಬಿ ರೈಡ್ ಮಾಡಲಿದೆ ಅನ್ನೋ ಎಚ್ಚರಿಕೆಯೂ ಇರುತ್ತೆ. ಬೆಚ್ಚಿಬಿದ್ದ ಅಧಿಕಾರಿಗಳಿಗೆ ಯಾವ ಅಕೌಂಟ್‌ಗೆ ಎಷ್ಟು ಹಣ ಹಾಕಬೇಕು ಅನ್ನೋ ಡೀಟೈಲ್ಸ್ ಸಿಗುತ್ತೆ. ಭಯ ಬಿದ್ದ ಅಧಿಕಾರಿಗಳು ಅಕೌಂಟ್‌ಗೆ ಹಣ ಹಾಕಿ ಬದುಕಿದೆವು ಅಂದುಕೊಳ್ಳುತ್ತಿದ್ದಾರೆ
ಸುವರ್ಣ ನ್ಯೂಸ್ಗೆ ಮೂರು ಬ್ಲಾಕ್'ಮೇಲ್ ಕೇಸ್'ಗಳು ಸಿಕ್ಕಿವೆ. ಎರಡು ಜಿಲ್ಲೆಗಳಲ್ಲಿ ಎರಡು ಎಸಿಬಿ ರಾಂಗ್ ನಂಬರ್ ಕೇಸ್ ದಾಖಲಾಗಿದೆ. ಇನ್ನೊಂದು ಜಿಲ್ಲೆಯಲ್ಲಿ ಅಧಿಕಾರಿ ದೂರನ್ನೇ ಕೊಟ್ಟಿಲ್ಲದಿರುವುದು ಬೆಳಕಿಗೆ ಬಂದಿದೆ.
ACB ರಾಂಗ್ ನಂಬರ್ (ಕೇಸ್ 01)
ಹುಣಸೂರು ತಾ. ಪಂ. ಇಒ ಕೃಷ್ಣಕುಮಾರ್'ಗೆ ಕರೆ ಮಾಡಿದ್ದವನು ತಾನು ಎಸಿಬಿ ಡಿವೈಎಸ್'ಪಿ ಗಜೇಂದ್ರ ಪ್ರಸಾದ್ ಎಂದು ಹೇಳಿಕೊಳ್ಳುತ್ತಾನೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಬ್ಬರು ಪಿಡಿಓಗಳ ಮೇಲೆ ಆರೋಪವಿದ್ದು ಅದರ ವಿವರ ಬೇಕೆಂದು ಕೃಷ್ಣಪ್ರಸಾದ್'ರನ್ನು ಕೇಳುತ್ತಾನೆ. ಅಕೌಂಟ್ ನಂ. 310000101001411ಗೆ ಹಣ ಹಾಕಲು ಸೂಚಿಸುತ್ತಾನೆ. ಕೃಷ್ಣ ಪ್ರಸಾದ್ 90 ಸಾವಿರ ಹಣವನ್ನು ಆ ಅಕೌಂಟ್'ಗೆ ತುಂಬುತ್ತಾರೆ.
ಆದರೆ, ಗಜೇಂದ್ರ ಪ್ರಸಾದ್ ಅವರನ್ನು ಭೇಟಿ ಮಾಡಿದ ಮೇಲೆ ಕೃಷ್ಣಪ್ರಸಾದ್'ಗೆ ಸತ್ಯ ಗೊತ್ತಾಗುತ್ತದೆ. ವಾಸ್ತವವಾಗಿ ಗಜೇಂದ್ರ ಪ್ರಸಾದ್ ಅವರು ಮೈಸೂರಿನ ಎಸಿಬಿ ಡಿವೈಎಸ್'ಪಿ ಆಗಿದ್ದಾರೆ. ಕೃಷ್ಣಪ್ರಸಾದ್'ಗೆ ಇವರು ಫೋನ್ ಕಾಲ್ ಮಾಡಿಯೇ ಇರಲಿಲ್ಲ. ಗಜೇಂದ್ರ ಪ್ರಸಾದ್ ಹೆಸರಲ್ಲಿ ಬೇರೆ ಯಾರೋ ಫೋನ್ ಕಾಲ್ ಮಾಡಿದ ವಿಷಯ ತಿಳಿದುಬರುತ್ತದೆ.
