ಕಾಫಿ, ಕಾಳು ಮೆಣಸಿನ ಬೆಲೆ ತೀವ್ರ ಕುಸಿತ

By suvarna Web DeskFirst Published Nov 26, 2017, 3:37 PM IST
Highlights

ಕಾಫಿ ಹಾಗೂ ಕರಿ ಚಿನ್ನ ಎಂದೇ ಕರೆಯಲಾಗುವ ಕಾಳು ಮೆಣಸು ಬೆಲೆ ಈ ವರ್ಷ ತೀವ್ರ ಕುಸಿದಿದೆ. ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಮಡಿಕೇರಿ (ನ.26): ಕಳೆದ ವರ್ಷ ಬರ ಮತ್ತು ವಿಯೆಟ್ನಾಂನಲ್ಲಿ ಅತಿವೃಷ್ಟಿಯ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅರೇಬಿಕಾ ಹಾಗೂ ರೊಬಸ್ಟಾ ಕಾಫಿ ಬೆಲೆ ಏರಿಕೆಯಾಗಿತ್ತು. ಇದರಿಂದ ಕಳೆದ ಬಾರಿ ದೇಶದ ಕಾಫಿಗೆ ಹೆಚ್ಚಿನ ಬೆಲೆ ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕಾಫಿ ಹಾಗೂ ಕರಿ ಚಿನ್ನ ಎಂದೇ ಕರೆಯಲಾಗುವ ಕಾಳು ಮೆಣಸು ಬೆಲೆ ಈ ವರ್ಷ ತೀವ್ರ ಕುಸಿದಿದೆ. ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕಾಫಿಗೆ ಹೆಚ್ಚಿನ ಬೇಡಿಕೆ ಇದ್ದ ಹಿನ್ನೆಲೆಯಲ್ಲಿ ಕಳೆದ ವರ್ಷ ನವೆಂಬರ್ ತಿಂಗಳ ಅವಧಿಯಲ್ಲಿ ಅರೇಬಿಕಾ 50 ಕೆ.ಜಿ. ತೂಕದ ಚೀಲಕ್ಕೆ 9020 ರು. ಬೆಲೆ ಇತ್ತು. ಆದರೆ ಈ ಬಾರಿ ಚೀಲಕ್ಕೆ 6950 ರು. ಮಾತ್ರ ಇದೆ.

2016ರಲ್ಲಿ ರೊಬಸ್ಟಾ ಪಾರ್ಚ್‌'ಮೆಂಟ್ 50 ಕೆ.ಜಿ ತೂಕದ ಚೀಲಕ್ಕೆ 6400 ರು. ಇದ್ದರೆ, ಈ ಬಾರಿ 5750 ರು. ಬೆಲೆ ಇದೆ. ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಕಾಫಿ ಕೊಯ್ಲು ಆರಂಭವಾಗಿದೆ. ಬೆಲೆ ಕುಸಿತದಿಂದಾಗಿ ಕಾಫಿ ಬೆಳೆಗಾರರು ನಷ್ಟದ ಭೀತಿಯಲ್ಲಿದ್ದಾರೆ. ಕೊಡಗು ಜಿಲ್ಲೆಯಲ್ಲಿ 1006 ಚದರ ಕಿ.ಮೀ ವ್ಯಾಪ್ತಿಯಲ್ಲಿ ಕಾಫಿ ಬೆಳೆಯಲಾಗುತ್ತಿದೆ. 900 ದೊಡ್ಡ ಬೆಳೆಗಾರರು ಹಾಗೂ ಅಂದಾಜು 44000 ಮಂದಿ ಸಣ್ಣ ಬೆಳೆಗಾರರಿದ್ದಾರೆ. ಕೊಡಗು ಜಿಲ್ಲೆಯಲ್ಲಿ ವಾರ್ಷಿಕ ಕಾಫಿ ಉತ್ಪಾದನೆ 1.20 ಲಕ್ಷ ಟನ್‌ಗಳಿಷ್ಟಿದೆ. ಇದು ದೇಶದ ಒಟ್ಟು ಕಾಫಿ ಉತ್ಪಾದನೆಯ ಶೇ.30ರಷ್ಟಿದೆ. ಸೋಮವಾರಪೇಟೆ ತಾಲೂಕು ದೇಶದಲ್ಲೇ ಅತ್ಯಂತ ಹೆಚ್ಚು ಅರೇಬಿಕಾ ಕಾಫಿ ಬೆಳೆಯುವ ತಾಲೂಕಾಗಿದೆ. ಇಲ್ಲಿನ ವಾರ್ಷಿಕ ಉತ್ಪಾದನೆ 18200 ಟನ್‌ಗಳು. ಒಂದು ಲಕ್ಷ ಟನ್‌ಗಳಷ್ಟು ರೊಬಸ್ಟಾ ಕಾಫಿ ಜಿಲ್ಲೆಯಿಂದ ಉತ್ಪಾದನೆಯಾಗುತ್ತಿದೆ.

