
ನವದೆಹಲಿ(ಫೆ.22): ಖೋಟಾನೋಟು ಮತ್ತು ಕಪ್ಪುಹಣ ಹಾವಳಿ ತಡೆಯಲೆಂದೇ 500 ರೂ ಹಾಗೂ 1000 ರೂ ನೋಟುಗಳನ್ನು ರದ್ದುಗೊಳಿಸಿ ಹೊಸ 500 ರೂ ಹಾಗೂ 2000 ರೂ ನೋಟುಗಳನ್ನು ಚಲಾವಣೆಗೆ ತರಲಾಗಿದೆ. ಆದರೆ ದೇಶದ ಅತಿದೊಡ್ಡ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್'ನ ದಿಲ್ಲಿಯ ಎಟಿಎಂ ಒಂದರಲ್ಲಿ 2000 ರೂ ನಕಲಿ ನೋಟುಗಳು ಬರುವ ಮೂಲಕ ಸರ್ಕಾರಕ್ಕೆ ಮುಜುಗರವಾಗಿದೆ.
ಈ ನೋಟುಗಳನ್ನು ಯಾರೋ ಕಿಡಿಗೇಡಿಗಳು ಮುದ್ರಿಸಿದ್ದು, ಅದರ ಮೇಲೆ ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ ಎಂಬುದರ ಬದಲು ‘ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಮುದ್ರಿಸಲಾಗಿದೆ. ಅಲ್ಲದೆ, ‘ಗ್ಯಾರಂಟೀಡ್ ಬೈ ಇಂಡಿಯನ್ ಗವರ್ನ್‌ಮೆಂಟ್’ ಎಂಬುದರ ಬದಲು ‘ಗ್ಯಾರಂಟೀಡ್ ಬೈ ಚಿಲ್ಡ್ರನ್ಸ್ ಗವರ್ನ್‌ಮೆಂಟ್’ ಎಂದೂ ಬರೆಯಲಾಗಿದೆ. ಅಲ್ಲದೆ, ಮೂಲ ನೋಟಿನಲ್ಲಿರುವ ಅಂಶಗಳೂ, ಇದರಲ್ಲಿರುವ ಅಂಶಗಳೂ ಸಾಕಷ್ಟು ವ್ಯತ್ಯಾಸ ಇರುವುದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಗೊತ್ತಾಗುತ್ತದೆ.
ದಕ್ಷಿಣ ದಿಲ್ಲಿಯ ಸಂಗಮ್'ವಿಹಾರ್ ಪ್ರದೇಶದ ಎಸ್'ಬಿಐ ಎಟಿಎಂನಲ್ಲಿ ಈ ನೋಟುಗಳು ಫೆಬ್ರವರಿ 6ರಂದು ಓರ್ವ ಕಾಲ್'ಸೆಂಟರ್ ಉದ್ಯೋಗಿಗೆ ಲಭಿಸಿದೆ. ಅವರು 8 ಸಾವಿರ ರೂ ವಿತ್'ಡ್ರಾ ಮಾಡಿದಾಗ ಅದರಲ್ಲಿ ಎಲ್ಲ ನೋಟುಗಳೂ ನಕಲಿಯಾಗಿದ್ದವು. ಕೂಡಲೇ ಅವರು ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ದೂರು ನೀಡಿದರು.
ಬಳಿಕ ಈ ದೂರನ್ನು ಖಚಿತಪಡಿಸಿಕೊಳ್ಳಲು ಪೊಲೀಸ್ ಪೇದೆಯೊಬ್ಬರು ಅದೇ ಎಟಿಎಂಗೆ ತೆರಳಿ 2000 ರೂ ನೋಟನ್ನು ವಿತ್'ಡ್ರಾ ಮಾಡಿದಾಗ ಅವರಿಗೂ ಅದೇ ‘ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ’ ನೋಟು ಲಭಿಸುವ ಮೂಲಕ ಚಕಿತಗೊಳಿಸಿತು ಎಂದು ಮೂಲಗಳು ಹೇಳಿವೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಇವು ಎಟಿಎಂನಲ್ಲಿ ಹೇಗೆ ಬಂದವು ಎಂಬುದರ ತನಿಖೆ ಆರಂಭವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.