ACB ರಾಂಗ್ ನಂಬರ್ (ಕೇಸ್ 02)
ಚಿಕ್ಕಬಳ್ಳಾಪುರ ಡಿಸಿ ಕಚೇರಿಯ ಯೋಜನಾಧಿಕಾರಿ ನರಸಿಂಹರಾಜು ಮತ್ತು ಗುಡಿಬಂಡೆ ತಹಶೀಲ್ದಾರ್ ನಂಜಪ್ಪ ಎಂಬುವರಿಗೆ ಬ್ಲ್ಯಾಕ್'ಮೇಲ್ ಕರೆ ಬರುತ್ತದೆ. 9481490926 ನಂಬರ್'ನಿಂದ ಕಾಲ್ ಮಾಡುವ ವ್ಯಕ್ತಿ ತನ್ನ ಹೆಸರು ಹೇಳದೇ ಎಸಿಬಿ ಡಿವೈಎಸ್'ಪಿ ಎಂದಷ್ಟೇ ಪರಿಚಯಿಸಿಕೊಳ್ಳುತ್ತಾನೆ. ತಮ್ಮ ಮೇಲೆ ದೂರುಗಳಿವೆ, ರಜೆ ಮೇಲೆ ತಾವು ಹೋಗಿ ಎಂದು ಆ ವ್ಯಕ್ತಿ ಬೆದರಿಸುತ್ತಾನೆ. ಕರೆ ಬಂದ ಆ ಮೊಬೈಲ್ ನಂಬರು ಕೆ.ಎಲ್.ಎಸ್.ಪಿ. ಎಂಬಿ ಪಾಟೀಲ್ ಎಂಬುವವರ ಹೆಸರಲ್ಲಿದೆ. ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ACB ರಾಂಗ್ ನಂಬರ್ (ಕೇಸ್ 03)
ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಇಬ್ಬರು ಅಧಿಕಾರಿಗಳಿಗೆ 9972069484 ನಂಬರ್'ನಿಂದ ಬ್ಲ್ಯಾಕ್'ಮೇಲ್ ಕರೆ ಬರುತ್ತದೆ. ತಾನು ಎಸಿಬಿ ಎಸ್ಪಿ ಪುಟ್ಟಮಾದಯ್ಯ ಎಂದು ಪರಿಚಯಿಸಿಕೊಳ್ಳುವ ಆ ವ್ಯಕ್ತಿ, "ನೀವು ಅಕ್ರಮ ಆಸ್ತಿ ಗಳಿಸಿದ್ದೀರಿ. ರೇಡ್ ಮಾಡಬೇಕು. ನನ್ನ ಬಳಿ ದಾಖಲೆಗಳಿವೆ" ಎಂದು ಹೇಳಿ, ತತ್'ಕ್ಷಣ ಬಂದು ಕಾಣುವಂತೆ ಬೆದರಿಕೆ ಹಾಕುತ್ತಾನೆ. ಜಯಪ್ರಕಾಶ್ ಸಿಂಗ್ ಎಂಬುವವರ ಹೆಸರಿನಲ್ಲಿರುವ ಅಕೌಂಟ್ ನಂ. 322421398988ಗೆ 90 ಸಾವಿರ ರೂ. ಹಣ ಹಾಕುವಂತೆ ಮೆಸೇಜ್ ಮಾಡುತ್ತಾನೆ. ಆದರೆ, ಈ ಅಧಿಕಾರಿ ಯಾವುದೇ ದೂರನ್ನು ದಾಖಲಿಸುವುದಿಲ್ಲ. ಮೇಲೆ ತಿಳಿಸಿದ ನಂಬರ್ ಇರೋದು ಲೋಕಾಯುಕ್ತ ಡಿವೈಎಸ್'ಪಿ ರಾಂ ಅನ್ನುವವರ ಹೆಸರಲ್ಲಿ. ಆದರೆ, ಅಚ್ಚರಿ ಎಂದರೆ ಈ ಹೆಸರಿನ ಅಧಿಕಾರಿಯೇ ಲೋಕಾಯುಕ್ತದಲ್ಲಿ ಇಲ್ಲ. ಬಹಳ ವ್ಯವಸ್ಥಿತವಾಗಿ ಸುಳ್ಳು ಹೆಸರಲ್ಲಿ ಇಂಥದ್ದೊಂದು ಕೃತ್ಯ ಎಸಗಲಾಗುತ್ತಿರುವುದು ಸ್ಪಷ್ಟವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.