ಕರಿ ಚಿನ್ನಕ್ಕೂ ಡಿಮ್ಯಾಂಡ್ ಇಲ್ಲ : ಬಂಗಾರದ ಬೆಲೆಯಿಂದಲೇ ಕರಿ ಚಿನ್ನ ಎಂದು ಕರೆಯಲಾಗುವ ಕಾಳು ಮೆಣಸಿನ ಬೆಲೆ ಕೆಜಿಯೊಂದಕ್ಕೆ 380 ರುಪಾಯಿಗೆ ಕುಸಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಾಳು ಮೆಣಸು ಬೆಲೆ 600-650 ರುಪಾಯಿ ಇತ್ತು. ಈ ಬಾರಿ ಜಿಲ್ಲೆಯ ಕೆಲವೆಡೆಗಳಲ್ಲಿ ಕಾಳು ಮೆಣಸು ಉತ್ತಮ ಫಸಲಾಗುವ ಸಾಧ್ಯತೆಗಳಿವೆ.ಆದರೆ ಬೆಲೆ ಕಡಿಮೆಯ ಪರಿಣಾಮ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಪರಿಸ್ಥಿತಿ ಬೆಳೆಗಾರರದ್ದು.

ರೊಬಸ್ಟಾ ಕಾಫಿ ಶೇ.10ರಷ್ಟು ಕುಸಿತ: ಕಳೆದ ವರ್ಷ ಮಳೆಯ ಪರಿಣಾಮ ಈ ಬಾರಿ ಶೇ.10ರಷ್ಟು ರೊಬಸ್ಟಾ ಕಾಫಿ ಫಸಲು ಕುಸಿತ ಕಂಡಿದೆ. ವಿರಾಜಪೇಟೆ ತಾಲೂಕಿನಲ್ಲಿ ಅತಿ ಹೆಚ್ಚು ರೊಬಸ್ಟಾ ಕಾಫಿ ಬೆಳೆಯಲಾಗುತ್ತಿದೆ. ಆದರೆ ಈ ಬಾರಿ ಬೆಲೆಯೂ ಕುಸಿದಿದೆ, ಫಸಲೂ ಕಡಿಮೆಯಾಗಿದೆ. ಬೆಳೆಗಾರರಿಗೆ ಆತಂಕ ಶುರುವಾಗಿದೆ. ಈ ವರ್ಷ ಶೇ.10ರಷ್ಟು ರೊಬಸ್ಟಾ ಫಸಲು ಕುಸಿದಿದೆ ಎಂದು ಕಾಫಿ ಮಂಡಳಿ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ವರದಿ:  ವಿಘ್ನೇಶ್ ಎಂ. ಭೂತನಕಾಡು - ಕನ್ನಡಪ್ರಭ

click me!